ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ
ಲೋಲ ಸದ್ಗುರುನಾಥನೋಲಗದಿ || ಪ ||
ಕೀಲಕುಂಡಲಿ ಬಲಿದು ಮರುತನ
ಮೇಲಕೆಬ್ಬಿಸಿ ನಿಂತು ನಿಜನಲಿ
ಮೂಲ ಬ್ರಹ್ಮಾಲಯ ತುದಿನವ-
ಮಾಲಿನೊಳು ನೆಲಸಿರ್ಪ ದೇವಿಗೆ || ೧ ||
ಮಡಿಉಟ್ಟು ಮೈಲಿಗಿಕಡಿಗಿಟ್ಟು ಕೈಯಲಿ
ಬಿಡದೆ ಪಂದಳಗಿಯ ಪಿಡಿದುಕೊಂಡು
ಧೃಢದಿ ಮಂತ್ರವ ನುಡಿದು ಸಾಕ್ಷಾತ್ ನದಿಗಳಿಗೆ ನೈವೇದ್ಯವನರ್ಪಿಸಿ
ಸಡಗರದ ಸುವರ್ಣಪೀಠದ ಗುಡಿಯೊಳು ಅಡಗಿರ್ಪ ದೇವಿಗೆ || ೨ ||
ಕುಸುಮಗಂಧಿಯರು ಸಂತೋಷದಿಂದ ಕೂಡುತ
ಎಸೆವ ಸುಗಂಧ ಪತ್ರಿಯ ಧರಿಸಿ
ಶಶಿಕಿರಣ ತೇಜಃಪ್ರಕಾಶದ ಪಸರಿನೊಳು ಪರದೇಶಿ ಎನಿಸಿದ
ವಸುಧಿಯೊಳು ಶಿಶುನಾಳಧೀಶನ ಬೆಳಕಿನೊಳು ಬೆಳಗುತಿಹ ದೇವಿಗೆ || ೩ ||
*****