ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ
ಅರ್ಥಿಲೆ ಶ್ರೀ ವೀರಭದ್ರನಿಗೆ || ಪ ||
ಗಿರಿಜಹರ ಶ್ರೀ ವರಕುಮಾರಗೆ
ಸರಸಿಜಾಕ್ಷಿಯರೆಲ್ಲ ಬಂದು
ಸರಿಗಮವನ್ನು ಪಾಡುತ ಧೀರ ಶ್ರೀವರ ವೀರಭದ್ರಗೆ || ಅ. ಪ. ||
ಕಿಡಿಗಣ್ಣು ಕೆಂಜಡಿ ನೊಸಲಿನೊಳು ವಿಭೂತಿ
ನಿನ್ನಯ ಪಾದ ಕೊರವಿಯ ಸಾಲು ಒಪ್ಪುವದು ಚಂದಾ
ಕಡಗ ಕಂಕಣ ತೋಳಬಾಪುರಿ ಕರ್ಣಕುಂಡಲದಿಂದ ಒಪ್ಪುತ
ಮಂಡಲಕ ಪತಿಹರನ ಬಲನೇತ್ರದಲಿ ಜನಿಸಿದ ವೀರಭದ್ರನಿಗೆ || ೦ ||
ಹರನ ಅಪ್ಪಣೆಯಿಂದ ಭರದ ವೀರಗಾಸಿ ತೊಟ್ಟು
ಛಲದಿ ದಕ್ಷನ ಕೊಂದ ದೇವಾ
ದೇವ-ದಾನವರೊಳಗೆ ಬಹುಶಮಶೂರನೆನಸಿದ ವೀರಭದ್ರಗೆ
ನಳಿನಮುಖಿಯರು ಬಂದು ಪಂಚದಾರುತಿ ಪಿಡಿದು ಜಪಿಸುತ || ೨ ||
ಉಗ್ರಮೂರುತಿ ವೀರಭದ್ರಗೆ
ಪ್ರಳಯಕಾಲದ ರುದ್ರನೆಂದು ಅವತಾರ ಶ್ರೀ ಜಗದೀಶಗೆ
ಪೊಡವಿಯೊಳು ಶಿಶುನಾಳನೆನಿಪ ಒಡೆಯ ಸದ್ಗುರುನಾಥನೊಲವಿಲೆ
ಇಳೆಯೊಳಗೆ ಸೊರಟೂರ ಗ್ರಾಮದಿ ನೆಲಸಿದಂಥಾ ಶ್ರೀ ವೀರಭದ್ರಗೆ || ೩ ||
*****