ಹೆತ್ತವಳು ಹೊತ್ತವಳು
ಎದೆಯ ರಕ್ತವ ಉಣಿಸಿ
ಮಮತೆ ಧಾರೆಯ ಹರಿಸಿ
ಬಾಳ ಬವಣೆಗೆ ಬಳಲಿ
ಬೆಂಡಾಗಿ ನುಗ್ಗಾಗಿ ಕಷ್ಟಕ್ಕೆ
ಕಲ್ಲಾಗಿ ಸೆಟೆದು ನಿಂತವಳು ನನ್ನಮ್ಮ
ಕರುಳ ಕುಡಿಗಳಿಗಾಗಿ
ದೇಹ ಸೋತರೂ
ಹೋರಾಡಿ ಗೆದ್ದವಳು
ಕಷ್ಟಕ್ಕೆ ಕಂಗೆಟ್ಟು ಬೆದರಿ ಬಂದಗ
ಸರಿತಪ್ಪುಗಳ ಮದ್ಯೆ
ದ್ವಂದ್ವ ನಿಂತಾಗ ಒತ್ತಾಸೆ – ನನ್ನಮ್ಮ
ತಪ್ಪು ನಡೆದಾಘ ಕೆರಳಿ
ಸುಳ್ಳು ನಡೆದಾಗ ಮುನಿದು
ದಿಟ ನಡೆಯ ನಿಜ ನುಡಿಯ
ತಿದ್ದಿ ತೀಡಿದವಳು ನನ್ನಮ್ಮ
ಒರಟು ತನದಲಿ
ತಟ್ಟಿ ಎಚ್ಚರಿಸಿ ತನ್ನ ಕುಡಿಗಳ
ಬದುಕ ಕಟ್ಟಿಕೊಟ್ಟವಳು
ಕತ್ತಲೆಯಲ್ಲೆ ಬದುಕಿ
ಎಲೆಮರೆಯ ಕಾಯಾಗಿ
ತ್ಯಾಗಮಯಿಯಾದಳು
ಸಹಜ ಸಾವನು ಬಯಸಿ
ವೈಕುಂಟ ಕಂಡವಳು
ಅಮ್ಮ ಪದಕ್ಕೆ ಹೆಮ್ಮೆ
ನಿಜಕ್ಕೂ ನನ್ನಮ್ಮ
*****