ಬೆಂಗಳೂರು

ಇದು ಚಕ್ರವ್ಯೂಹ
ಒಳಗೆ ಬರಬಹುದು
ಒಮ್ಮೆ ಬಂದಿರೊ ಒಳಗೆ
ಹಿಂದೆ ಹೋಗುವ ದಾರಿ ಬಂದಾದ ಹಾಗೆಯೇ !
ಕರೆತಂದ ದೆವ್ವಗಳು ಕೈಬಿಟ್ಟ ಹಾಗೆಯೇ!
ಸ್ವಾಮಿ, ಇದು ನಗರ;
ನಿತ್ಯ ಜೀವವನ್ನೆಲ್ಲ ನುಂಗಿ ಸೊಕ್ಕಿರುವ
ಹೆಬ್ಬಾವಿನಂಥ ಜಡ ಅಜಗರ:
ದಿಕ್ಕು ದಿಕ್ಕಿನಿಂದಲೂ ಉಕ್ಕಿ ಧಾವಿಸುತ್ತಿರುವ
ಲಕ್ಷವಾಹಿನಿ ಮಲೆತ ಜನಸಾಗರ;
ಏನೆಲ್ಲ ಭಾಷೆ, ಎಷ್ಟೆಲ್ಲ ಆಸೆ
ನೂರೆಂಟು ರುಚಿ ಕಲಸುಮೇಲೋಗರ,
ಬಂದವರಿಗೆಲ್ಲ ಇಲ್ಲಿ ಭವಿಷ್ಯ ಇರದಿದ್ದರೂ
ಆಟಬಲ್ಲ ಖಡೀಮ ಮಾತ್ರ ಹಾಕಿಯೆಬಿಡುವ
ಕೇಳಿದ ಗರ!

ಎಲ್ಲ ಸಮೃದ್ಧ ಇಲ್ಲಿ.
ಕೆಲವು ಜಾಗಗಳಲ್ಲಿ
ನೀರಿಲ್ಲದಿದ್ದರೂ ನಲ್ಲಿಯಲ್ಲಿ
ಗಲ್ಲಿ ಗಲ್ಲಿಗಳಲ್ಲಿ
ಹೆಜ್ಜೆ ಹೆಜ್ಜೆಗು ತೀರ್ಥ
ಅಂಗಡಿಯ ತುಂಬ ಬಾಟಲಲ್ಲಿ !
ಎಣ್ಣೆ ಇದೆ ಕಾಳಲ್ಲಿ
ಬೆಣ್ಣೆ ಹಳೆಕಥೆಯಲ್ಲಿ
ಅಕ್ಕಿ ಸಕ್ಕರೆ ಬೇಳೆ ಕೆಲಸವಿಲ್ಲದೆ ಪಾಪ
ಗೊರಕೆ ಹೊಡೆಯುತ್ತಿವೆ ನೆಲಮಾಳಿಗೆಯ ಒಳಗೆ
ಕತ್ತಲಲ್ಲಿ!

ಓಡುವುದು ಇಲ್ಲಿ, ಎಲ್ಲೆಂದರಲ್ಲಿ
ಸಿಟೀ ಬಸ್ಸು
ಕೂತುಕೊಂಡೋ, ಇಲ್ಲ ನಿಂತುಕೊಂಡೋ
ಅಥವಾ ಪುಟ್‌ಬೋರ್ಡ್‌ಮೇಲೆ ಮುಂಗಾಲನ್ನೂರಿ
ಹವೆಯಲ್ಲಿ ಮೈತೂರಿ ತೂಗಿಕೊಂಡೋ
ಹೇಗೆ ಬೇಕಾದರೂ ಹೋಗಬಹುದು
ಅದೃಷ್ಟವಿದ್ದರೆ ಸ್ಟಾಪು ಸೇರಬಹುದು!

ಹಿಂದೆ ಒಂದಾನೊಂದು ಕಾಲದಲ್ಲಿ
ಇತ್ತಂತೆ ಪೂರ ಕನ್ನಡವೆ ಇಲ್ಲಿ
ಈಗ ಮಾತ್ರ ಎಲ್ಲೋ ಸಂದಿಗೊಂದಿಗಳಲ್ಲಿ
ಮಿಡುಕುತಿದೆ ಜೀವ ಬಾಲದಲ್ಲಿ
ಅಕ್ಕಪಕ್ಕದ ಮನೆಯ ಸೋದರರು ದಯಮಾಡಿ
ಮೇಲೆಬ್ಬಿಸಿರುವ ಗಾಳಿಯಲ್ಲಿ
ಹೊಯ್ದಾಡುತ್ತಿದೆ ಪುಟ್ಟ ಕನ್ನಡದ ಹಣತೆ
ಗುಡ್‌ಬೈ ಹೇಳುವ ಧಾಟಿಯಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೪೪
Next post ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…