ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ
ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ.
ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು?
ಪಂಪ ರನ್ನರ ಬದಿಗೆ
ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ
ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು
ಎಲ್ಲ ಕಾಲಕ್ಕೂ
ತನ್ನೊಡಲ ಬಿಗಿದ ಕಾಮದ ಸರ್ಪಸುತ್ತಿಂದ
ಮುಕ್ತವಾಗುವುದನ್ನು ಆಡಿ ತೋರಿಸಿದ್ದೀರಿ,
ಧರ್ಮಾರ್ಥಕಾಮ ಸಂಗಮದ ಕ್ಷೇತ್ರಕ್ಕೆ ಕರೆಸಿ
ಮಿಂದು ಮಡಿಯಾಗಿ
ಎಂದು ಹರಸಿದ್ದೀರಿ.
ಭಾಷೆ ಯಾವುದೆ ಇರಲಿ, ಕಾಲ ಯಾವುದೆ ಇರಲಿ
ನೀವು ಹಚ್ಚಿದ ದೀಪ ಎಲ್ಲ ಗಡಿಯಾಚೆಗೂ
ಬೆಳಕ ಸುರಿವಂಥದು
ಕೋಟಿ ಯೋಜನದಾಚೆಯಿಂದ ಹಾಯ್ದರು ಸೂರ್ಯ-
ಕಿರಣ ಭೂಮಿಗೆ ಸೃಷ್ಟಿಶಕ್ತಿ ಕೊಡುವಂಥದು.
ನಿಮ್ಮ ಹೆಸರಲ್ಲಿ ಇಲ್ಲಿ ಏನೋ ಗದ್ದಲ ಧೂಳು ಎದ್ದದ್ದು ಕಂಡು
ನಿಮಗೆಷ್ಟು ವ್ಯಥೆಯೋ!
ತಿರುಳನೆಲ್ಲೋ ಚೆಲ್ಲಿ ಕರಟಕ್ಕೆ ಕಿತ್ತಾಟ
ನಿಮ್ಮ ಕವಿತೆಯ ಬಿಟ್ಟು ಕಲ್ಲ ಮೂರ್ತಿಯ ನಿಲ್ಲಿಸುವೆವೆಂಬ
ಮೂರ್ಖರಿಗೆ
ಏನು ಮತಿಯೋ!
ಬನ್ನಿ ತಿರುವಳ್ಳುವರ್ ನಿಮಗೆ ಪ್ರೀತಿಯ ನಮನ
ಕಲ್ಲಾಗಿ ಅಲ್ಲ ಸಿರಿಕವಿತೆಯಾಗಿ
ಯಾವ ಕಾವ್ಯಕ್ಕೆ ನಿಮ್ಮ ಸಾರವೆಲ್ಲವ ಧಾರೆಯೆರೆವಿರೋ
ಆ ಕೃತಿಯ ರೂಪವಾಗಿ.
ಬನ್ನಿ ತಿರುವಳ್ಳುವರ್, ಬನ್ನಿ ಕಾದಿದ್ದೇವೆ
ನಿಮ್ಮ ಕಾವ್ಯದ ಗಂಧಜಲದಲ್ಲಿ ಮೀಯಲು
ನಿಮ್ಮ ಲೋಕವಿವೇಕ ಪ್ರಭೆಗೆ ಮೈಯೊಡ್ಡಲು.
ಅಚ್ಚ ಕನ್ನಡದಲ್ಲಿ ಹೊಚ್ಚ ಹೊಸ ಮೈ ಪಡೆದು
ಅವತರಿಸುತಲೆ ಇರಲಿ ನಿಮ್ಮ ಕವಿತೆ,
ಕನ್ನಡದ ಕಾವ್ಯದೀಪಾವಳಿಯ ದೃಶ್ಯದಲಿ
ತಪ್ಪದೇ ಉರಿದಿರಲಿ ನಿಮ್ಮ ಹಣತೆ.
*****