ಬೇರೆ ದೈವ ಯಾಕೆ ಬೇಕು
ತಾಯಿ ಈಕೆ ಸಾಲದೆ?
ಎಲ್ಲ ತೀರ್ಥ ಕೂಡಿ ನಿಂತ
ಸಾಗರವೆನೆ ಆಗದೆ?
ಲಕ್ಷ ಚಿಕ್ಕ ಹಕ್ಕಿ ಯಾಕೆ
ಗರಿತೂಗುವ ನವಿಲಿದೆ
ಯಾ ಹೂವಿಗೆ ಹೋಲಿಕೆ
ಕಂಪಾಡುವ ಮಲ್ಲಿಗೆ?
ಕವಿತೆಯಲ್ಲಿ ಹುಟ್ಟಿ ಬೆಳೆದು
ಕಥೆಯ ದಾಟಿ ಬಂದಳು
ವ್ಯಥೆಯ ಸೋಸಿ ದೇವಿ ಎನಿಸಿ
ಹಸೆಯ ಏರಿ ನಿಂದಳು
ಶೀಲ ಸಹನೆ ಶ್ರದ್ಧೆಗೆ
ಇಡೀ ಬಾಳು ತೇದಳೇ!
ಚೆಕ್ಕೆಯಲ್ಲಿ ದಿಟ್ಟಿ ಊರಿ
ಆದರ್ಶವ ಕಡೆದಳೇ!
ಸೀತೆಯೆನಲು ಪಾತ್ರವೇ
ಕಥೆಯ ಹೆಣ್ಣು ಮಾತ್ರವೇ?
ಅಕ್ಕತಂಗಿ ಅತ್ತಿಗೆ
ಮಾತೆ ಭರತಧಾತ್ರಿಗೆ!
*****