ದೇವಲೋಕದ ಹೂವು ಭೂಲೋಕಕಿಳಿದಂತೆ
ಭಾವವೆನ್ನೊಳಗೆ ಬಂತು
ಸಾವಿಗಂಜಲು ಬೇಡ ಪರರಿಗಳುಕಲು ಬೇಡ
ನೋವುಂಟೆ ಬಕುತರಿಗೆ? ಹಸುಳೆ ಕೇಳೆಂದು
ಸಾಲು ದೀವಿಗೆಯಂತೆ ತಾರೆ ನೆಲಕಿಳಿದಂತೆ
ಪೊಳೆವ ಮಾಣಿಕ್ಯದಂತೆ
ಕೋಲು ಮಿಂಚೊಡೆದಂತೆ ಫಕ್ಕನೇ ನಕ್ಕಂತೆ
ಬೆಳಕು ನೋಡೆಲೆ ಜೀವಿ ನಿನ್ನೊಳಗೆ ಎಂದು
ಕಲ್ಯಾಣ ಮಂಟಪದಿ ಕಳಶ ಕನ್ನಡಿ ಹಿಡಿದು
ಉಲ್ಲಾಸದಿಂದ ಸುಳಿದು
ಸಲ್ಲಿಸುತೆ ಸೇವೆಯನು ಗಡಿಯ ಸೇರುವೆ ನೀನು
ಇಲ್ಲೆ ಮಂಗಳವಿರಲು ತಡವೇತಕೆಂದು
ಮನಗಳನು ಶ್ರುತಿಮಾಡಿ ಮದವನೆಳೆದೀಡಾಡಿ
ಅನವರತ ಸ್ತುತಿಯ ಮಾಡಿ
ಸನಕಾದಿ ಮುನಿವರರು ಅಭಯಗಳ ಪಡೆದಿಹರು
ಜನಕಜೇ ಕೇಳೆಂದು ಏಳು ಏಳೆಂದು
*****