ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ
ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು
ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು
ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ
ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ:
ಎಲೆಲೆ ಗಗನ ಸಖಿ ಚಂದ್ರಮುಖಿ ಬಾರೆ
ಕಳಚಿ ಈ ಸೂಟುಬೂಟು ಆ ಅನಗತ್ಯದ ಸೀರೆ
ಮೋಡಗಳ ಮೆತ್ತೆಯೊಳಕ್ಕೆ ಹಾರೋಣ!
ಫಾರೂಕಬ್ದುಲ್ಲನ ಪತನ ವಿರೋಧಪಕ್ಷಗಳ ಪ್ರಕ್ಷೋಭನ
ಆಂತುಲೆಯ ವಿಚಾರಣೆ ಮುಂಬರುವ ಲೋಕಸಭಾ ಚುನಾವಣೆ
ಶೇರುಗಳ ಏರಿಳಿತ ಡಾಲರಿನ ಅನಿರೀಕ್ಷಿತ ಕುಸಿತ
ಶಬನಾ ಆಜ್ಮಿ ಸ್ಮಿತಾಪಾಟೀಲರ ಒಳಜಗಳ
ಆಹ! ಎಂತಹ- ಪೃಷ್ಠ!
ತಬ್ಬಿಕೊಳ್ಳಲೆಂದೇ ಉಬ್ಬಿನಿಂತ ಮಾಟ
ಕೇವಲ ಒಂದು ಒಳಚಡ್ಡಿಯ ಜಾಹೀರು
ಇರಲಿರಲಿ! ಈ ವಾರದ ಭವಿಷ್ಯ
ಏನು ವಿಷಯ?
“ಇಳಿಯಲಿದ್ದೇವೆ ನಾವೀಗ!
ದಯವಿಟ್ಟು ನಿಮ್ಮ ನಿಮ್ಮ
ಸೀಟು ಬೆಲ್ಟುಗಳನ್ನು ಕಟ್ಟಿಕೊಳ್ಳಿರಿ!
ಹೊಗೆಬತ್ತಿ ಸೇದದಿರಿ ! ಕೃತಜ್ಞತೆಗಳು !”
ಎನ್ನುತ್ತಾಳವಳು.
ಹೊರಗೆ ನೋಡುತ್ತಾನೆ-ಮೋಡಗಳಿಲ್ಲ
(ಶುಭ್ರ ವಾತಾವರಣ, ಸುಖಾಗಮನ)
ಎಷ್ಟೋ ದೂರ ಕೆಳಗೆ
ನೆಲ ಬಿದ್ದಿದೆ ಚಾಪೆಯ ಹಾಗೆ
ಮನೆ ಮರ ಕಾರ್ಖಾನೆ
ಮರೆತುಬಿಟ್ಪ ಆಟಿಕೆಗಳಂತೆ
ಮೊಡವೆಗಳಂಥ ಬಂಡೆಗಳು
ಇರುವೆಗಳಂತೆ ಸರಿಯುವ ಮನುಷ್ಯರು
ಇಷ್ಟೆತ್ತರದಿಂದಲೇ ಹೀಗೆ ಕಾಣಿಸಿದರೆ
ಇನ್ನೊಂದು ಗ್ರಹದಿಂದ ಹೇಗೆ ಕಾಣಿಸಬೇಡ!
ಎಂದುಕೊಳ್ಳುತ್ತಾನೆ-ಸೆಜಿಟೇರಿಯಸ್
ಧನುರ್ಧಾರಿ ಎಷ್ಟೋ ಬೇಟೆಗಳ ಹೊಡೆದವನು
ಸೀಟಿನೊಳಕ್ಕೆ ಜಾರಿ
ಎಂಥ ಸೆಕೆ ನೆಲದ ಮೇಲೆ
ನೂಕು ನುಗ್ಗಲು ಬೇರೆ!
ಯಾರ ಹೆಂಡಿರು ಯಾರ ಮಕ್ಕಳು
ಯಾರು ಯಾರಿಗೆ ಹಿಡಿದು ನಿಂತ ಹಾರಗಳು?
ಬಾಗಿಲಿನಿಂದಾಚೆ ಇರಿಸುತ್ತಾನೆ ಪಾದ
ಪರಿಚಯದ ಮುಖಗಳಿಗಾಗಿ ಹುಡುಕುತ್ತಾನೆ
ಇವನಲ್ಲ! ಇವನಲ್ಲ! ಎನ್ನುತ್ತವೆ
ಪ್ರತಿಯೊಂದು ಜತೆ ಕಣ್ಣುಗಳು
*****