ಶ್ರೀಮಾನ್ ದ ರಾ ಬೇಂದ್ರೆಯವರಿಗೆ
ದೋಷರಾಹಿತ್ಯದಾ
ಕಲ್ಪನಾ ರಾಜ್ಯದೊಳು
ಸಗ್ಗದೂಟವನುಣುವ
ಹಿರಿಯ ಕಬ್ಬಿಗನೇ
ನಿನ್ನ ಕಾಣಲು ಬಯಸಿ
ಹಲವಾರು ದಿನಗಳಿಂ
ಇಣಿಕಿಣಿಕಿ ನೋಡುತಿದೆ
ಈ ಸಣ್ಣ ಮನವು
ಕವಿಯ ಬರೆಹವ ಕಂಡ
ರಸಬಿಂದುಗಳ ಸವಿಯೆ
ಸುಳಿಯುತಿದೆ ಭೃಂಗದೊಲು
ಭಾವವರಿಯದೆಯೆ
ಗುರಿಯ ನೆಟ್ಟಿಹ ತಾಣ
ದೊಗಟೆಯೊಡೆಯದೆ
ಅಣುವು ಧಾವಿಸಿದೆ
ದಿಕ್ಕು ತಪ್ಪಿ
ಕರೆಯದಾವುದೊ ಒಂದು
ಕೇಳುತಿದೆ ದೂರದೊಳು
ಬಾಳಿನೆಲೆಗಳ ನೆಗೆದು
ಬಾ ತಂಗಿಯೆಂದು
ಹರಿಯುತಿದೆ ಮಧುರಸದ
ಝರಿ ಎಲ್ಲೊ ಭೋರ್ಗರೆದು
ಬಳಿಸಾರಲಾಗದಾ
ಬಂಧನದ ಆಚೆ
ಮೇಳ ತಾಳದ ದಿವ್ಯ
ಝೇಂಕೃತದ ನಾದಗಳು
ಕೇಳಿ ಕೇಳಿಸದಾಗಿ
ಸಾಗುತಿಹುವು
ಭಾವಗಳ ಪರ್ವತದ
ಶ್ರೇಣಿಗಳ ಶಿಖರಗಳು
ಕಂಡು ಕಾಣಿಸದಾಗಿ
ಮೆರೆಯುತಿಹುವು
ಜಡ ಮನಕೆ ಚೇತನವ
ಕಲ್ಪಿಸುವ ಮಾನ್ಯ
ತೇಲಿಬಿಡು ಆ ನಿನ್ನ
ಭಾವಗಳನೊಮ್ಮೆ
ಆಳದೊಳು ಹೂಳಿರುವ ವಿಷಯಗಳ ಬಯಲಿಗಿಡು
ಮಾರ್ಗವಾವುದೊ ಕಂಡು ಮೆಲ್ಲನೆಯೆ
ಸಾಗುವಳು ಶಾಂತಿಯಿಂದೀ
ನಿನ್ನ ತಂಗಿ ಜನಕಜೆಯು
*****
೧೨-೦೧-೧೯೪೫