ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ
ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ.
ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ!
ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ.
೧
ಒಲೆ ಮೇಲಿನ, ಹೊಸತು ಮಡಿಕೆ, ಕುದಿವ ಕಾಲದಿ
ಮೂಗರಳಿಸಿ, ಬಾಯಿ ಚಪ್ಪರಿಸಿ, ಜೊಲ್ಲು ಸುರಿಸಿದ ಯುಗಾದಿ
ಬೇಳೆ, ಬೆಲ್ಲ, ಶುಂಠಿ, ಏಲಕ್ಕಿ, ಮಾವು, ಬೇವು, ವಾಸನೆ ಘಮ್ಮನೇ…
ಮನೆ ಮನೆಗೂ, ಊರುಕೇರಿಗೂ ವಾಸನೆ! ಈಗ ಬರೀ ಸುಮ್ಮನೆ!!
೨
ರುಬ್ಬಾ ಗುಂಡಿಲಿ, ಹೂರಣ ರುಬ್ಬುವಾ, ಮನವೆ ಬೇರೆ, ಯುಗಾದಿ
ಮಿಕ್ಸಿ, ಯಂತ್ರ ಗುಂಡಿಲಿ, ಕ್ಷಣದಿ ಹೂರಣ, ಈಗಿನ ಯುಗಾದಿ!
ಸದ್ದು ಗದ್ದಲಿಲ್ಲ! ಬರೀ ತೋರಣಿಕೆಯ, ಯುಗಾದಿ…
ಯಂತ್ರ ಮಾನವ, ಹಳೆ ನೆನಪೀಗ, ಉಂಡ ತೃಪ್ತಿಯ ಯುಗಾದಿ!
೩
ಯುಗ ಯುಗಾದಿ, ಮರು ಯುಗಾದಿ ಬಂದಿದೇ…
ಕೃತಕ ತೋರಣದಿ, ತಳಿರು ವಾಸನೆ ಎಲ್ಲಿದೆ??
ಐಟಿ, ಬಿಟಿ, ಸೈಬರ್, ಫಾರಿನ್ ಮೆಶೀನಲಿ, ಯುಗಾದಿ ಸೊರಗಿದೆ!
ಏನಿತು ಯುಗಾದಿ ವಾಸನೆ, ಹೃದಯ ಶ್ರೀಮಂತಿಕೆ ಕಾಣೆನು!
೪
ಹರಿದಾ ಜೇಬಲೀ, ಹಸಿರು, ಕನಕಾಂಬರ… ನೋಟಿನ, ಯುಗಾದಿ
ವಿಸ್ಕಿ, ರಮ್ಮು, ಕಾಫಿಡೇಗೆ, ಬೇವು ಬೆಲ್ಲ ಎಲ್ಲಿದೆ??
ಹೊಸತು ಬಟ್ಟೆ, ಕುಡಿಕೆ, ಮಡಿಕೆ, ಜಗವೇ ಮರೆತು ಮಲಗಿದೆ!
ಮೊಬೈಲು, ಎಸ್ಸೆಮ್ಮೆಸ್ಸು, ಸಿರಿಯಲ್ಲು, ಪೋಕಿಮ್ಯಾನ್‌ಗೆ ಸೋತಿದೆ!!
೫
ಹಬ್ಬವಿಲ್ಲ! ಬಂಧುವಿಲ್ಲ! ಬರೀ ಬೂಟಾಟಿಕೆ
ಅಪ್ಪ, ಅಮ್ಮ, ಕಾಲಕಸವು! ಪ್ರೀತಿ, ಪ್ರೇಮ, ನಿತ್ಯಸರಕು!
ಹಣವೇ ತಂದೆ, ತಾಯಿ! ಉಗಾದಿ ಭ್ರಮೆಯು,
ಪದವಿ, ಪ್ರತಿಷ್ಠೆ, ಜಾತಿ, ಮತ, ಧರ್‍ಮಗಳೆ ಯುಗಾದಿಯು!
*****