ಜಾತಿಯ ಉರಿಯಾರಲಿ
ಕೋಪದ ಧಗೆ ತೀರಲಿ
ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ;
ತಂಪು ಬೆಳಕ ಚೆಲ್ಲುವ
ಚಂದ್ರ ಮೇಲಕೇರಲಿ
ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ.
ವಿದ್ಯೆಯೆಂಬ ಗಂಗೆಯಲ್ಲಿ
ಮೀಯಲೆಲ್ಲ ಮಕ್ಕಳು,
ಸಹನೆಯೆಂಬ ಸುಧೆಯುಣಿಸಲಿ ಜ್ಞಾನಧೇನು ಕೆಚ್ಚಲು;
ಪ್ರೀತಿಯ ತಂಗಾಳಿ ತೀಡಿ
ಬೀಸಲೆಲ್ಲ ದಿಕ್ಕೊಳು,
ಆಗಲೆಮ್ಮ ಮಕ್ಕಳು, ಒಂದೇ ಮನೆಯ ಒಕ್ಕಲು.
ಬದುಕಬೇಕೆ? ಭೇದ ಗುಡಿಸಿ
ಬಾಳುವುದನು ಕಲಿಯಿರಿ
ನುಡಿಸಬೇಕೆ ಹಾಡು? ಹೊಂದಿ ಸರಿಗಮಪದವಾಗಿರಿ
ಭಿನ್ನಗತಿಯ ನಡೆಯಿದ್ದೂ
ಒಂದೇ ಮೇಳವಾಗಿರಿ
ಭಿನ್ನದನಿ ಭಿನ್ನವಾದ್ಯ ಒಂದೇ ಹಾಡಾಗಿರಿ
*****