ನೀಂ ಮಹಾಶಿಲ್ಪಿ ದಿಟಂ

ನೀಂ ಮಹಾಶಿಲ್ಪಿ ದಿಟಂ

ಚಿತ್ರ: ಕ್ಲೈವ್ ಮಾಕ್

‘ಶ್ರೀ ರಾಮಾಯಣ ದರ್ಶನಂ’ ಕುರಿತು ವಿದ್ವತ್ ಟಿಪ್ಪಣಿಯನ್ನು ಮಾಡಲು ನಾನು ಹೊರಟಿಲ್ಲ. ಅದು ಸಾಧ್ಯವೂ ಇಲ್ಲ. ಅದು ಮಹಾಕಾವ್ಯ. ಬೃಹತ್‌ಗಾನ, ನಿತ್ಯ ರಾಮಾಯಣ. ಸ್ವರ್ಗದ ಕವಿ ಸಭೆಯಲ್ಲಿ ಆ ಮಹಾಕಾವ್ಯಗೋಷ್ಠಿಯಲ್ತಿ ಸಭಾಧ್ಯಕ್ಷರಾದ ತಮ್ಮ ಪರಮ ಪ್ರಿಯ ಗುರುಗಳಿಂದ (ತಳುಕಿನ ವೆಂಕಣ್ಣಯ್ಯ) ಆಶೀರ್ವದಿಸಲ್ಪಟ್ಟ ಸರ್ವರಿಂದ ಹೊಗಳಲ್ಪಟ್ಟ ಶ್ರೀ ರಾಮನ ಕಥೆಯನ್ನು ವಿಸ್ತರಿಸುವ ಬೃಹತ್‌ ಕಾವ್ಯ. ಅದರಲ್ಲಿ ವರ್ಣಬಿಂಬಿತವಾದ ಮಹಾದರ್ಶನ, ಸಾಕ್ಷಾತ್ಕಾರಗಳ ಮತ್ತು ಕಾವ್ಯದ ಮಹಾಛಂದಸ್ಸಿನ, ಮಹೋಪಮೆಗಳ ಕುರಿತು ಟಿಪ್ಪಣಿ ಬರೆಯಲು ನಾನು ಅಸಮರ್ಥ. ಅದೊಂದು ಮಹಾಸಾಗರ. ಅದರ ಕೆಲವೊಂದು ಜಲಬಿಂದುಗಳ ಕುರಿತು ನಾನು ನನ್ನ ಮೆಚ್ಚುಗೆಯನ್ನು ಮಾತ್ರ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ.

ತಂದಿಹೆನ್ ಬ್ರಹತ್‌ಗಾನಮಂ
‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಕಥೆಯ ಪಥವೊಂದು ಇರುವ ಹಾಗೆ ಅದಕ್ಕೆ ಸಮಾನಾಂತರವಾದ ಒಂದು ಸ್ವಪ್ನ ಪಥವೂ ಇದೆ. ಅವರು ನಿರೂಪಿಸುವ ಕನಸುಗಳೆಲ್ಲವೂ ಬಹುಮಟ್ಟಿಗೆ ಮನಶ್ಶಾಸ್ತ್ರ ಸಿದ್ಧಾಂತಗಳನ್ನು ಅವಲಂಭಿಸಿದ ಕನಸುಗಳೇ… ಅಂತ್ಯದಲ್ಲಿ ಮಾತ್ರ ಆ ಎಲ್ಲಾ ಕನಸುಗಳು ಮನೋ ವಿಜ್ಞಾನದ ವಲಯದಿಂದ ಅಧ್ಯಾತ್ಮಕ್ಕೆ ಜಿಗಿದು ಕೊಳ್ಳುತ್ತವೆ.’
– ಕೆ.ವಿ.ಸುಬ್ಬಣ್ಣ

ಸ್ವಪ್ನಪಥ ಮುಂದುವರಿಯುತ್ತಾ ರಾಮಾಯಣದ ಹಲವೊಂದು ಪಾತ್ರಗಳ ದಾರ್ಶನಿಕ ಚಿತ್ರಣವನ್ನು ಮೂಡಿಸುತ್ತದೆ. ಇದು ಕುವೆಂಪು ಅದರ ಆಧುನಿಕ ಚಿಂತನ ಕ್ರಮದಲ್ಲಿ ಪಾತ್ರಗಳ ಮನೋದರ್ಶನವನ್ನು ಕೊಡಲು ಸಹಾಯವಾಗುತ್ತವೆ. ಕವಿ ಈ ಮಹಾಕಾವ್ಯವನ್ನು ಮುಗಿಸಲರಿಯದೆ ಅಂತರ್‌ಧ್ಯಾನಕ್ಕೆ ಮರಳುತ್ತಾರೆ. ಅದೊಂದು ನೀರವ ರಾತ್ರಿ ಹೊರಗೆಲ್ಲಾ ಅಂಧಕಾರ, ಪ್ರಚಂಡ ಭಾವಲೋಕ. ಅರಿವಿನ ಒಂದು ಮಹಾಬೆಳಕು ಅವರಿಗೆ ಸ್ವರ್ಗ ಪಥವನ್ನು ತೋರಿಸುತ್ತದೆ. ಅದರಲ್ಲಿ ಮುಂದುವರಿದಂತೆ ಅವರು ಸ್ವರ್ಗದ್ವಾರದೆದುರು ಬಂದು ನಿಲ್ಲುತ್ತಾರೆ. ಬಾಗಿಲು ತೆರೆಯುವುದಿಲ್ಲ. ಕಂಕುಳಲ್ಲಿದ್ದ ತಾನು ಬರೆದ ಕೃತಿಯನ್ನು ಬಾಗಿಲಿಗೆ ಮುಟ್ಟಿಸಿದಾಗ ಅದು ತೆರೆದು ಕೊಳ್ಳುತ್ತದೆ. ಅವರು ಮುಂದೆ ನಡೆದಂತೆ ಒಂದು ಮಹಾಸಭೆ ಕಾಣಿಸುತ್ತದೆ. ಅನೇಕ ವಿದ್ವತ್ ಮಣಿಗಳು, ಅವರೆಲ್ಲರ ಮಧ್ಯದಲ್ಲಿ ಗುರುಗಳು (ವೆಂಕಣ್ಣಯ್ಯನವರು) ವಿರಾಜಮಾನರಾಗಿದ್ದಾರೆ.

ಹಿಂದಿನ ದಿನವೇ ಅವರು ತಳುಕಿಗೆ ಎಷ್ಟೊ ಕಾಲದ ನಂತರ ಹೋದವರು ಗುರುಗಳ ಕುರಿತು ಕೇಳಿದಾಗ ಅವರು ನಿಧನರಾದ ವಿಷಯ ತಿಳಿದು ಅತ್ಯಂತ ಖಿನ್ನರಾಗಿ ನೇರ ಉದಯರವಿಗೆ ಬಂದು ಬರೆಯುವ ಕೋಣೆಯಲ್ಲಿ ಬರೆಯ ತೊಡಗಿದಾಗ ಅವರ ಕಣ್ಣೆದುರು ಗುರುಗಳ ಚಿತಾಗ್ನಿ ಕಾಣಿಸಿದಂತೆ. ಅದೇ ವೆಂಕಣ್ಣಯ್ಯನವರ ಸೌಜನ್ಯ ಮೂರ್ತಿ, ಗುರುಮೂರ್ತಿ ಮತ್ತೆ ಮತ್ತೆ ಕಾಣಿಸಿ ಬರೆಯಲು ಒಂದು ಸಾಲೂ ಸಾಧ್ಯವಾಗದಾಗ ಅವರು ದೀಪ ಆರಿಸಿ ಧ್ಯಾನ ಮಗ್ನರಾಗಿ ಕುಳಿತರು. ಈ ಸುಷುಪ್ತಿ ಸ್ಥಿತಿಯ ನಂತರ ಅವರು ಹೀಗೆ ಬರೆದರು –

ಇದೊ ಮುಗಿಸಿ ತಂದಿಹೆನ್ ಈ ಬ್ರಹದ್‌ಗಾನಮಂ
ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ

ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ ಬೇರೆ ಮೈಯಾಂತಂತೆ.
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್. ನಿಮ್ಮ
ಕೃಪೆಯಿಂದ….. ಪೂರ್ವದ ಮಹಾಕವಿಗಳೆಲ್ಲರುಂ
ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ
ಸಂಘಕೆ ಮಹಾಧ್ಯಕ್ಷರಲ್ತೆ ನೀಂ? ಕಿರಿಯ ನಾಂ
ಹಿರಿಯರಿಗೆ ಹಾಡುವೆನ್. ಕೇಳ್ವುದಾಶೀರ್ವಾದಂ.

ಶಿಷ್ಯೋತ್ತಮನ ಆಗಮನದಿಂದ ಹರ್ಷಗೊಂಡ ಗುರು ಶಿಷ್ಯನ ಕೃತಿಯನ್ನು ಸಭಿಕರಿಗೆ ಪರಿಚಯಿಸುತ್ತಾರೆ.

ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು. ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಪ್ಸ ಸತ್ಯ ಕಥನಂ ಕಣಾ
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯ ಕೃತಿಯ ರಸಕೋಶಕ್ಕೆ
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ !

ತನ್ನ ಶಿಷ್ಯ ಕಂಡ ಕಲಾಪ್ರತಿಮೆಯ, ನಿತ್ಯರಾಮಾಯಣದ ದರ್ಶನವನ್ನು ಮಾಡಿ ಕವಿಗೆ ಆಶೀರ್ವದಿಸಿರೆಂದು ಗೋಷ್ಟಿಯ ಅಧ್ಯಕ್ಷರಾದ ಗುರುಗಳು ಕವಿಸಭೆಯಲ್ತಿ ‘ಶ್ರೀ ರಾಮಾಯಣ ದರ್ಶನ’ದ ಸಂಕೀರ್ತಿಯನ್ನು ಹಾಡುತ್ತಾರೆ. ದಿ. ವೆಂಕಣ್ಣಯ್ಯರ ಪ್ರೇರಣೆಯಿಂದ ಮೂಡಿ ಬಂದ ಕಾವ್ಯವಿದೆಂದು ಅವರಿಗೆ ಅರ್ಪಿಸುತ್ತಾರೆ. ಅದರ ಪ್ರೇರಿತ ಶಕ್ತಿಯನ್ನು ಕವಿ ಕನಸಿನ ದರ್ಶನದ ಮೂಲಕ ಪಡೆಯುತ್ತಾರೆ. ತನ್ನ ಪ್ರಿಯ ಗುರುವಿಗೆ ಅರ್ಪಿತವಾದ ಈ ರಾಮಾಯಣದರ್ಶನವನ್ನು ‘ಬೃಹದ್‌ಗಾನ’ ಎಂದು ಹೇಳುತ್ತಾರೆ.

ಸ್ವಪ್ನಮಾಲಿಕೆಗಳು
‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಮತ್ತೆ ಮತ್ತೆ ಬರುವ ಕನಸಿನ ಮಾಲಿಕೆಗಳು ರಾಮಾಯಣದ ಮುಖ್ಯ ಕಥೆಯ ನಿರೂಪಣೆಗೆ ಅನಿವಾರ್ಯರೂಪಕ ಅಂಶಗಳಾಗಿ ವೈಶಿಷ್ಟ್ಯಪೂರ್ಣವಾಗಿವೆ. ಇವು ಪ್ರಬುದ್ಧವೂ, ಆಧ್ಯಾತ್ಮಕವೂ, ಮನೋಜ್ಞವೂ ಮುಖ್ಯ ಕತೆಯ ದಿಶೆಯನ್ನು ಬದಲಿಸುವ ಶಕ್ತಿಯನ್ನು ಪಡೆದವೂ ಆಗಿವೆ. ಕುವೆಂಪು ಅವರು ಆಧುನಿಕ ಮನೋವಿಜ್ಞಾನವನ್ನು ಚೆನ್ನಾಗಿ ಬಲ್ಲವರು ಮತ್ತು ಅದನ್ನು ಅವರು ಬಯಸಿದ ಕೆಲವು ಪಾತ್ರಗಳ ಚರಿತ್ರೋತ್ಕರ್ಷಕ್ಕಾಗಿ ಬಹುಚೆನ್ನಾಗಿ ಪ್ರಯೋಗಿಸಲು ಸಮರ್ಥರು. ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ರಾಮ, ರಾವಣ, ಸೀತೆ, ಮಂಥರೆ, ಶಬರಿ, ಲಕ್ಷ್ಮಣ ಇವರೆಲ್ಲ ತಾವು ಕಂಡ ಕನಸಿನಲ್ಲಿ ಜೀವನ ದರ್ಶನವನ್ನು ಪಡೆಯುತ್ತಾರೆ. ಸೀತೆ ರಾಮನನ್ನು ಕನಸಿನಲ್ಲಿ ಮೊದಲೇ ಕಂಡು ಆಕರ್ಷಿತಳಾಗುತ್ತಾಳೆ. ರಾವಣ ಬಿಲ್ಲು ಮುರಿಯಲು ಬಾರದಿದ್ದಾಗ ಮನಸ್ಸಿನಲ್ಲಿಯೇ ‘ಹರಚಾಪ ಭಾರವಾಗು ಅವನು ಮುರಿಯದಿರಲಿ’ ಎಂದು ಬೇಡಿಕೊಂಡವಳು ಕನಸಿನಲ್ಲಿ ತನ್ನ ರಾಮನ ದರ್ಶನವಾದ ನಂತರ ಮುಂದಿನ ಸ್ವಯಂವರದಲ್ಲಿ ‘ಹಗುರಾಗು ಗರಿಯಂತೆ, ಬಾಗು ಬಳ್ಳಿಯ ತೆರದಿ, ರಾಮಂಗೆ ಮುರಿದು ಬೀಳ್ ಓ ಧನುವೇ’ ಎಂದು ಬಿನ್ನವಿಸಿಕೊಳ್ಳುತ್ತಾಳೆ.

‘ಪ್ರಜ್ಞೆನಿದ್ರಿಸಿರೆ…..ಕಣಪಾದುದು
ಮೈದೋರ್ದುದೀ ಸರ್ವಲೋಕ. ರಮಣೀಯತಾ
ನೀಲಮೇಘ ಶ್ಯಾಮ ಮೂರ್ತಿ ಆ ರಾತ್ರಿಯಿಂ
ದಿನದಿನಂ ಸ್ವಪ್ನದೊಳ್ ಗೋಚರಿಸಿತಾ ವಿಗ್ರಹಂ
ಗುರುತಿಸಿದೆ ನಾ ರೂಪಮಂ ನಮ್ಮ ಪೂದೊಂಟದೊಳ್’

ಶ್ರೀ ರಾಮನನ್ನು ಹೂದೋಟದಲ್ಲಿ ಕಂಡಾಗ ಅವಳ ಕನಸಿನಲ್ಲಿ ಕಾಣಿಸಿದ ‘ನೀಲ ಕಾಂತಿಯ ತರುಣ’ನನ್ನು ಗುರುತಿಸಿದಳು ಸೀತೆ.

ರಾಮನ ಕೆಲವು ಕನಸುಗಳಲ್ಲಿ ಒಂದು – ರಾಮ ಲಕ್ಷ್ಮಣರು ಬಂದಿರುಳು. ಸರೋವರ ತಟದಲ್ಲಿ ಭಾರವಾದ ಮನಸ್ಸಿನಿಂದ ಕುಳಿತಿರುವಾಗ
‘ಸೌಮಿತ್ರಿಯಂ ಕರೆದಣ್ಣಂ,
ತಮ್ಮ ಹಿಂತಿರುಗಯೋಧ್ಯೆಗೀ
ರಾತ್ರಿಯಂ ಕಳೆದು, ಊರ್ಮಿಳೆ ನಿನ್ನನೆಯೆ ಕರೆದು
ಗೋಳಾಡುತಿರ್ಪಂತೆ ಕಂಡೆ ಕನಸಂ’.

ಇದಕ್ಕೆ ಲಕ್ಷ್ಮಣ ತುಂಬಾ ಗೌರವದಿಂದ
‘ಅಣ್ಣಾ, ಕಾಂತೆ ಊರ್ಮಿಳೆ ತಪಸ್ವಿನಿ, ನಿನ್ನೊಡನೆ ಬರುವ
ಮುನ್ನಮಾಕೆಯ ಕೃಪೆಯನಾಂತೆ ಬಂದೆನ್, ನಿನಗೆ
ಚಿಂತೆಯಿನಿತಾ ದೆಸೆಗೆ ಬೇಡೈ…’

ರಾಮನಿಗೆ ಎಲ್ಲರ ಚಿಂತೆ. ಅವನು ಪುರುಷೋತ್ತಮ. ಸರ್ವೋದ್ಧಾರಕ, ಊರ್ಮಿಳೆಯ ಕುರಿತು ಅವನು ಅಯೋಧ್ಯೆಯನ್ನು ಬಿಟ್ಟು ಬರುವಾಗಲೇ ಚಿಂತಿಸ ಹತ್ತಿದ್ದಾನೆ. ಅದಕ್ಕೆಯೆ ತಡೆಯಲಾರದೆ ಲಕ್ಷ್ಮಣನಿಗೆ ಹಿಂತಿರುಗಿ ಹೋಗಲು ಹೇಳುತ್ತಾನೆ. ಮುಂದಾಗಲಿರುವುದುನ್ನು ಸೂಚಿಸುವ ರಾಮನ ಇನ್ನೊಂದು ಕನಸು; ವನವಾಸದ ಸಮಾಚಾರ ತಿಳಿದು ಲಕ್ಷ್ಮಣ ಉರಿದೇಳುತ್ತಾನೆ. ‘ಪಿತನಾದೊಡೇಂ ಆ ಚಪಲಮತಿ ಗೌರವಾರ್ಹನೆ?’ ಎಂದು ದಶರಥನನ್ನು ಕೈಕೆಯನ್ನೂ ಹಳಿಯುತ್ತಾನೆ. ಆಗ ಅವನನ್ನು ಶಾಂತಗೊಳಿಸಲು,

‘ನಿತ್ಯಂ ಎನ್ನಂ ಕರೆದ ಕನಸೊಂದನೊರೆವೆನಾಲಿಪುದು……
ಗೋಚರಿಸುತಿದೆ ಕಡಲ್‌ಕಾಡುಗಳ್, ತರತರದ ಪ್ರಾಣಿಗಳ್
ಪರ್ವತ ಶ್ರೇಣಿಗಳ್, ದಿನದಿನಂ ಗಿರಿ ಸದೃಶ ಭವ್ಯನೋರ್ವಂ
ಮಹಾವಾನರಂ… ಶೈಲಾಗ್ರದೊಳ್….ನಿಂದೆನಗೆ
ಕೈಬೀಸಿ ಕರೆಯುತಿರ್ಪನ್ ದಕ್ಷಿಣಾಪಥಕೆ
ತುಡಿಯುದಾತ್ಮವು ಆ ದೆಸೆಗೆ… ದ್ಯೆವಮಂ ಮೀರ್ವರಾರ್.’

ದಿನದಿನವೂ ರಾಮನನ್ನು ದಂಡಾರಣ್ಯ, ಪರ್ವತ ಶ್ರೇಣಿಯ ಆಚೆಯಿಂದ ಒಂದು ದಿವ್ಯಾಕೃತಿ ವಾನರ (ಹನುಮಂತ) ಕೈಬೀಸಿ ಕರೆಯುವ ಕನಸು. ಅದೂ ದಕ್ಷಿಣ ಪಥಕೆ ಈ ಕನಸಿನಲ್ಲಿ ರಾಮನಿಗೆ ವನವಾಸದ ಸೂಚನೆ. ಹನುಮಂತನ ಭೇಟಿಯ ಸೂಚನೆ ಹಾಗೂ ದಕ್ಷಿಣ ಪಥ (ಲಂಕೆಯ)ದ ಕಡೆಗೆ ಹೋಗಲಿರುವ ಮುಂಸೂಚನೆಗಳು ಕಾಣಿಸುತ್ತಿವೆ. ಆದ್ದರಿಂದ ಲಕ್ಷಣ ಆತ್ಮ ತುಡಿಯುತ್ದಿದೆ. ದೈವವನ್ನು ಯಾರಿಂದ ಮೀರಲು ಸಾಧ್ಯ’ ಎಂದು ತನ್ನ ಕನಸಿನ ಪ್ರಯೋಜನವನ್ನು ಲಕ್ಷ್ಮಣನಿಗೆ ಹೇಳುತ್ತಾನೆ. ಎಲ್ಲ ರಾಮಾಯಣಗಳಲ್ಲಿ ಲಕ್ಷ್ಮಣನ ಕೋಪ. ರಾಮನ ಸಮಾಧಾನದ ವರ್ಣನೆ ಬರುತ್ತದೆ. ಆದರೆ ತನ್ನನ್ನು ಓರ್ವ ಮಹಾವಾನರ ಕರೆದಂತೆ ರಾಮನಿಗೆ ಕನಸು ಬೀಳುತ್ತಿರುವುದು ಕುವೆಂಪು ವಿಶೇಷ. ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ವರ್ಣಿತ ಸ್ವಪ್ನ ಸಂದೇಶಗಳು. ಮುಂದೆ ಆಗಲಿರುವ ಘಟನೆಯನ್ನು. ಆಗಿ ಹೋದವುಗಳ ಮುಂದಿನ ಪರಿಣಾಮವನ್ನು, ಅನುಕಂಪ, ಅನುರಾಗಗಳ ಎಳೆಯನ್ನು, ಉದ್ಧಾರ, ಉತ್ಕರ್ಷೆಗಳ ಪೂರ್ವಸೂಚನೆಯನ್ನು ಕೊಡಲು ಸಮರ್ಥವಾಗಿವೆ. ಜೊತೆಗೆ ಇವು ಕಾವ್ಯಮಯವೂ, ದಾರ್ಶನಿಕವೂ ಆಗಿವೆ. ಶಬರಿಯ ಕನಸಿನ ಕಾವ್ಯಾತ್ಮಕ ಸೊಗಸನ್ನು ಇಲ್ಲಿ ಉದಾಹರಿಸಬಹುದು.

‘ಆ ಬೆಳ್ದಂಗಳಿರುಳಿನೊಳ್
ಮುಪ್ಪುಜವ್ವನಗನಸು ಕಾಣ್ಬೊಂದು ಮಾಳ್ಕೆಯಿಂ
ಮುದುಕಿ ಕಂಡಳ್ ಕನಸನಾ ಶಬರಿ….’

ಕನಸಿನಲ್ಲಿ ಕಾಣಿಸಿದ ಗಗನ ನೀಲಾಭನಂ, ಸ್ವಪ್ನ ದರ್ಶನದ ತ್ರೀಮೂರ್ತಿಯಂ’ ಮತ್ತೆ ನೆನಸಿಕೊಂಡು ಅವನ ದರ್ಶನಕ್ಕೆ ಕಾತರಿಸುತ್ತಾಳೆ. ‘ಬಾರಯ್ಯ ಕಡ್ಗೆಡುವ ಬಾಳ್ಗೆಡುವ ಮೊದಲೆ, ತಣಿಸು ಕಣ್ಗಳೀ ನೀರಳ್ಕೆಯಂ’ ಎಂದು ಹಲುಬುತ್ತಾಳೆ.

‘ಪೂರ್ಣಸತಿ’ ಊರ್ಮಿಳೆ
ಊರ್ಮಿಳೆ ರಾಮಾಯಣದ ಉಪೇಕ್ಷಿತ ಪಾತ್ರವಾದರೂ ಸೀತೆಯಷ್ಟೆ ಮಹತ್ವದ ಪಾತ್ರ. ಅವಳ ಅಗಾಧವಾದ ಸತೀಧರ್ಮಕ್ಕೆ ಬೇರೆ ಯಾವ ಕೃತಿಯಲ್ಲಿಯೂ ಉಲ್ಲೇಖ ಸಿಗಲಾರದು. ರವೀಂದ್ರನಾಥ ಠಾಗೋರ ಅವಳನ್ನು ಉಪೇಕ್ಷಿತ ಪಾತ್ರವೆಂದು ಪರಿಗಣಿಸಿದ್ದಾರೆ. ರಾಮಾಯಣದ ನಂತರದ ಹೊಸ ರಾಮಾಯಣದ ನಿರ್ಮಾಣ ಮಾಡಿದ ಯಾವುದೇ ಕವಿಯಾಗಲೀ, ಅದಕ್ಕೆ ಭಾಷ್ಯ ಇಲ್ಲವೆ ಟಿಪ್ಪಣಿ ಮಾಡಿದ ಯಾವನೇ ವಿಮರ್ಶಕನಾಗಲೀ ಊರ್ಮಿಳೆಯ ತ್ಯಾಗದ, ಸತಿಧರ್ಮಪಾರಾಯಣತೆಯ ಕುರಿತು ಕೌತುಕ ಮಾಡಿದ್ದು ಗಮನಕ್ಕೆ ಬರುವುದಿಲ್ಲ.

‘ಲಕ್ಷ್ಮಣ ರಾಮನ ಜೊತೆಯಲ್ಲಿ ವನವಾಸಕ್ಕೆ ಹೊರಟಾಗ ತಾನೂ ಅವನ ಜೊತೆ ಹೊರಡಲು ಪತಿಯನ್ನು ಬೇಡಲಿಲ್ಲ. ಸೀತೆ ೧೪ ವರ್ಷದ ವನವಾಸವನ್ನು ರಾಮನ ಜೊತೆಯಲ್ಲಿದ್ದೆ ಅನುಭವಿಸಿದರೆ. ಊರ್ಮಿಳೆ ತನ್ನ ಪತಿಯಿಂದ ದೂರ. ಅವನ ಸಹವಾಸದಿಂದ ದೂರ. ೧೪ ವರ್ಷಗಳಲ್ಲಿ ಒಂದು ಬಾರಿಯೂ ಅವನ ದರ್ಶನ ಮಾಡದೆ. ಮಾತಾಡದೆ ನಿರ್ಮೋಹಿಯಾಗಿ, ಯೋಗಿನಿಯಾಗಿ ಸರಯೂ ನದಿಯ ತೀರದಲ್ಲಿ ಒಂದು ಪರ್ಣಕುಟಿಯನ್ನು ಕಟ್ಟಿ ‘ಚಿರತಪಸ್ವಿನಿಯಾಗಿ’ ‘ಕಟ್ಟಿದಳ್ ಚಿತ್ತಪೋಮಂಗಳಖದ ರಕ್ಷೆಯಂ ಮೈಥಿಲಿಗೆ ರಾಮಂಗೆ ಮೇಣ್‌ ತನ್ನಿನಿಯ ದೇವನಿಗೆ’. ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಕುವೆಂಪು ‘ತನ್ನತನವನಿಲ್ಲ ಗೈದ ಊರ್ಮಿಳೆ’ ಎನ್ನುವ ಒಂದು ದೀರ್ಘ ಸಂಪುಟವನ್ನೇ ರಚಿಸಿದರೂ ಅವಳು ಎಲ್ಲಿಯೂ ಕಾಣಿಸುವುದಿಲ್ಲ. ಮಾತಾಡುವುದಿಲ್ಲ. ಯಾರೂ ಅವಳ ಕುರಿತು ಹೆಚ್ಚು ಪ್ರಸ್ತಾಪ ಮಾಡುವುದಿಲ್ಲ. ಕವಿ ಹೀಗೆ ಮೌನ ಪ್ರಪಂಚದಲ್ಲಿಯೆ ಊರ್ಮಿಳೆಯನ್ನು ಇರಿಸಿದ್ದರಿಂದ ಅವಳ ಪಾತ್ರಕ್ಕೊಂದು ಉತ್ತಮ ಪ್ರತಿಮಾ ಸೃಷ್ಟಿಯನ್ನೇ ಮಾಡಿದ್ದಾರೆ. ಕಾವ್ಯದಲ್ಲಿ ಅವಳ ಇರುವಿಕೆ ಒಟ್ಟು ನಾಲ್ಕೈದು ಮಾತುಗಳಿಗೆ ಮಾತ್ರ ಸೀಮಿತವಾಗಿದೆ.
ಊರ್ಮಿಳೆ ಜನಕರಾಜನ ಔರಸಪುತ್ರಿ-ಜನಕರಾಜನ ಹೃದಯದ ಇಂಗಿತಕ್ಕೆ ಮನವೊಪ್ಪಿ ಸೌಮಿತ್ರಿಯೂರ್ಮಿಳೆಯನ್ನೊಪ್ಪಿದನ್ ಇಷ್ಟೆ ಅವಳ ವಿವಾಹದ ಪ್ರಸ್ತಾಪ ಬರುವುದು. ಕವಿಯ ಕಲ್ಪನೆಗೇ ಬಾರದ ರೀತಿಯ ಅವಳ ನಂತರದ್ದು ನಿರ್ಲಿಪ್ತ ಬದುಕು. ಅಯೋಧ್ಯೆಯಲ್ಲಿ ಅಷ್ಟೆಲ್ಲ ಕಾಂಡ ನಡೆಯುತ್ತಿದ್ದಾಗ ನೀನೆಲಿದ್ದೆ. ನಿನ್ನ ಕಣ್ಣಿಂದ ನೀರು ತುಳುಕಲಿಲ್ಲವೆ… ಎಂದೆಲ್ಲ ಕವಿ! ತಾನೆ ಕೇಳುತ್ತ
‘ಪೆಣ್ಣೆಂಬ ತಪಕೆ ನೀ ನಿರುಪಮ ಪ್ರತಿಮೆಯೌ’
‘ದೇವ ಮಾನವ ಸಕಲ ಲೋಕ ಸಂಸ್ತುತಿಯ ಬೆಂಬಲದ
ಸೀತೆಯ ತಪಕೆ ಮಿಗಿಲ್ ನಿನ್ನ ದೀರ್ಘ ಮೌನವೃತಂ’ ಎಂದು ನಿರ್ಧರಿಸುತ್ತಾರೆ.

ರಾಮನಿಗೆ ಮಾತ್ರ ಊರ್ಮಿಳೆಯ ಚಿಂತೆ ಇದೆ. ಚಿತ್ರಕೂಟದಲ್ಲಿ ಒಂದಿರುಳು ರಾಮ ಲಕ್ಷ್ಮಣನಿಗೆ, ‘ತಮ್ಮ ಪಿಂತಿರುಗಯೋಧ್ಯಗೀ
ರಾತ್ರಿಯಂಕಳೆದು, ಊರ್ಮಿಳೆ ನಿನ್ನನೆಯೆ ಕರೆದು
ಗೋಳಾಡುತಿರ್ಪಂತೆ ಕಂಡೆ ಕನಸಂ’

ರಾಮ ಅನೇಕ ಕಥೆಯಲ್ಲಿ ಕಾಣುವ ಕನಸುಗಳಿಗೆ ಅವನ ಆತ್ಮದರ್ಶನದ ಮಹತ್ವವಿದೆ. ಲಕ್ಷ್ಮಣ ಉತ್ತರಿಸುತ್ತಾನೆ –
‘ಅಣ್ಣ, ಕಾಂತೆ ಊರ್ಮಿಳೆ ತಪಸ್ವಿನಿ, ನಿನ್ನೊಡನೆ ಬರುವ
ಮುನ್ನಮಾಕೆಯ ಕೃಪೆಯನಾಂತೆ ಬಂದೆನ್.
ನಿನಗೆ ಚಿಂತೆ ಬೇಡ…’

ಆಕೆಯ ಕೃಪೆಯನಾಂತು…. ಅಂದರೆ ಆಕೆಯ ಮೌನ ಅನುಮತಿಯನ್ನು ಪಡೆದು ಬಂದಿದ್ದೇನೆ ಎನ್ನುತ್ತಾನೆ. ಊರ್ಮಿಳೆ ಯಾವುದೇ ರೀತಿಯ ಅಸಮಾನತೆಯನ್ನು ತೋರಿಸಲಿಲ್ಲವೆಂದು ಲಕ್ಷ್ಮಣನ ಮಾತಿನ ಅರ್ಥವಾಗುತ್ತದೆ. ಸೀತೆಯೂ ಊರ್ಮಿಳೆಯ ಕುರಿತು ಚಿಂತಿಸುತ್ತಾಳೆ. ಒಂದು ದಿನ ಮಬ್ಬಿನಲ್ಲಿ ದೂರದ ಬಂಡೆಯಲ್ಲಿ ಯಾರೋ ಕುಳಿತಿರುವಂತೆ ಅವಳಿಗೆ ಕಾಣುತ್ತದೆ. ರಾಮನಿಗೆ ತೋರಿಸಿದಳು. ಅದು ಲಕ್ಷ್ಮಣನೆಂದು ತಿಳಿಯಿತು. ಏಕಾಂಗಿಯಾಗಿ ಊರ್ಮಿಳೆಯನ್ನೇ ನೆನೆಯುತ್ತ ಉದಾಸನಾಗಿ ಕುಳಿತಿದ್ದಾನೆಂದು ಇಬ್ಬರ ಕಣ್ಣಗಳೂ ತೇವಗೊಂಡವು.

ಮಹಾಪರಾಕ್ರಮಿ ಕುಂಭಕರ್ಣ ಯುದ್ಧಕ್ಕೆ ಹೊರಟದ್ದು ನೋಡಿ ಶಿವ ಬೆದರಿದ ಪಾರ್ವತಿಗೆ ತೋರಿಸುತ್ತಾನೆ. ಅವಳು ಚಿಂತೆಯಿಂದ ಉಸುರುತ್ತಾಳೆ.
‘ಕುವರಿ ಸೀತೆಯ ಹಣೆಯ ಕುಂಕುಮಕೆ ಹಾನಿ ಬರದಿರಲಿ,
ಮಗಳ್ ಊರ್ಮಿಳೆಗೆ-ನೋಡಲ್ಲಿ ಸರಯೂ ನದಿಯ ತಟದಿ ನನ್ನನೆ
ನಿರಂತರಂಪೂಜಿಸಿ ತಪಂಗೆಯ್ವಳಿಗೆ. ಮುಡಿದ ಹೂ ಬಾಡದಿರಲಿ.’

ಯುದ್ಧದಲ್ಲಿ ಮೂರ್ಛೆ ಹೋದ ಲಕ್ಷ್ಮಣ ಸಂಜೀವಿನಿಯಿಂದ ಚೇತರಿಸಿ ಎಚ್ಚರಗೊಂಡು
“ಊರ್ಮಿಳಾ! ಊರ್ಮಿಳಾ!
ಎನುತೆ ಪೆಂಡತಿಯ ಪೆಸರಂ ಕರೆದು
ಕಾಣಲೆಳಸುವನಂತೆ ಕಣ್ಸುಳಿಸಿ, ಸುತ್ತಣ್ಗೆ ನೋಡಿ
ಕಂಡೆನಾಂ ದಿಟಂ,
ವಲ್ಕಲವನುಟ್ಟಿರ್ದಳಂ ನನ್ನ ಸತಿಯಂ
ತಪಸ್ಚರ್ಯೆಯಿಂ ಪೂಜ್ಯೆಯಾಗಿರ್ದಳಂ! ತನ್ನ
ದಿವ್ಯ ಶಕ್ತಿಯೊಳೆನ್ನ ಹೃದಯಕಮೃತವನ್ನರೆದು….
….ತೊಡಿಸಿದಳ್ ತಪಃ ಕವಚಮಂ,
ಪೂಜ್ಯೆಯಂ ಪ್ರಾಣವಲ್ಲಭೆಯಾಗಿ ಪಡೆದನಾಂ
ಧನ್ಯನೈಸಲೆ, ಧನ್ಯರೊಳ್…’

ಎಂದು ಉಧ್ಘರಿಸುವಲ್ಲಿ ಕವಿ ಊರ್ಮಿಳೆಯ ಪಾತ್ರದ ಔನ್ನತ್ಯವನ್ನು ವ್ಯಕ್ತವಡಿಸುತ್ತಾರೆ.

ಊರ್ಮಿಳೆಯ ಪ್ರತ್ಯಕ್ಷ ದರ್ಶನವಾಗುವುದು ಶ್ರೀರಾಮ ಅಯೋಧ್ಯೆಗೆ ಹಿಂದಿರುಗಿದಾಗ ಮಾಂಡವಿ ಓಡಿಬಂದು ತಪಸ್ಸಿನಲ್ಲಿದ್ದ ಊರ್ಮಿಳೆಯನ್ನು ಎಚ್ಚರಿಸುವಳು. ಅವರು ಅಯೋಧ್ಯೆಗೆ ಬಂದ ಸಂಭ್ರಮದ ಕುರಿತು ಹೇಳುವಳು.

‘ದೇವರ್ವೆತಂದರೇನ್ ತಂಗೆ, ವನವಾಸದಿಂ?’ ಅವರು ಬಂದಿಳಿದ ನಂದಿ ಗ್ರಾಮದ ಆಶ್ರಮಕ್ಕೆ ನಾವು ಬೇಗ ಹೊರಡಬೇಕೆಂದು ಮಾಂಡವಿ ಹೇಳಿದಾಗ ಊರ್ಮಿಳೆ ಹೇಳಿದಳು
‘ಮೀಯದುಡದೆಯೆ ತೊಡದೆ ಪೋಪುದೇನವರೆಡೆಗೆ.
ತಂಗೆ, ಮಂಗಳ ಮಲ್ತು…
‘ನಿನ್ನ ಕಡುನೊಂಪಿಯನ್ನು ಅವರೂ ನೋಡಲಿ’ ಎಂದು ಮಾಂಡವಿ ನುಡಿದಾಗ
‘ಚಿ! ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ, ದೇವರ ತಪಕ್ಕಿದಿರ್
ನಮ್ಮದು ಒಂದು ತೃಣಮಲ್ತೆ….ತನ್ನ ತಾನ್
ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ
ತುಂಗೆ ಕೇಳ್ ತಪಕೆ ಪರಮ ಪ್ರಯೋಜನಂ….’

ಇಷ್ಟೊಂದು ದೀರ್ಘಕಾಲದ ನಂತರ ಮಾತಾಡಿದ ಊರ್ಮಿಳೆಯ ಮಾತುಗಳಲ್ಲಿ ತಾನು ಮಾಡಿದ್ದು ತೃಣ ಸಮಾನವೆಂಬ ದೈನ್ಯತೆಯ ಸಮಾಧಾನವಿದೆ.

ಕುವೆಂಪು ಊರ್ಮಿಳೆಯ ‘ಮೌನತ್ಯಾಗ’ದಿಂದ ಪ್ರಭಾವಿತರಾಗಿದ್ದಾರೆ. ಅವಳನ್ನು ರಾಮಾಯಣದಲ್ಲಿ ಹೀಗೇ ಉಪೇಕ್ಷೆಗೆ ಒಳಪಡಿಸಬಾರದೆಂದು ಮತ್ತು ತಾನು ಹೃದಯದಿಂದ ಅವಳ ನೈಜತೆಯ ಕಡೆಗೆ ಒಲಿದದ್ದನ್ನು ಒಂದು ಪ್ರತ್ಯೇಕ ಕವಿತೆಯಲ್ಲಿ ವ್ಯಕ್ತ ಪಡಿಸಿದ್ದಾರೆ.
‘ರಾಮಾಯಣ ಮಹಾರತ್ನವೇದಿಯ ಮೇಲೆ
ಮೂಲೆಯಲಿ ನಿಂತಿರುವುದೊಂದಮೃತ ಶಿಲ್ಪ ಕೃತಿ
ನಾಣ್ಚೆ, ಕಾಣದೆ ಸಂತೆಗಣ್ಗಳಿಗೆ, ಪೂರ್ಣಸತಿ
ಊರ್ಮಿಳಾದೇವಿ, ಲಕ್ಷ್ಮಣ ಚಿರತಪಶ್ಮಿಲೆ
ಹನುಮಂತ, ರಾಮ ಲಕ್ಷ್ಮಣ ಸೀತೆ
ಕೈಕೊಳಲಿ ಜನಪೂಜೆಯಂ; ನಿನಗೆ ಸಂಪ್ರೀತಿ
ನನ್ನದಿದೆಕೋ….’

ವಾಲಿಮೋಕ್ಷ
ವಾಲಿಯ ಮೋಕ್ಷದ ಪ್ರಸಂಗ ‘ರಾಮಾಯಣ ದರ್ಶನಂ’ದ ಒಂದು ಸುಂದರ ಭಾಗ. ಇದು ತುಂಬ ನಾಟಕೀಯವೂ, ಕಾವ್ಯಮಯವೂ ಆಗಿದೆ. ಕುವೆಂಪು ಗೀತನಾಟಕಗಳನ್ನು ತುಂಬಾ ಬರೆದಿದ್ದಾರೆ. ಅಂತೆಯೆ ವಾಲಿವಧೆಯ ವರ್ಣನೆ ಒಂದು ಮನಮುಟ್ಟುವ ಗೀತ ನಾಟಕದಂತಿದೆ.

ಮರದೆಡೆಯಲ್ಲಿ ಅಡಗಿನಿಂತು ಉಗ್ರ ಬಾಣದಿಂದ ಗಾಯಗೊಂಡ ವಾಲಿ ಬೆಟ್ಟದಂತೆ ನೆಲಕ್ಕುರುಳಿದಾಗ ರಾಮಾದಿಗಳು ಹತ್ತಿರ ಬಂದರು. ಬಿದ್ದಿದ್ದ ವಾಲಿ ಹತ್ತಿರ ಬಂದವರನ್ನೆಲ್ಲ ಗುರುತಿಸುವವೊಲ್ ನೆಟ್ಟನೆ ನೋಡಿ,
‘ಏಂಗೈದೆ ಸುಗ್ರೀವ
ಮುದ್ದಾಡಲೆಂದು ಬಂದಳ್ಕರೆಯ ತೋಳ್ಗಳಂ
ಛಿದ್ರಿಸಿದೆಯಲ್ತೆ…. ಆಃ ತೋರೆನಗೆ ಆ ವೀರನಂ
ಬೆನ್ಗ ಬಾಣವನೆಚ್ಚ ಆ ನಿನ್ನ ಕಲಿರಾಮನಂ…..
…ನೀಂನಾರೆಲವೊ ಛದ್ಮವೇಷಿ? ಬಿಲ್ವಿಡಿದಿರ್ಪೆ…
ನೀನೆ ರಾಮನೆ ವಲಂ, ವೀರ ಪಾರ್ಥಿವನಾಗಿಯುಂ
ಕೀಳ್ಮೆಗೇಕೈಯ್‌ ಕಯ್ಯನಿಟ್ಟೆ? ಪೆತ್ತೂರೆಡೆಗೆ
ತಮ್ಮನಂ ಹೊತ್ತು ಕೊಂಡುಯ್ವಣ್ಣನಂ ಬೆನ್ಗೆ
ಹಂದೆತನದಿಂದೆಚ್ಚು ಕೊಂದಯ್!
ದಿಕ್ ನಿನ್ನ ಕಲಿತನಂ! ದಿಕ್ ನಿನ್ನ
ವೀರ ಪಾರ್ಥಿವ ಕೀರ್ತಿ! ಹೇಡಿಯಂದದೊಳಡಗಿ
ದೂರದಿಂದ ಉಗ್ರಬಾಣವನೆಚ್ಚು ಬರ್ದುಕಿದಯ್….
ಚಿ! ಸುಡಲಿ. ನಿನ್ನ ಈ ಪೊಲೆ ಮಾಳ್ಕೆಯಾ ಕೊಲೆಯ ಬಾಳ್ಕೆಯಂ’

ಎಂದು ರಾಮನಿಗೆ ಮನಸಾರೆ ಜರೆಯುತ್ತಾನೆ. ವಾಲಿಯ ಆರೋಪ ಗಂಭೀರವೂ, ಲೋಕ ನೀತಿಯ ದೃಷ್ಟಿಯಿಂದ ಸತ್ಯವೂ ಆಗಿದೆ.

‘ವಿಧಿಯ ವಿನ್ಯಾಸಮಂ ನಿಂದಿಸಿದೊಡೇಂ ಫಳಂ ಸುಗ್ರೀವನಗ್ರಜಾ….’ ಎನ್ನುವ ರಾಮನ ಉತ್ತರ ಅಸಹಜವೂ, ತರ್ಕಹೀನವೂ ಆಗಿದೆ. ಲಕ್ಷ್ಮೀಶನ ರಾಮ ಸೀತೆಯನ್ನು (ಗರ್ಭಿಣಿ) ತ್ಯಜಿಸುವ ಸಂದರ್ಭದಲ್ಲಿ ಸಹೋದರರ ವಿರೋಧಕ್ಕೆ- ‘ಇಂತು ಕರುಳವ್ ಇರಿವುದೆಂದು ತಿಳಿದೆ ನಿಲ್ಲೆನಕಟಾ ….ಧರ್ಮಂ ಇಂತುಟು…..’ ಎಂದು ರಾಮ ಧರ್ಮ ಅಥವಾ ವಿಧಿಯ ಮೊರೆ ಹೋಗುವುವಷ್ಟೆ ತರ್ಕಹೀನವಾಗಿದೆ.

ರಾಮನ ಉತ್ತರದಿಂದ ತೃಪ್ತನಾಗದೆ ವಾಲಿ ಕೇಳುತ್ತಾನೆ.
‘ನಿನ್ನ ಮಡದಿಯನುಸುರನುಯ್ದುದುಂ ವಿಧಿಲೀಲೆ!
ನೀನೇಕೆ ಪರಿತಪಿಸುತಿಹೆ ಮತ್ತೆ
ನಿನ್ನ ವಿಧಿ ನಿನಗೆ, ರಾಕ್ಷಸನ ವಿಧಿ ರಾಕ್ಷಸಂಗೆ. ನಿನ್ನಂತೆ ಕೇಳ್ ಹದಿಬದೆಗಳುಪಿದಸುರನುಂ ಕಡೆಯನೆಯ್ದುವಂ’

ಎನ್ನುವ ರಾಮನ ಉತ್ತರದಲ್ಲಿ ‘ಪತಿವೃತೆಗೆ ಅಳುಪಿದರೆ’ ತಕ್ಕ ಶಿಕ್ಷಯಾಗುವುದು, ರಾವಣನಿಗೂ ಅದೇ ಶಿಕ್ಷೆ ಎಂಬ ಧ್ವನಿಯಿದೆ. ಆದರೂ ವಾಲಿಯ ತರ್ಕದೆದುರು ರಾಮನು ತನ್ನ ಕೃತ್ಯವನ್ನು ಲೋಕನೀತಿಯ ಮಾನದಂಡದಿಂದ ಸಮರ್ಥಿಸಲಾಗದೆ ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತಾನೆ.
‘ಮನ್ನಿಸೆನ್ನಂ ಮಹಾವೀರ. ತಪ್ಪಿದೆನಯ್ಯೊ
ಬ್ರಹ್ಮವರದಾಬಲೆಗೆ ಸಿಲ್ಕಿ ನಿನಗೆ ಆ ವರವೆ ಶಾಪಮಾದುದೋ!
ಕೀರ್ತಿಯನುಳಿಸುವ ವೋಲೆನ್ನನಡಗಿಸಿತೊ,
ಮರೆವೊಕ್ಕನಾ ಮರಕೆ…
ಮಾಡಿದ ತಪ್ಪನೊಪ್ಪಿ ಕೊಳ್ವುದೆ ಲೌಕಿಕದ
ಬೀರಕ್ಕೆ ಸಲ್ಲಕ್ಷಣಂ
….ಅಯ್ಯೋ ಸೀತೆಯನಗಲ್ದು….. ಬಗೆಯ ಕನ್ನಡಿಗೆ
ಮರ್ಬುಕರೆ ಮಂಕಡಿಸಿತಯ್ ….ಕಪಿಕುಲಲಲಾಮ

ಎಂದು ರೋಧಿಸುವ ರಾಮನನ್ನು ನೋಡಿ, ‘ಕಣ್ಣಾರೆ ಕಾಣಸ್ಬಯ್ಪೆನಗೊದಗಿತಯ್‌ ಇಂದು. ನೀಂ ಸತ್ಯವ್ರತನೆ ದಿಟಂ, ಇಲ್ಲದಿರೆ ಸೋಲ್ದು ಉರುಳ್ದರಿಗೆ ತಪ್ಪೊಪ್ಪಿ ಕೊಳ್ಳುವರಿಹರೆ…’ ಎನ್ನುತ್ತ ಶ್ರೀರಾಮನಿಗೆ ಘನತೆಯನ್ನು ಒಪ್ಪಿಸುತ್ತ ರಾಮೈಕ್ಯನಾಗುತ್ತಾನೆ.

ವಾಲಿಮೋಕ್ಷದ ಸನ್ನಿವೇಶ ಸುಲಲಿತವಾಗಿದೆ. ರಾಮ, ಸೀತೆಯ ಅಗಲಿಕೆಯಿಂದ ಉಂಟಾದ ದೈಹಿಕ ನೋವು. ಮತಿಗೆ ಹಬ್ಬಿದ ಮಬ್ಬು ಈ ಅಧರ್ಮಕ್ಕೆ ಕಾರಣವಾಯಿತೆಂದು ಹೇಳಿದರೂ ವಾಲಿ ಇದನ್ನು ‘ವಿಧಿಯ ವಿಲಾಸ’ವೆಂದು ಒಪ್ಪಿಕೊಳ್ಳುತ್ತಾನೆ.

ರಾವಣೋತ್ಕರ್ಷ
‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಕುವೆಂಪು ರಾವಣನ ಉತ್ಕರ್ಷೆಯ ಕುರಿತು ಹೆಚ್ಚು ದುಡಿದಂತೆ ಕಾಣುತ್ತದೆ. ಅವನ ಹೃದಯ ಪರಿವರ್ತನೆ ಮತ್ತು ಅಂತರಾತ್ಮದ ಎಚ್ಚರಿಕೆಯನ್ನು ಸ್ವಪ್ನ ದರ್ಶನಗಳ ಮೂಲಕ ಕ್ರಮ ಕ್ರಮವಾಗಿ ಮಾಡುತ್ತಾ ಹೋಗುತ್ತಾರೆ. ಈ ಪಥದಲ್ಲಿ ರಾವಣ ಮುಂದುವರಿದಂತೆ ಅವನು ಚರಿತಾರ್ಥನಾಗುತ್ತಾ ಹೋಗುತ್ತಾನೆ. ಸೀತೆಯ ಕುರಿತಾದ ಆತನ ವಿಚಾರ ಬದಲಾಗುತ್ತದೆ. ಅಶೋಕವನದಲ್ಲಿ ಸೀತೆಯನ್ನು ಒಲಿಸಲು ವಿಫಲನಾದಾಗ ‘ಇನ್ನೆರಡು ತಿಂಗಳ ಅವಧಿಯಲ್ಲಿ ಸೀತೆ ತನಗೆ ಒಲಿಯದಿದ್ದರೆ ಬಲಪೂರ್ವಕ ಒಲಿಸುವೆನೆಂದು ಮತ್ತು ಅವಳು ಹಟದಿಂದ ಉಪವಾಸ ಮಾಡಿ ಸತ್ತರೆ ತಾನೂ ಚಿತೆಯೇರಿ ಸಾಯುತ್ತೇನೆಂದು ಬೆದರಿಕೆ ಹಾಕುವವರೆಗೆ ರಾವಣ ದುಷ್ಟನಾಗುತ್ತಾನೆ. ತ್ರಿಜಟೆ ಸೀತೆಯನ್ನು ಸಾಂತ್ವನ ಪಡಿಸುತ್ತಾ…’ ‘ರಾವಣ ನಾರಿಯಂ ಮೀರಿಕೂಡುವ ಪೇಡಿಯಲ್ತು’ ಎಂದು ಹೇಳಿ ತನ್ನ ಹೇಳಿಕೆಯನ್ನು ಬಲಪಡಿಸಲು ಅವಳಿಗಾದ ಒಂದು ಕನಸನ್ನು ವಿವರಿಸುತ್ತಾಳೆ. ತನಗೆ ಪದೇ ಪದೇ ಬರುವ ಕನಸುಗಳನ್ನು ರಾವಣ ನಂಬುವುದಿಲ್ಲ. ಅವುಗಳನ್ನು ಮನಸ್ಸಿನ ವಿಕಾರವೆಂದು ಹೇಳುತ್ತಾನೆ. ಆದರೂ ಕನಸುಗಳು ಅವನನ್ನು ಕಾಡುತ್ತಿರುತ್ತವೆ. ಹಾಗೇ ಅಧೀರ ಮನಸ್ಥಿತಿಯ ನಡುವೆ ಶೂರ್ಪನಖಿ ಸೀತೆಯನ್ನು ರಾಮನಿಗೆ ಒಪ್ಪಿಸಲು ಹೇಳುತ್ತಾಳೆ- ‘ನಿನ್ನಾತ್ಮಮೇನಾಡುತಿದೆ… ಸೀತೆಯೊಳ್ ನಿನಗೆ ಇನ್ನುಮಿರ್ಪುದೆ ಅಂದಿನಾ ಕಾಮರುಚಿ….’ ಎಂದು ಕೇಳಿದ್ದಕ್ಕೆ ರಾವಣ ಹೇಳುತ್ತಾನೆ
‘ದಿಟಂ, ನೀಂ ಪೇಳ್ದುದನಿತುಂ ದಿಟಂ
ಸತ್ತುದಾ ಸೀತೆಯೊಳ್ ಕಾಮರುಚಿ… ದಿಟಮಿಂದಿನೀ
ಸೀತೆ ನನಗಂದಿನಾ ಸೀತೆಯಲ್ತು….’

ಸೀತೆಯ ಮೇಲಿರುವ ಹಿಂದಿನ ಕಾಮರುಚಿ ಈಗ ಸತ್ತಿದೆ ಎನ್ನುವ ಸ್ಥಿತಿಗೆ ರಾವಣ ಕನಸುಗಳ ಮೂಲಕ ಬರುತ್ತಾನೆ. ವೇದವತಿ, ಅನಲೆಯರು ಅವನ ಕನಸಿನಲ್ಲಿ ಬಂದು ಸೀತೆಯ ಪತಿವ್ರತೆಯ ಶಕ್ತಿ ದರ್ಶನವನ್ನು ಮಾಡುತ್ತಾರೆ. ಇದರಿಂದ ಸೀತೆಯಲ್ಲಿ ಈಗ ಅವನಿಗೆ ಒಬ್ಬ ಸಾದ್ವಿ ಹದಿಬದೆ ಕಾಣಿಸತೊಡಗಿದ್ದಾಳೆ. ಅವಳಲ್ಲಿ ಪವಿತ್ರಭಾವ ಮೂಡುತ್ತದೆ. ‘ಧನ್ಯನಪ್ಪಾಪೊಳ್ತು ತೊರುತಿರ್ಪುದು ಸಾರೆ ಬರ್ಪಂತೆ’ ಎಂದು ಹೇಳುತ್ತ ತಾನು ಕಂಡ ದಿವ್ಯ ದೃಶ್ಯವನ್ನು ತಂಗಿಗೆ ವಿವರಿಸುತ್ತಾನೆ…. ‘ಕೊಳುಗುಳದಿ ರಘುಕುಲಲಲಾಮನಂ, ಜಗದೇಕವೀರನಂ ಗೆಲ್ದು, ಸೆರೆಯಾಳ್ ಮಾಡಿ. ಲಂಕೇಶ್ವರನ ಗರ್ವವನಿರದೆ ಸೋಲಿಸಿದ ಮೈಥಿಲಿಗೆ ಕಪ್ಪಮನೆ ಕಾಣಿಕೆಯನೊಪ್ಪಿಸುವ ಭವ್ಯದೃಶ್ಯಂ’

ರಾವಣ ದುರ್ಗೆಯ ತಪಸ್ಸು ನಡೆಸಿದಾಗ ಅವನಿಗೆ ಕಾಳಿಯ ರೂಪದಲ್ಲಿ ಸಾಕ್ಷಾತ್ಕಾರವಾಗುತ್ತದೆ. ಅವರ ನಡುವೆ ನಡೆದ ಮಾತುಕತೆ ಮತ್ತು ಅವನು ಧ್ಯಾನದಲ್ಲಿ ಸ್ವಪ್ನ ಸದೃಶ ದೃಶ್ಯವನ್ನು ಕಾಣುತ್ತಾನೆ. ಅದರಲ್ಲಿ ರಾವಣ-ಕುಂಭಕರ್ಣರಿಬ್ಬರೂ ಸಾಯುತ್ತಾರೆ. ಮರುಹುಟ್ಟಾಗಿ ಶಿಶುಗಳಂತೆ ತೇಲಿ ನದಿಯ ದಡಕ್ಕೆ ಬಂದು ಕೂಗುವಾಗ ‘ಬಂದಳಲ್ಲಿಗದೊ ಸೀತೆ! ಮಕ್ಕಳನ್ನೆತ್ತಿ ಮುದ್ದಾಡಿದಳ್! ಪಾಡಿ ಮೊಲೆಯೂಡಿದಳ್. ತೊಡೆಯನೇರಿಸಿದಳ್, ಎದೆಗಪ್ಪಿ, ಲಲ್ಲಯಿಸಿದಳು ತನ್ನವಳಿಮಕ್ಕಳಂ, ಕುಂಭಕರ್ಣನಂತೆ ತನ್ನನುಂ!’ ಮಂಡೋದರಿ ಇದನ್ನು ಕೇಳಿ ಬೆರಗಾದಳು.
‘ಸೀತೆಯೊಳ್ ನಿನಗೀಗಳಿಪೊಂದು ಸಾತ್ವಿಕದ
ಭಾವ ಶುದ್ಧಿಯೆ ದಿಟಂ ಪ್ರತಿಮೆಯಂ ಪಡೆದುದಾ ಸ್ವಪ್ನದೊಳ್’

ಅದಕ್ಕೆ ರಾವಣ –
‘ನಿನಗಿಂ ಮಿಗಿಲ್ ಸೀತೆ
ನನಗೆ ದೇವತೆ, ಮಾತೆ! ಶ್ರದ್ದೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕಳಿಸುತ ಆತ್ಮದುದ್ಧಾರಮಂ
ತಂದ ದೇವತೆ, ಪುಣ್ಯಮಾತೆ !’

ಈಗ ರಾವಣನ ಅಂತರಾತ್ಮ ಪೂರ್ಣ ಬದಲಾಗಿದೆ. ಸೀತೆಯಲ್ಲಿ ಪಾವಿತ್ರ್ಯ ಮತ್ತು ಮಾತೃ ಸ್ವರೂಪವನ್ನು ಕಾಣುವ ದೃಷ್ಟಿ ಬಂದಿದೆ. ‘ಸೀತಾ ಶುಭೋದಯಕೆ ಗೆಲ್ವದಲ್ಲದೇ ನನಗೆ ಗುರಿ ಕೊಲ್ವುದಲ್ತು’ ಎಂದು ಹೇಳಿ ಕೊನೆಯ ಯುದ್ಧಕ್ಕೆ ಹೊರಡುತ್ತಾನೆ.

ದೈತ್ಯ, ದುಷ್ಟ ಅಹಂಕಾರಿ ರಾವಣನಲ್ಲಿ ಸಾತ್ವಿಕತೆಯನ್ನು ತುಂಬಿಸಿ ಸೀತೆಯ ಮುಖಾಂತರ ರಾಮನಿಂದ ಉದ್ಧಾರ ಮಾಡಿಸಿದ ಕುವೆಂಪು ರಚನೆ ರೋಚಕವಾಗಿದೆ. ‘ಪಂಪ ರಾಮಾಯಣ’ದಲ್ಲಿ ನಾಗಚಂದ್ರನ ರಾವಣ ‘ಪರನಾರೀ ಸಹೋದರ’ನಾದರೆ ಕುವೆಂಪು ರಾಮಾಯಣದಲ್ಲಿ ರಾವಣ ಸೀತೆಯನ್ನುಮಾತೆಯಂತೆ ಕಾಣುತ್ತಾನೆ. ಕವಿಗಳು ಮನಸ್ಸು ಮಾಡಿದರೆ ಖಳನಾಯಕರನ್ನು ಹೃದಯ ಪರಿವರ್ತನೆಯ ಮೂಲಕ ಪುನರ್ ವ್ಯಾಖ್ಯಾನಿಸಬಹುದು. ಅದರಲ್ಲಿಯೂ ಕುವೆಂಪು ‘ಮಹಾಕಾವ್ಯಶಿಲ್ಪಿ’ಯಲ್ಲವೇ!

ಸೀತಾರಾಮರ ಅಗ್ನಿಪರೀಕ್ಷೆ
ರಾವಣ ವಧೆಯ ನಂತರ ಕೋಸಲೇಶ್ವರನು (ರಾಮನು) ಮುಂದಣ ನೀತಿಯಂನೆನೆದು ವಿಭೀಷಣನಿಗಾಗಿ ಕಾಯುತ್ತಿದ್ದನು. ವಿಭೀಷಣ ರಾಜರಾಜ್ಞೆ (ರಾವಣ ಮಂಡೋದರಿ)ಯರ ಪೂಜಿತ ಕಳೇಬರಗಳನ್ನು ‘ಮಸಣದೇರಿ’ಗೆ ಏರಿಸಿ ರಾಜ ಗೌರವಕ್ಕಾಗಿ ಲಂಕೆಯ ರಾಜಮಾರ್ಗಗಳ ಮೂಲಕ ಗಂಧ ಪುಷ್ಪಗಳಿಂದಲಂಕೃತವಾದ ಚಿತಾಮಂಚದ ಕಡೆಗೆ ಸಾಗಿಸಿದನು. ಅಂತಿಮ ಸಂಸ್ಕಾರವನ್ನು ಮುಗಿಸಿ, ತನು-ಮನ ಶುದ್ಧಿಯನ್ನು ಮಾಡಿಕೊಂಡು ಆ ರಾತ್ರಿಯೆ ಅವನನ್ನೆ ಕಾಯುತ್ದಿದ್ದ ರಾಮನ ದಿವ್ಯ ಸನ್ನಿಧಿಗೆ ಬಂದನು. ರಾಮಾಜ್ಞೆಯಂತೆ ವಿಭೀಷಣ ಹನುಮಂತನೊಂದಿಗೆ ಅಶೋಕವನಕ್ಕೆ ಬರುತ್ತಾನೆ. ಜೊತೆಯಲ್ಲಿ ಮಗಳು ಅನಲೆ. ಉತ್ಸುಕತೆಯಿಂದ ರಾಮ ಸಂದೇಶಕ್ಕಾಗಿ ಕಾಯುವ ಸೀತೆಯಲ್ಲಿಗೆ ಅನಲೆ ಮೊದಲು ಹೋಗಿ ಸುಖವುಕ್ಕಿ ಸೀತೆಯನ್ನು ಬಿಗದಪ್ಪಿ ಬಾಷ್ಪಲೋಚನೆಯಾಗಿ ‘ಶ್ರೀರಾಮ ಸಂದೇಶಮಂ ಪೊತ್ತಾಂಜನೇಯನಂ ನಿನ್ನ ಸನ್ನಿಧಿಗೆ ಕರೆತಂದು ನನ್ನಯ್ಯನದೊ ಅಲ್ಲೆ ನಿಂತಿಹನಮ್ಮ’ ಎಂದು ಹೇಳುತ್ತಾಳೆ. ‘ಮಗಳೆ ಮಂಗಳದ ವಾರ್ತೆಯಂ ತಂದೆ ಚಿರಸುಖಿಯಾಗು’ ಎಂದು ಸೀತೆ ಅನಲೆಯನ್ನು ಹರಸುತ್ತಾಳೆ. ಅಷ್ಟರಲ್ಲೆ ಹತ್ತಿರ ಬಂದ ಆಂಜನೇಯ ಮತ್ತು ವಿಭೀಷಣರು ‘ಹರಸೆಮ್ಮನ್ನು, ರಾಮನ ನುಡಿಯ ತಂದೆವು ನಿವೇದಿಸಲ್’ ಎನ್ನುತ್ತ ‘ಗುಡಿವುಗುವ ಭಕ್ತರೋಲ್ ಬಾಗಿಲೆಡೆ ಬಾಗಿವರ್, ಗೌರವ ಭಾರಕೆ ಎಂಬಂತೆ’ ಮತ್ತು ರಾಮನಿಗಾಗಿ ಪ್ರತಿ ಸಂದೇಶವನ್ನು ಕೇಳುತ್ತಾರೆ. ‘ಇನಿಯನನ್ ನೋಳ್ವಾಸೆ, ಪುರುಷೋತ್ತಮ ಪ್ರಿಯತಮನ ಪುಣ್ಯ ದರ್ಶನಮೆ ಪರಮ ಪುರುಷಾರ್ಥಕಿಂ ಮಿಗಿಲೆನಗೆ…. ಬೇಡಿನ್ನುಂಟೆ ಪತಿವೃತಾ ಸತಿಗನ್ಯ ಜೀವಿತಾರ್ಥಂ’ ಸೀತೆಯ ಪ್ರತ್ಯುತ್ತರವನ್ನು ಕೇಳಿ ಹನುಮಂತ ಮತ್ತು ವಿಭೀಷಣರಿಬ್ಬರೂ ಕೃತಕೃತ್ಯರಾದರು. ಹನುಮ ವಿಭೀಷಣನಿಗೆ ರಾಮನ ಆಜ್ಞೆಯನ್ನು ನಿರೂಪಿಸಿದನು. ‘ನೀಂ ಪ್ರಭುವಿನಾಜ್ಞೆಯಂತೀ ಲೋಕಮಾನ್ಯೆಗೆ ಶಿರಸ್ನಾನಮಂ ಗೆಯ್ಸಿ, ಶೀಘ್ರದಿಂ ಕರೆದು ತಾ…. ಸಿಂಗರಿಸಿ ಸುಮಗಂಧದಿಂ ಎಂದು ಸೀತೆಗೆ ‘ಪಣೆಮಣಿದು ಬೀಳ್ಕೊಟ್ಟನು’. ನಂತರ ಅನಲೆಗೆ ವಿಭೀಷಣ –

‘ಅನಲೆ, ಬೆರಗು ಬಡಿದು ಇಂತೇಕೆ ನಿಂತಿರುವೆ. ತಡೆಯದೆಯೆ ಯಾನವೇರಿಸು ನಮ್ಮ ಭಾಗ್ಯದೀ ದೇವಿಯಂ, ತ್ರಿಜಟೆಯ ಸಹಾಯದಿಂ, ನಿನ್ನ ತಾಯೊಡಗೂಡಿ. ಪರಿಮಳ ದ್ರವ್ಯಮಯ ನವ್ಯ ತೈಲಂಗಳಂ ಪೂಸಿ, ಮೀಯಿಸು ಸುಖೋಷ್ಣೋದಕ ಧಾರೆಯಿಂ, ಪೊಂಗಿಂಡಿಗಳೊಳೆರೆದು ಪೊರ್ಯ್‌ನಿರ್ಗಳಂ ಮತ್ತೆ ಈ ರಾಮಪತ್ನಿಗೆ ಕನಕ ಲಂಕಾ ಲಕ್ಷ್ಮಿ ತಲೆಯೆತ್ತಿ ನಿಲ್ವಂತೆವೋಲ್, ತೊಡಿಸುಡಿಸು ಮುಡಿಸು ದಿವ್ಯಾಂಬರಾಭರಣಮಂ ಪುಣ್ಯ ಪ್ರಸೂನಂಗಳಂ ಮಿತಿಲೆಯಿಂದಂದು ಕೋಸಲಕೆ ದಿಬ್ಬಣಂಬೋದವೋಲಿಂದೆಮ್ಮ ಲಂಕೆಯಿಂದೀಕೆ. ನವವಧುವೆನಲ್. ಪ್ರಭುವೆಡೆಗೆ, ಬೇಗದಿಂ ಪೋಗವೇಳ್ಕುಂ’

ಎಂದು ಹೇಳಿ ಹೊರಟುಹೋದನು. ಸೀತೆಯನ್ನು ಲಂಕೆಯಿಂದ ರಾಮನ ಜೊತೆಯಲ್ಲಿ ಮದುಮಗಳಂತೆ ಕಳಿಸಿಕೊಡುವ ಸಂಭ್ರಮದ ಕಲ್ಪನೆಯನ್ನು ಕವಿ ವಿಭೀಷಣನ ಮೂಲಕ ಎಷ್ಟು ವಿವರವಾಗಿ ಚಿತ್ರಿಸಿದ್ದಾರೆ.

ಹನುಮ ತಂದ ಸೀತೆಯ ವಾರ್ತೆಯನ್ನು ಕೇಳಿ ರಘುರಾಮ ‘ಬೆಚ್ಚನೆ ನಿಡುಸುಯ್ದನು, ಒಮ್ಮೆ ಧ್ಯಾನಸ್ಥನಾದನು, ಚಾರುಲೋಚನ ತೊಯ್ದವು, ಹಣೆಯ ಮೇಲೆ ಗೆರೆಗಳೆದ್ದು ಹುಬ್ಬುಗಂಟಿಕ್ಕಿತು. ತುಟಿಕಚ್ಚಿ ಕೊರಳು ತುಂಬಿ ಬಂತು. ಅನಿರ್ವಚನೀಯವಾದ ಸಂಕಟ ಮುಖದಲ್ಲಿ ಕಾಣಿಸಿಕೊಂಡು ಧ್ವನಿ ಬಿಗಿಯಾಯಿತು.’ ರಾಣಿ ತಪಸ್ವಿನಿಗೆ ತಗುವ ಮರ್ಯಾದೆಯಿಂದ ನಾನವಳನ್ನು ಸ್ವೀಕರಿಸಬೇಕು ಎಂದು ಗಂಭೀರವಾಗಿ ಹೇಳಿದ. ತುಸು ಹೊತ್ತಿನಲ್ಲಿಯೆ ‘ಧರಣಿ ಪುಲಕಿಸಲ್ ಇಳಿದಳೊಯ್ಯನೆ ಜನಕ-ಜಾತೆ ಕನಕಮಯ ಯಾನದಿಂ’. ಆಕೆಯ ದರ್ಶನಾತುರರಾದ ಲಂಕೆಯ ಜನಸಮುದಾಯ ವಾನರಸೇನಾ ಸಮೂಹದವರು ಗಲಾಟೆ ಕೋಲಾಹಲ ಮಾಡುತ್ತಾ ‘ಗಾಳಿಮಸೆವಂಬುಧಿಯ ಸದ್ದಿನಂತೆ’ ಮುನ್ನುಗುವುದನ್ನು ನೋಡಿ ಶ್ರೀ ರಾಮನ ಮುಖ ರೋಷ ಕರ್ಕಶಮಾಯ್ತು; ಸಿಟ್ಟಿನಿಂದಲೆ ವಿಭೀಷಣನನ್ನು ಹತ್ತಿರ ಕರೆದು ಭೀಷಣ ಧ್ವನಿಯಿಂದ ‘ವಾನರರನ್ನು ಜರೆಯ ಬೇಡ, ಅವರೆಲ್ಲ ನನ್ನ ಪುತ್ರ ಸಮಾನರು. ನನಗಾಗಿ ಯುದ್ಧ ಮಾಡಿದವರು. ಅವರು ಸೀತೆಯನ್ನು ನಿಟ್ಟಿಸುವುದರಿಂದ ಸೀತೆಯ ಮಾನ ಹಾನಿಯಾಗದು. ನನಗೆ ಅವರೆ ಮಾನ ಧನರು. ವಸ್ತ್ರಾದಿಗಳ್ ಮಾನಿನಿಯ ಮಾನವನು ರಕ್ಷಿಪ್ಪವೇಂ’ ಎಂದು ರಾಮ ಹೇಳಿದಾಗ ವಿಭೀಷಣನಿಗೆ ಅಶ್ಚರ್ಯವಾಯಿತು. ಮಾರ್ನುಡಿಯದೆ ನಮಸ್ಕರಿಸಿ ‘ಕರೆತಂದನೊಯ್ಯನೆಯೆ…. ಮಾನ ನಿಧಿ ವೈದೇಹಿಯಂ ರಾಮಸನ್ನಿಧಿಗೆ’. ಅವನ ಸಮ್ಮುಖದಲ್ಲಿ ನಿಂತು ಸಂಚಲಿಯಾದಳಾ ದೇವಿ. ಕಣ್ಣು ಬಾಯಿ ಬಿಟ್ಟು ಜನ್ಮ ಸಾರ್ಥಕವಾಯಿತೆನ್ನುವಂತೆ, ವಾನರ ಪಡೆ ಆ ದೃಶ್ಯವನ್ನು ಧನ್ಯತಾಭಾವದಿಂದ ನೋಡಿತು. ಆದರೆ….

‘ಕಡೆಗಣ್ಣ ಉಪೇಕ್ಷಿಯಿಂದ ದಾಶರಥಿ ನೋಡಿದನು ಮಡದಿಯನು. ಮಿಂದುಟ್ಟು ತೊಟ್ಟಿರ್ದಳಂ, ಮೂಡಿದುದು ಒಳಗೆ ತೃಪ್ತಿ’. ಆಕೆಯನ್ನು ನಿಷ್ಟುರ ಮಾತುಗಳಿಂದ ನೋಯಿಸುವುದು. ನಿರಾಕರಿಸುವುದು ಆತನಿಗೆ ಸಾಧ್ಯವಾಗದ ಮಾತೆಂದು ತೋರಿತು. ನೋಡಿ, ಪತಿದೇವತಾಮುಖವನ್ನು ಉಕ್ಕುವ ಆನಂದದಿಂದ ಏನೋ ಹೇಳ ಬಯಸಿದಳು. ಆಗ ರಾಮ ‘ರಣದಿ ಜಯಿಸಿದೆನೆನ್ನ ಶತ್ರುವಂ ಭದ್ರೆ. ಪಗೆಪಳಿಗಳೆರಡಂ ತೀರ್ಚಿ ಎನ್ನ ಜಪ ಪೌರುಷ ತೇಜಮಂ ಬಿಡದೆ ಸಾಧಿಸಿರ್ಪೆನ್… ನಿನ್ನ ದೆಸೆಗಾಗೆನಗೆ ವಿಧಿ ತಂದ ಕಿಲ್ಬಿಷವನಳಿಸಿದೆನ್’ ಎಂದು ಎಲ್ಲದಕ್ಕು ಸೀತೆಯೆ ಕಾರಣವೆನ್ನುವಂತೆ ಹೇಳಿ ವಾನರರೆಲ್ಲರನ್ನು. ವಿಭೀಷಣನನ್ನು ಹೊಗಳುತ್ತ ‘ನುಡಿಕಡುಗಮಂ’ ಝಳಪಿಸಿದನು. ನಂತರ ನಿಡಿದಾಗಿ ಸುಯ್ದು ‘ಹೂಮುಡಿದು ಬೆಲೆಯುಡೆಯುಟ್ಟು ಪರಿಮಳಂಗಳಂ ಪೂಸಿ, ಸೂಸಿ ನಿಂದಾಕೆಯಂ’ ದುರದುರನೆ ನಿಟ್ಟಿಸಿ ಅವಳ ಅಲಂಕಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದನು. ಪತಿದೇವನ ನಿರಾಸಕ್ತಿಯನ್ನು ಕಂಡು ಅವಳಿಗೆ ಬಿಕ್ಕಳಿಕೆ ಬಂದಿತು. ಅದನ್ನು ನೋಡಿ ‘ಮಾಣ್ ಕಿತವ (ಸುಳ್ಳು) ನಟನೆಯನಿಲ್ಲಿ ಚತುರೆ, ಸಂದುದು ಪೂಣ್ಕೆ… ಕೊಂದೆನ್ ದಶಗ್ರೀವನಂ; ನಿನ್ನ ಪಡೆಯಲಲ್ತು…. ನೀಂ ಸ್ಫುರದ್ರೂಪಿಣೆಯೆ ದಲ್!…. ತಿಳಿಯುವೊಡೆ ತಿಳಿ… ಇಲ್ಲದಿರೆ ತೊಲಗು ನಡೆ, ಮೂರ್ಖೆ. ನೀನೆಲ್ಲಿಗಾದೊಡಂ ಎನ್ನ ಕಣ್ಮುಂದೆ ನಿಲ್ಲದಿರ್….’ ಎಂದು ನಿಷ್ಠುರವಾಗಿ ಹೇಳಿದನು. ಇಲ್ಲಿ ರಾಮ ತನ್ನ ತಾದಾತ್ಮ ಕಳಕೊಂಡಂತೆ. ವರ್ತಿಸುವ ಮೂಲಕ ಮುಂಬರುವ ಸೀತಾಪರಿತ್ಯಾಗದ ಸೂಚನೆಯನ್ನು ಕವಿ ಮೂಡಿಸಿದಂತೆ ತೋರುತ್ತದೆ. ಪತಿಯ ವಾಕ್‌ಶಲ್ಯಕ್ಕೆ ಸೀತೆ ಬೆನ್ಗೆ ಬಡಿಗೆಪೊಯ್ದಂತೆ ಬಾಗಿದಳ್. ಕೆಮ್ಮನೆ ನಿಂತು ನಿಶ್ಚಯಿಸಿದಳ್ ತನ್ನ ಮುಂಬಟ್ಟೆಯಂ ರಾಮನ ಈ ಬಗೆಯ ವರ್ತನೆಯಿಂದ ಗದ್ಗದಿತಳಾದ ಸೀತೆಗೆ ತನ್ನ ಮುಂದಿನ ದಾರಿಯ ದರ್ಶನವಾಯಿತು. ತನ್ನ ಪತಿಗೆ ತನ್ನ ಬಗ್ಗೆ ಸಮಾಧಾನವಿಲ್ಲ ಎಂದರಿತು ‘ತರವಲ್ಲದ ಈ ಕಿವಿಯಿರಿವ ಸೊಲ್ಗಳಂ ಬರಿದೆ ಏತರ್ಕಾಡಿದೈ (ಹಳ್ಳಿಗರು ಹಳ್ಳಿಗರನ್ನು ಬಯ್ಯುವ ರೀತಿಯಲ್ಲಿ) ನೀಂ ರವಿ ಕುಲೋತ್ತಮಾ ರಾಕ್ಷಸಂ ಮುಟ್ಟಿದನೆ… ಒಂದೆ ಬಾಳ್ವೆಯೆಂದು ಈವರೆಗೆ ಅಗಲದೆ ಜೊತೆಗಿದ್ದವು. ಅದುವೆ ನನ್ನ ಚಾರಿತ್ರ, ಭಕ್ತಿ, ಪ್ರೇಮ, ನಿಷ್ಠೆಗಳಿಂದ ಕೂಡಿದ ಶೀಲ. ಅದು ನಿನಗಿಂದು ಕಾಣದಿದ್ದರೆ ನಾನು ಕೆಟ್ಟೆ. …ನಿನ್ನ ಈ ಸಂಶಯಕ್ಕೆ ವಾದವಿಲ್ಲ ಎಂದು ದುಮ್ಮಾನದಿಂದ ಸೀತೆ ನುಡಿದು ಧ್ಯಾನಪರನಾಗಿ ನಿಂತಿದ್ದ ಮೈದುನನಿಗೆ ’ಚಿತೆಯಂ ರಚಿಸು, ಸೌಮತ್ರಿ ಮಿಥ್ಯಾಪವಾದ ಫೂತಕೆ ಸಿಲ್ಕಿದೆನಗೆ ಬಾಳ್ ಮರಗೂಳನಂತೆ ಕೆಂಗೂಳ್… ಪ್ರಭುವಿನಿಂ ತಿರಸ್ಕೃತಳ್, ಶರಣೆನಗೆ ಹವ್ಯವಾಹನನ್ (ಅಗ್ನಿ) ಅಲ್ಲದೆ ಅನ್ಯಂ ಕಾಣೆ!’ ಲಕ್ಷ್ಮಣ ಅಗ್ರಜನ ಕಡೆಗೆ ತೀಕ್ಷ್ಮವಾಗಿ ನೋಡಿ ‘ಏನುಗ್ರನಗ್ರಜನೊ!’ ಎಂದು ತನ್ನೊಳಗೆಯೆ ಅಂದುಕೊಂಡ. ವಾನರರ ಸಹಾಯದಿಂದ ಮಂಟಪದ ಮಧ್ಯದಲ್ಲಿ ಒಂದು ಬೃಹತ್ ಚಿತೆಯನ್ನು ರಚಿಸಿದ. ಎಲ್ಲರೂ ಚಕಿತರಾಗಿ, ಭೀತರಾಗಿ ನೋಡುತ್ತಿದ್ದಂತೆ ಸೀತೆ ತನ್ನ ಮನದನ್ನನ ಪಾದಕ್ಕೆ ಹಣೆ ಒತ್ತಿ, ಕಣ್ಣೀರಿನಿಂದ ಅಹಲ್ಯೆಯ ವಿಮೋಚನೆ ಮಾಡಿದ ಪಾದಗಳನ್ನು ತೊಳೆದಳು. ಮತ್ತೆ ಚಿತೆಯ ಬಳಿಸಾರಿದಳು. ಓ ಅಗ್ನಿ, ನಡೆ-ನುಡಿ, ಆಚಾರ-ವಿಚಾರದಲ್ಲಿ ಈವರೆಗೆ ರಾಘವೇಂದ್ರನನ್ನು ಹೊರತು ಉಚ್ಛರಿಸಿದ್ದರೆ ನನ್ನ ಆಹುತಿ ತಗೊಳ್ಳು. ನೀನೆ ಲೋಕಸಾಕ್ಷಿ, ಪತಿಯ ಪಾದ ಪದ್ಮದಲ್ಲಿ ನಿತ್ಯವೂ ನಾನು ನೆಲೆಸಿದ್ದರೆ ಕಾಯ್ದುಕೊಳ್ಳು…’ ಎಂದು ಅಗ್ನಿಯನ್ನು ಪ್ರಾರ್ಥಿಸಿಕೊಳ್ಳುತ್ತ, ಕೈಮುಗಿದು ಧಗಧಗಿಸುವ ಉಜ್ವಲ ಚಿತಾಗ್ನಿಯನ್ನು ಪೊಕ್ಕಳ್. ಎಲ್ಲರೂ ಹಾಹಾಕಾರ ವೆಬ್ಬಿಸಿ ರೋಧಿಸಿದರು. ಸಾಕ್ಷೀಭೂತನಂತೆ, ನಿಷ್ಠುರ ಶಿಲಾ ಮೂರ್ತಿಯಂತೆ ನಿಷ್ಪಂದನಾಗಿ ಶ್ರೀ ರಾಮ ನಿಂತಿದ್ದ.

ಒಮ್ಮೆಲೆ ಅವನ ಮುಖ ಬೆಳಗಿತು. ಚಲಿಸಿದನು ಚಿತೆಯ ಬಳಿಗೆ. ನೋಡುವವರು ವಿಸ್ಮಯ ಪಡುವಂತೆ ತಾನೂ ಆ ಉರಿಯುವ ಅಗ್ನಿಪ್ರವೇಶ ಮಾಡಿದನು. ಕುವೆಂಪು ಒಟ್ಟು ಕಾವ್ಯಮಯ ಸನ್ನಿವೇಶಕ್ಕೆ ಕೊಟ್ಟ ತಿರುವು ಓದುಗರನ್ನು ವಿಸ್ಮಯಗೊಳಿಸುತ್ತದೆ. ಯಾವುದೇ ರಾಮಾಯಣದಲ್ಲಿ ಸೀತೆಯನ್ನು ಶಂಕಿಸಿ ಆಕೆಯ ಹಿಂದಿನಿಂದಲೆ ರಾಮ ತಾನೂ ಅಗ್ನಿ ಹೊಕ್ಕದ್ದು ಓದಲು ಸಿಗುವುದಿಲ್ಲ. ಕವಿಯ ಸಮತೆಯ ಧೋರಣೆ, ಕಥೆಯಲ್ಲಿ ಮಾರ್ಮಿಕ ತಿರುವನ್ನು ತಂದು ರಾಮನ ಪುರುಷೋತ್ತಮ ನ್ಯಾಯ ಪ್ರಿಯ ಎಂಬ ಬಿರುದನ್ನು ರಕ್ಷಿಸಲು ಮಾಡಿಕೊಂಡ ಮನ ಒಪ್ಪುವ ಬದಲಾವಣೆ ಸ್ಥಿತ ಕಾವ್ಯಧರ್ಮಕ್ಕೆ ವಿಪರೀತವಾದರೂ ಒಗ್ಗುತ್ತದೆ.

ನಂತರ ಕೆಲವೇ ನಿಮಿಷಗಳಲ್ಲಿ ಧಗಧಗನೆ ಉರಿಯುವ ಅಗ್ನಿಕುಂಡದಿಂದ ಪಾವನಾಗ್ನಿ ಸ್ನಾತೆಯಂ, ಕಿರ್ಚಿನುಡಿಯಿಂದ ಕಾಯ್ದತೆರದಿಂದೆ ಕರತಂದನೊಯ್ಯನೆ ಪೊರಗೆ’. ದಿವ್ಯ ತೇಜದಿಂದ ಶೋಭಿಸುತ್ತಿದ್ದ ಆ ಸೀತಾ ಸಹಿತ ರಾಮನನ್ನು ನೋಡಿ ಹರ್ಷೋದ್ಘಾರ ಮಾಡಿತು ಕಪಿಸಂಕುಲ.

ವಿಭೀಷಣನ ಮಗಳು ಅನಲೆ ಬಳಿ ಬಂದು ರಾಮನ ಪದತಲಕೆ ಎರಗಿದಳು. ಉಕ್ಕುವ ಸಂತೋಷದಿಂದ ‘ಮನ್ನಿಸೈ ಸ್ವಾಮಿ, ದೇವಿಯಂ ನಿಂದಿಸಿದ ನಿನಗೆನಿತೆನಿತೊ ತಾಂ ಬೈದೆನ್’ ಈ ಪತಿವೃತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸುವುದು ಸರಿಯಲ್ಲವೆಂದು. ಈಗ ಪೂಜ್ಯೆಯಂ ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ! ಲೋಕತೃಪ್ತಿಗೆ, ಲೋಕ ಮರ್ಯಾದೆಗೊಳಗಾದೆ, ಸರ್ವಲೋಕ ಪ್ರಭುವೆ. ‘ನೀಂ ಲೋಕಗುರು ದಿಟಂ’ ಎಂದು ಹೇಳಿದ ಅನಲೆಯ ಮಾತಿಗೆ ಜನಸಾಗರವು ಸಂತೋಷದಿಂದ ಬೋರ್ಗರೆಯಿತು. ಸೀತೆಯ ಅಗ್ನಿ ಪರೀಕ್ಷೆಗೆ ಕಾರಣವಾದ ತನ್ನ ವರ್ತನೆಯನ್ನು ತಾನೂ ತನ್ನನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿ ಪ್ರಾಯಶ್ಚಿತ್ತ ಮಾಡಿ ಕೊಂಡನು. ವಾಲಿಗೆ ತಾನು ಮಾಡಿದ ಮೋಸಕ್ಕೆ ಅವನು ಸಾಯುವ ಮೊದಲು ಕ್ಷಮಾಯಾಚನೆ ಮಾಡಿಕೊಂಡಂತೆ ಸೀತೆಯ ಚಾರಿತ್ರದ ಕುರಿತು ತಾನು ಒಂದು ಕ್ಷಣ ಸಂತುಲನ ಕಳಕೊಂಡದ್ದಕ್ಕಾಗಿ ಪರಿತಪಿಸುವಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯುತ್ತಿದೆ ಈ ನೀರವ ಗಗನ
Next post ಓಟು-ನೋಟು

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…