ದೀನ ನೀನು ಹೇಗೆ ಮಹಾಮಾನಿಯೇ?
ನಾವೇ ಋಣಿ ನಿನಗೆ ಹಿರಿಯ ದಾನಿಯೇ
ಚಳಿ ಬಿಸಿಲಿನ ಪರಿವೆಯಿರದೆ
ನಮ್ಮ ಮನೆಯ ಕಟ್ಟಿದೆ,
ಮಳೆಯಲಿ ಬರಿಮೈಲಿ ದುಡಿದು
ನಮ್ಮ ಮಾನ ಮುಚ್ಚಿದೆ,
ಹಿಡಿ ತಂಗಳು ತಿಂದು ಮನೆಯ
ಹಿತ್ತಿಲಲ್ಲಿ ಮಲಗಿದೆ,
ತಾಯಿಯಂತೆ ಬಾಯಿ ಮುಚ್ಚಿ
ನೋವುಂಡೂ ಸಲಹಿದೆ.
ನಿನ್ನ ತುಳಿದ ಕಾಲಿನಲ್ಲಿ
ಮೂಡುತ್ತಿವೆ ಗಾಯ,
ನಿನ್ನ ಬಡಿದ ಕೈಗಳಿಗೆ
ಬೀಳುತ್ತಿವೆ ಕೋಳ,
ನಿನಗೆ ಉಣಿಸಿದಮಾನಕೆ
ಮುನಿದಿರುವನು ಕಾಲ,
ತೀರುತಿರುವುದೀಗ ನೀನು
ಹೊರೆಸಿದಂಥ ಸಾಲ.
*****