ತುಂಬಿಲ್ಲವಿನ್ನು ಜೋಳಿಗೆ
ಮತ್ತದು ಎಂದಿಗೂ ತುಂಬದು
ಅವರಿವರು ಅಷ್ಟಷ್ಟು ಕೊಟ್ಟಷ್ಟು
ತೃಷೆ ಮಿಗುವುದೇ ಹೊರತು
ಇಂಗದದು ಜೋಕೆ?
ಕರೆದು ನೀಡುವೆನೆನುವ
ಮಂದಿ ನಂಬಿ ನಿಂತಿರೋ,
ಹೊಂಚಿದ್ದು ತಲೆ ಮೇಲೆ
ಮೆಣಸು ಅರೆಯದೆ ಬಿಡರು ಜೋಕೆ?
ಜೋಳಿಗೆ ಹರಿದ ಗೋಣಿಯಾದೀತು
ಬಿಕ್ಕೆ ಇಕ್ಕಿದ ಬತ್ತ ಸೋರಿ ಹೋದೀತು.
ಮತ್ತೊಮ್ಮೆ ಜೋಕೆ?
ಅಜ್ಞಾನದ ಹಾಸು ಹಚ್ಚಡ
ಹೊದ್ದು ಗೊರಕೆ ಹೊಡೆಯುತ್ತ
ಮತ್ತೆ ಢಂಬದಾ ಡೌಲು
ಬಡೆದಿರೋ ಜೋಕೆ?
ಓಡಗೊಡಬೇಕು ಕಾಲದಾ
ಕುದುರೆಯ ಜೀನು ಜೀಕುತ್ತ
ಸತ್ಸಂಗ ಸಾಹಿತ್ಯ ಪರಿಮಳವ ಹೀರುತ್ತ
ಆದರೂ ತುಂಬಿಲ್ಲವಿನ್ನು ಜೋಳಿಗೆ
ಮತ್ತದು ಎಂದಿಗೂ ತುಂಬದು
ತುಂಬಿತೆಂದಿರೋ ಜೋಕೆ?
ತಕ್ಕುದಲ್ಲ ಆ ಜೋಳಿಗೆ ನಿಮ್ಮ ಹೆಗಲಿಗೆ.
*****