ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ
ಹಾದು ಬಂದಿದ್ದೇನೆ ಬಡಿದು ರೆಕ್ಕೆ
ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ
ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ
ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ
ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ
ಮಾಗಿ ಮಲಗಿರುವ೦ಥ ಚಿತ್ತ ದೇಹ
ತುಕ್ಕು ಹಿಡಿಯದ ವಸ್ತು ಬಳಕೆಗೇ ಸಲ್ಲದೆ
ಒರೆಯ ಆಭರಣವಾಗಿರದ ಬಾಳು
ಕಾಲ ಬಚ್ಚಿಟ್ಟಿರುವ ಮುತ್ತು ಒಡಲೊಳಗಿರುವ
ಚಿಪ್ಪನ್ನು ಹುಡುಕಿ ಹೊರಟಂಥ ಗೀಳು
ನೂರು ಕಕ್ಕಡ ಹೊತ್ತಿ ಆಸೆ ಧಗಧಗಿಸಿದರು
ಕಡೆಗೆ ದೊರೆತದ್ದೆಲ್ಲ ಬರಿಯ ಮಸ್ಟು
ಆದರೂ ಉರಿ ಎದ್ದ ಕ್ಷಣಭಂಗುರದ ಗಳಿಗೆ
ಕೊಟ್ಟ ಬೆಳಕಿಗೆ ನಾ ಕೃತಜ್ಞ ಶುಭಮಸ್ತು
ದಕ್ಕುವುದು ಬದುಕಿಗಷ್ಟೇ ಕಡೆಗೆ, ಎಲ್ಲ ಸುಖ
ಎಲ್ಲಿತ್ತು, ಹಿಂದೆಂದು ? ಇಲ್ಲ ಮುಂದೂ
ರಾಮರಾಜ್ಯವೆ, ಅಗಸ ಕೊಂಡಾಡಿದಾಳ್ವಿಕೆಯೆ ?
ನುಣುಪು ಕಣ್ಣಿಗೆ ದೂರವಿರುವ ಗುಂಡು
ಬರಲಿ ಸಂಕ್ರಾಂತಿ ಹಳೆಚಿಂತೆ ವ್ಯಥೆಗಳ ಪುಳ್ಳೆ-
ರಾಶಿಗೇ ಬೆಂಕಿಯಿಟ್ಟು
ಬಿತ್ತಿದ್ದು ಬೆಳೆಯಲಿಲ್ಲೆಂಬ ವ್ಯರ್ಥಕೃಷಿಯ
ಬಂಜೆನೋವಿಗೆ ಮದ್ದು ಕೊಟ್ಟು
ಕಾದು ಕ್ಯೂ ನಿಂತಿರುವ ಅನಿರೀಕ್ಷಿತಗಳ ಎದೆಯ
ಮರೆಯ ಸರಿಸುವ ಹಸ್ತವಾಗಿ
ಎದುರುಗೊಳ್ಳುವ ವಕ್ಷ ಊರ್ವಶಿಯದಾಗಿರಲಿ
ಅಪ್ಪಿ ಉಣಿಸಲಿ ಎಲ್ಲ ನೀಡಿ
*****