ಪಂಡಿತರ ಪಾಮರರ ಮನವನೊಲಿಸುತಲಿರುವೆ
ಕುದಿಯುತಿಹ ಆತ್ಮಕ್ಕೆ ಶಾಂತಿಯನು ಕೊಡುವೆ
ಕರೆದೊಯ್ವೆ ಎಲ್ಲಿಗೋ ಕಂಬನಿಯ ತರಿಸುವೆ
ಸರಿಯಿಲ್ಲ ನಿನಗಾರು ಸಂಗೀತವೆ!
ನಿರ್ಮಲದ ಹೃದಯಕ್ಕೆ ಭಕ್ತಿಯನು ಕರುಣಿಸುವೆ
ಭಾವದಲಿ ನಿಮಿಷದೊಳು ದೇವನನು ಕಾಣಿಸುವೆ
ಪ್ರೇಮಕ್ಕೆ ತಳಹದಿಯೆ ನೀನಾಗಿ ನಿಂತಿರುವೆ
ಏನಿಹುದೊ ನಿನ್ನೊಲುಮೆ ಸಂಗೀತವೆ!
ರೋದಿಸುವ ಶಿಸುಗಳಿಗೆ ಹೊಸ ಚೇತನವ ಕೊಡುವೆ
ಹಸುರು ಗರಿಕೆಯನಗಿವ ಪಶುಗಳನು ತಿರುಗಿಸುವೆ
ಹಸಿದಿರುವ ತಿರುಕರಿಗೆ ಆಶನವನು ದೊರಕಿಸುವೆ
ಜಗವೆಲ್ಲ ವಶ ನಿನಗೆ ಸಂಗೀತವೆ!
ಶುಭಕಾರ್ಯಗಳಿಗೆಲ್ಲ ನಾಂದಿಯಾಗಿರುವೆ
ಸಭೆಯೊಳಗೆ ಹಿರಿದಾಗಿ ಬಹುಮಾನ ತರುವೆ
ನೀನೊಲಿದ ಜನಗಳನು ಪೂಜ್ಯರಾಗಿಸುವೆ
ಪರಮ ಮಂಗಳಕರವೆ ಸಂಗೀತವೆ!
ನಾರದರ ತುಂಬುರರ ಜೀವ ನೀನಾಗಿರುವೆ
ತ್ಯಾಗರಾಜರ ಹೆಸರ ಸ್ಥಿರವಾಗಿ ನಿಲಿಸಿರುವೆ
ಕಾಳಸರ್ಪನ ತಲೆಯ ಬಿಚ್ಚಿ ಆಡಿಸಿ ಬಿಡುವೆ
ಆನಂದಮಯವಾದ ಸಂಗೀತವೆ!
ದೇವಸೃಷ್ಟಿಯೊಳೆಲ್ಲ ಹಿರಿದಾದ ಕಲೆಯೇ
ಸಕಲ ವಾದ್ಯಗಳಲ್ಲಿ ಮೆರೆದು ನಲಿಯುತಲಿರುವೆ
ರಸಿಕರೆಲ್ಲರ ಮನವ ಸೆಳೆದು ನಿಲ್ಲಿಸಿಬಿಡುವೆ
ಜನಕಜೆಗೆ ನೀ ಹಿತವೆ ಸಂಗೀತವೆ!
*****