೧
ನಾವು ಪುಟ್ಟ ಹುಡುಗಿಯಾಗಿದ್ದಾಗ
ಆಕಾಶಗೊಳಗೆ ಬೆಂಕಿಯಂತಹ
ನೋವಿದೆಯೆಂದು ಗೊತ್ತಿರಲಿಲ್ಲ.
ಮಳೆ ಸೂರ್ಯನ ಕಣ್ಣೀರು
ಎಂದು ಗೊತ್ತಿರಲಿಲ್ಲ.
ಗಡಗಡ ಎಂದು ಭೂಮಿ
ನಡುಗುವುದು ಅವಮಾನದಿಂದ
ಎಂದು ಗೊತ್ತಿರಲಿಲ್ಲ.
ಗೊತ್ತಿದ್ದರೆ….
ಈಡೇರದ ಆಸೆಗಳ ಮೇಲೆ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.
ಐದು ನಯಾಪೈಸೆಗಾಗಿ
ಆಟದ ಬೊಂಬೆಗಾಗಿ
ಬೆಲ್ಲದ ಮಿಠಾಯಿಗಾಗಿ
ಜರಿ ಲಂಗಕ್ಕಾಗಿ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.
೨
ನನ್ನ ಗೆಳತಿಯರಿಗೆ
ಶ್ರೀಮಂತ ರೆಕ್ಕೆಗಳಿದ್ದವು
ಅವರು ಹಾರುತ್ತಿದ್ದರು
ಹದ್ದುಗಳಂತೆ ಎತ್ತರದಲ್ಲಿ.
ನಾನೋ ನಿಲ್ಲುತ್ತಿದ್ದೆ ಒಂಟಿಯಾಗಿ
ಆಟದ ಕುದುರೆ ಸಹ
ಏರಲಾಗದೆ ಖಾಲಿ ಖಾಲಿ.
ನನ್ನ ಗೆಳತಿಯರು ಅದೆಷ್ಟೊ
ಸಂತೋಷದ ಚಿಟ್ಟೆಗಳನ್ನು
ಸೃಷ್ಟಿಸುತ್ತಿದ್ದರು ನನ್ನೆದುರಲ್ಲಿ.
ನಾನು ಗುಬ್ಬಚ್ಚಿಯಾಗಿ
ಅಣಬೆಯಾಗಿ
ಅಪ್ಪಚ್ಚಿಯಾಗಿ ನೆಲದಲ್ಲಿ
ಹೊರಳುತ್ತಿದ್ದೆ ಹತಾಶೆಯಲ್ಲಿ.
ನನಗೂ ಜೊತೆಗಾರರಿದ್ದರು.
ಮಾತಾಡದ ರೈಲು ಹಳಿಗಳು
ಪುಟಿಯುವ ಹೊಂಡದ
ಮೀನುಗಳು
ಹುರಿದ ಹುಣಿಸೆಬೀಜಗಳು
ಚೌಕ-ಭಾರಗಳು.
ನನಗೆ ಎಷ್ಟೊ ಸಲ
ಅನಿಸುತ್ತಿತ್ತು
ಇಡಿ ಪ್ರಪಂಚವೆ
ನಗುವನ್ನು ನನ್ನ ಮುಖದ
ಮೇಲೆ ಉಗುಳಿದ ಹಾಗೆ
ಆಗೆಲ್ಲ ನಾನು ಮುಖಮುಚ್ಚಿಕೊಂಡು
ಇಳಿಯುತ್ತಿದ್ದೆ ನನ್ನೊಳಗೆ.
೩
ಈಗ ನಾನು ದೊಡ್ಡವಳಾಗಿದ್ದೇನೆ.
ತಾರೆಯರನ್ನು ಕಿತ್ತು
ಮಡಿಲಿಗೆ ಹಾಕಿಕೊಳ್ಳುವಷ್ಟು
ಎತ್ತರ ಬೆಳೆದಿದ್ದೇನೆ.
ಒಂಟಿಯಾಗಿ ಸುತ್ತುತ್ತಿರುವ
ಹದ್ದುಗಳೀಗ ನೋಡುತ್ತಿವೆ.
ನನ್ನನ್ನು
ಸುಮ್ಮನೆ ನೋಡುತ್ತಿವೆ.