ಕುರುಡನೊಬ್ಬ ಕೋಲನೂರಿ
ಮರದ ಕೆಳಗೆ ನಿಂದಿರುತ್ತ
ಕರವ ನೀಡಿ ಬೇಡುತಿದ್ದ
ಪುರದ ಜನರನು,
“ಹುಟ್ಟು ಕುರುಡ ಕಾಸನೀಡಿ
ಹೊಟ್ಟೆಗಿಲ್ಲ ದಯವ ತೋರಿ
ಬಟ್ಟೆಯೆಂಬುದರಿಯೆ” ಎಂದು
ಪಟ್ಟಣಿಗರನು.
ಬೇಡುತಿದ್ದ ದೈನ್ಯದಿಂದ
ಆಡುತಿದ್ದ ಶಿವನ ಮಾತ
“ಮಾಡಿರಯ್ಯ ಧರ್ಮವನ್ನು
ನೋಡಿ ಹೋಗದೆ.”
ಬಂದರಲ್ಲಿ ಪುರದ ಜನರು
ಮಂದಿಯೆನಿತೊ ಲೆಕ್ಕವಿಲ್ಲ
ಒಂದು ಕಾಸು ಕೊಡದೆಯವಗೆ
ಮುಂದೆ ನಡೆದರು.
ದೊಡ್ಡ ನಾಮ ದೊಡ್ಡ ಮುದ್ರೆ
ಅಡ್ಡಬೂದಿ ನಡೆದುವೆಷ್ಟೊ
ಗೊಡ್ಡು ತತ್ವ ಹೇಳಿಕೊಂಡು
ಜಡ್ಡು ಹಿಡಿದವು.
ಹಿರಿದು ಸರಿಗೆ ಹಿರಿದು ಪೇಟ
ಸರಿದು ನಡೆದ ಸಾಹುಕಾರ
ಕುರುಡನಾರೊ ತಿಳಿದು ಹೇಳಿ
ಅರಿಯ ಬಲ್ಲಡೆ.
ಚಲನ ಚಿತ್ರ ನೋಡಲೆಂದು
ಕಲೆಯ ತಿರುಳ ನೋಡಲೆಂದು
ಮಲಿನಮನರು ಹೋದರೆಷ್ಟೊ
ನಲಿಯುತಲ್ಲಿಗೆ.
ಎನಿತು ಜನರು ಬಂದರೇನು
ಎನಿತು ಜನರು ಹೋದರೇನು
ನೆನೆದರಿಲ್ಲ ಕುರುಡನಿರವ
ಮನದ ರಂಗದಿ.
“ಇವನ ಕೂಗು ಕಿವಿಗೆ ಅಲಗು
ಇವನ ರೂಪು ಕಣ್ಗೆ ಘೋರ
ಜವನ ಪುರಕೆ ಹೋಗದೇಕೆ
ಇವನು ನಿಂತನು.
ಪಾಪಮಾಡಿ ಕುರುಡನಾಗಿ
ತಾಪಬಡುತ ಕೊರಗಿ ಸೊರಗಿ
ಈ ಪುರದಲಿ ಬಂದು ನಿಂದು
ರೂಪುಗೆಡಿಪನು.”
ಹೀಗೆ ಜನರು ಕೆಲರು ಆಡಿ
ಹೋಗುತಿರಲು ಬೀದಿಯಲ್ಲಿ
ಕೂಗಿ ಕೂಗಿ ಕುರುಡನವನು
ಬಾಗಿ ನಿಂದನು.
ಕಾಲುಗಂಜಿಗಳಲಿ ತೊಳಲಿ
ಕೂಲಿಮಾಡಿ ಉಂಬ ಹೆಣ್ಣು
ಆಲಿಸುತ್ತ ಅವನ ಕೂಗ
ಸೋತು ಬಂದಳು.
ಹಣ್ಣು ಮಡಲಲಿಟ್ಟುಕೊಂಡು
ಹೆಣ್ಣು ಮಗಳು ಬಂದಳವಳು,
ಕಣ್ಣು ಅರಳೆ ನೋಡಿಯವನ
“ಅಣ್ಣ!” ಎಂದಳು.
ಸೊಗದ ಮಾತು ಸುಧೆಯ ಮಾತು
ಬಗೆಯ ಹಿಡಿವ ನಲ್ಮೆವಾತು
ಪುಗಲು ಕಿವಿಯ “ಶಿವನೆ!” ಎಂದು
ಮೊಗವನೆತ್ತಿದ.
“ಕಾಸ ನೀಡಿ ಧರ್ಮದವರು
ಲೇಸನೀವ ಶಿವನು ನಿಮಗೆ
ಹೇಸಬೇಡಿ ಕುರುಡನೆಂದು
ಘಾಸಿಪಟ್ಟೆನು.”
“ಕಾಸು ಎನ್ನ ಬಳಿಯೊಳಿಲ್ಲ
ಕಾಸು ಕೊಟ್ಟು ಕೊಂಡೆ ಹಣ್ಣ
ಆಸೆಪಟ್ಟು ತಿನ್ನಲೆಂದು
ಈಸು ನಿನಗಿದೆ.”
ಮಡಲಲಿದ್ದ ಹಣ್ಣ ತೆಗೆದು
ಎಡದ ಕೈಯಲದನು ಹಿಡಿದು
ನಡುವ ಮರೆಯ ಚೂರಿಯಿಂದ
ಒಡನೆ ಕೊಯ್ದಳು.
ಹಣ್ಣಿನೊಳಗೆ ರಸದ ಮಾವು
ಬಣ್ಣತೀವಿ ಬೆಳೆದ ಮಾವು
“ಅಣ್ಣ ಕೊಳೊ” ಎಂದು ಕೈಗೆ
ಉಣ್ಣಲಿತ್ತಳು.
“ಶಿವನೆ!” ಎಂದು ಕಣ್ಗೆ ಒತ್ತಿ
“ಶಿವನೆ!” ಎಂದು ಎದೆಗೆ ಒತ್ತಿ
ಶಿವನ ಮಾತಿನೊಡನೆ ಹಣ್ಣ
ಸವಿಯು ಹೆಚ್ಚಲು,
ತಿಂದು ಕುರುಡ ಕೈಯ ಮುಗಿದ
ಇಂದುಧರನು ಮೆಚ್ಚುತಿರಲು
ನಿಂದ ಮಗಳು ಧರೆಗೆ ಬಗ್ಗಿ
ವಂದಿಸೆದ್ದಳು.
ಅವಳ ಕಣ್ಗೆ ಕುರುಡನಲ್ಲ
ಶಿವನೆ ಎಂದು ತಿಳಿದಳವಳು
ಅವನ ಮನಕೆ ಹೆಣ್ಣದಲ್ಲ
ಶಿವನ ಕಂಡನು.
ಕಣ್ಣು ಇದ್ದು ಕುರುಡರೆಷ್ಟೊ
ಮಣ್ಣು ಹಿಡಿವ ಕಲ್ಲು ಹಿಡಿವ
ಬಣ್ಣ ಬಳೆವ ಬೀಗಿ ಮೆರೆವ
ಸಣ್ಣ ಮನುಜರು.
ಮೇಲು ಜಾತಿ ಕೀಳು ಜಾತಿ
ನೂಲು ಜಾತಿ ಎನಲು ಬೇಡ
ಶೂಲಿಯೊಲಿದ ಜಾತಿಯಲ್ಲಿ
ಶೀಲ ದೊಡ್ಡದು.
ದೀನನಲ್ಲಿ ದೇವನಿಹನು
ದಾನಿಯಲ್ಲಿ ದೇವನಿಹನು
ದೀನ ದಾನಿಯಲ್ಲದವರ
ಶ್ವಾನ ಎಂಬುದು.
ಕುರುಡ ಕುಂಟ ಹೆಳವರಲ್ಲಿ
ಮರುಕಗೊಂಡು ಬೋನವಿಕ್ಕು
ಹರನು ಮೆಚ್ಚಿ ತೇಗಿ ತಾನು
ಹರಸಿ ಪೊರೆವನು.
*****