ಕಡುಬಿಸಿಲ ಬೇಸಿಗೆಯ ರೌದ್ರರೂಪದ ಯುರಿಯು
ಝಳವಾಗಿ ಜುಳು ಜುಳನೆ ಇಳಿಯುತಿದೆ
ಜಲಧರನ ರಾಜ್ಯದಾಚೆಯಾ ಗಡಿಯ ರವಿಯು
ಸುರಿಸುವದೊ? ರಸವಲ್ಲ! ಬಿಸಿಲು ಉಸಿರಾಗಿದೆ
ಕೆಂಡದಾ ಹೂವೊಂದು ಟೊಂಗೆ ಗಿಡವಿಲ್ಲದೆಯೇ
ಅರಳಿಹುದು; ತಾಪದಾ ಪರಿಮಳವ ಸುರಿಸಿಹುದು
ತನ್ನ ಬಣ್ಣವ ನೋಡಬಂದಿಹ ಜಗದ ಕಣ್ಣು ನೋಡದೆಯೆ
ಹೊರಳಿಹುದು; ಅನಿತೊಂದು ಆಟೋಪ ಬೀರಿಹುದು
ಮೋಡ ಮಾತೆಯರೆಲ್ಲ ಕಿರಿಯ ಕೂಸುಗಳೊಡನೆ
ಓಟಕಿತ್ತಿಹರು ಕ್ಷಿತಿಜದಾಚೆಯಾ ಗಿರಿಗೆ
ನೆರಳಿಲ್ಲ, ನೆಲವಿಲ್ಲ. ಬಳಲುತೆ, ಪೊರೆವರನರಸುತೆ
ತಾವೇ ನೆರಳನಿತ್ತಿಹರು, ಬಸವಳಿಪ ಭೂದೇವಿಗೆ
ನೆಲ-ಕಲ್ಲು ಕಾದಿಹವು, ಗಿಡ-ಬಳ್ಳಿ ಬಾಯ್ಬಿಡುತಿಹವು
ಊರು-ದಾರಿಗಳೆಲ್ಲ ತಲೆತಿರುಗಿ ಬಿದ್ದಿಹವು
ಅರಿವಿಲ್ಲದಂತಿಹವು ಹಿರಿಕಿರಿಯ ಗಿರಿಗಳೆಲ್ಲವು
ನಲಿದು ನರ್ತಿಸಿದ ಭಂಗಗಳು ಮರೆಯರಸಿಹವು
ನಗೆಇಲ್ಲ, ನಲವಿಲ್ಲ ಉಲಿವಿಲ್ಲ, ಮೌನ ತುಂಬಿದೆ
ಅನ್ನ-ನೀರನು ಹಸಿದೊಡಲು ಹುಡುಕುತಿದೆ
ರಸಿಕ ರಸ ಸೃಷ್ಟಿ ಹರುಷ ಸುಖವೆಲ್ಲ ಆಳಿದಿದೆ
ಬಿಸಿಲ ಬೇಗೆಯ ನಾಟ್ಯ ಸುತ್ತು ನಡೆದಿದೆ
*****