ಬಾಲಿವುಡ್ನಲ್ಲಿ ತಮ್ಮದೇ ಆದ ಮಧುರ ಹಾಗೂ ಜಾನಪದ ಸೊಗಡನ್ನು ಅಳವಡಿಸಿ, ಇಂಪಾದ ಸಂಗೀತ ನೀಡಿ, ಸಂಗೀತ ಪ್ರೇಮಿಗಳ ಮನ ಗೆದ್ದವರು ಸಲಿಲ್ ಚೌಧರಿ. ಅಮ್ಮ ೨೦ನೇ ವಯಸ್ಸಿನಲ್ಲಿ ಈ ಮೋಡಿಗಾರ ಕಲಕತ್ತಾದ ಆಸ್ಪತ್ರೆಯಲ್ಲಿ ‘ಸಂಗೀತದ ಬದುಕಿಗೆ’ ಭೈರವಿ ಹಾಡಿದರು.
೧೯೨೫ ನವೆಂಬರ್ ೧೯ ರಂದು ಆಸ್ಸಾಂನ ಒಂದು ಟೀ ಎಸ್ಟೇಟಿನಲ್ಲಿ ವೈದ್ಯ ದಂಪತಿಯ ಮಗನಾಗಿ ಇವರು ಜನಿಸಿದರು. ತಂದೆ- ತಾಯಿ ಇಬ್ಬರು ಭಾರತೀಯ ಸಂಗೀತದ ಆರಾಧಕರು. ಸಲಿಲ್ ಅವರು ಕಲಕತ್ತಾದಲ್ಲಿ ಬಿ ಎ ಮತ್ತು ಎಂ ಎ ಶಿಕ್ಷಣ ಪಡೆದರು. ತಮ್ಮ ಸಂಬಂಧಿ ಸಹೋದರರ ಗರಡಿಯಲ್ಲಿ ಹಾಡು, ಸಂಗೀತದ ಅಭ್ಯಾಸ ಮೈಗೂಡಿಸಿಕೊಂಡರು.
೧೯೪೪ ರಲ್ಲಿ ಸಲಿಲ್ ಕಲಕತ್ತಾದ ‘ಇಪ್ಪಾ’ ಸಂಸ್ಥೆಯಲ್ಲಿ (ಇಂಡಿಯನ್ ಪೀಪಲ್ಸ್ ಥೇಟರ್ ಅಸೋಸಿಯೇಷನ್) ಸೇರಿದರು. ಆ ಹೊಸದರಲ್ಲಿಯೇ ಖ್ಯಾತ ಗಾಯಕಿ ಸುಚಿತ್ರ ಮಿತ್ರಾರ ಜೊತೆಯಲ್ಲಿ ಇವರ ಯುಗಳ ಗೀತೆಯ ಧ್ವನಿಮುದ್ರಣವಾಗಿದ್ದೊಂದು ವಿಶೇಷವೇ.
ಸಲಿಲ್ ಬರಿ ಕಲಾವಿದನಾಗಿರದೇ ಕವಿತೆ, ಸಾಹಿತ್ಯ, ಸಂಭಾಷಣೆ ರಚನೆ, ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದರು. ಹಲವಾರು ಕಥೆಗಳನ್ನು ಬರೆದು, ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಕರಾಗಿದ್ದೂ ಅಲ್ಲದೆ ಟಿವಿ ಧಾರಾವಾಹಿಗಳಿಗೂ ಕೆಲಸ ಮಾಡಿದ್ದುಂಟು. ಸಹಪಾಠಿಗಳಾದ ಮೃಣಾಲ್ ಸೇನ್ ರೊಂದಿಗೆ ‘ಜಮೀರ್ ಲಡಾಯಿ’ ನಿರ್ಮಿಸಲು ಯತ್ನಿಸಿದರಾದರೂ ಕಮ್ಯುನಿಸ್ಟ್ ಪಕ್ಷದೊಂದಿಗೆ ನಮ್ಮ ಸಂಬಂಧದ ಫಲವಾಗಿ ಸಲಿಲ್ ಭೂಗತರಾದರು. ಇದರಿಂದ ಚಿತ್ರ ನಿರ್ಮಾಣ ಸಾಧ್ಯವಾಗಲಿಲ್ಲ.
ಸಹಪಾಠಿಗಳಾದ ಹೇಮಂತ ಮುಖರ್ಜಿ, ಹೃಷಿಕೇಶ ಮುಖರ್ಜಿ, ಮೃಣಾಲ್ ಸೇನ್, ಬಿಜು ಭಟ್ಟಾಚಾರ್ಯ ಮತ್ತು ತಪನ್ ಸೇನ್ ಅವರ ಒತ್ತಾಸೆಯಿಂದ ಖ್ಯಾತ ನಿರ್ಮಾಪಕ, ನಿರ್ದೇಶಕರಾದ ಬಿಮಲ್ ರಾಯ್ ಅವರ ತಂಡದಲ್ಲಿ ಸೇರಿದ ಸಲಿಲ್, ೧೯೫೩ ರಲ್ಲಿ ತಯಾರಾದ ‘ದೋ ಭೀಘಾ ಜಮೀನ್’ ಚಿತ್ರಕ್ಕೆ ಸಂಗೀತ ಸಂಯೋಜಿಸಿ ಬಾಲಿವುಡ್ನಲ್ಲಿ ಸಂಗೀತಗಾರರಾಗಿ ಗುರುತಿಸಿಕೊಂಡರು.
ಈ ಚಿತ್ರದ ‘ಧರ್ತಿ ಪುಕಾರ ರೇ’ ಗೀತೆಗೆ ರಷ್ಯಾ ದೇಶದ ನಾಡಗೀತೆಯ ಮಾದರಿಯಲ್ಲಿ ಹಲವಾರು ಹೆಣ್ಣು ಧ್ವನಿಗಳ ಕೋರಸ್ ಬಳಸಿದ್ದು ವಿಶೇಷವಾಗಿತ್ತು.
ಬಿಮಲ್ ರಾಯ್ ಕ್ಯಾಂಪಿನಲ್ಲಿ ಸಲಿಲ್ ಹಲವಾರು ಯಶಸ್ವಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದರಲ್ಲದೇ, ನೌಕರಿ, ಮುಸಾಫಿರ್, ಪರಿವಾರ, ಮಧುಮತಿ, ಪರಾಕ, ಉಸನೆ ಕಹಾ ತೋ, ಕಾಬೂಲಿವಾಲಾ, ಪ್ರೇಮ ಪತ್ರ, ಆನಂದ, ಅನ್ನದಾತ ಚಿತ್ರಗಳಿಗೂ ಸಂಗೀತ ನಿರ್ದೇಶನ ನೀಡಿದರು.
“ಸಲಿಲ್ ಪಾಶ್ಚಿಮಾತ್ಯ ಸಂಗೀತದ ಅನುಕರಣೆ ಮಾಡುತ್ತಾರೆ” ಎಂದು ಕೆಲವರು ಆಪಾದಿಸಿದಾಗ, ೧೯೫೬ ರಲ್ಲಿ ‘ ಪರಿವಾರ’ ಚಿತ್ರದಲ್ಲಿ ಲತಾ ಮಂಗೇಶ್ಕರ ಹಾಡಿದ ‘ಜಾಹಾ ತೋ ಸೆ ನಹೀನಾ ಬೋಲೋ ನ ಕನ್ಹಯ್ಯಾ’ ಗೀತೆಯನ್ನು ಹಂಸಧ್ವನಿ ರಾಗದಡಿ ಸಂಯೋಜಿಸಿ ಬೆರಗುಗೊಳಿಸಿದ್ದರು.
ಹಿನ್ನೆಲೆ ಗಾಯನಕ್ಕಾಗಿ ಹೊಸ ಗಾಯಕರನ್ನು ಬೆಳೆಸಿಕೊಳ್ಳುವುದಕ್ಕಾಗಲೀ ಹೊಸ ರಾಗ ಸಂಯೋಜಿಸುವುದಕ್ಕಾಗಲಿ ಎಂದೂ ಹಿಂಜರಿಯದೆ ಅದನ್ನು ಪ್ರಯೋಗಿಸಿ ಯಶಸ್ವಿಯಾದ ಸಂಗೀತ ಗಾರುಡಿಗ ಸಲಿಲ್.
ಮೊಟ್ಟಮೊದಲ ಬಾರಿಗೆ ಹಿಂದಿ ಚಿತ್ರರಂಗಕ್ಕೆ ಜನಪದ ಸೊಗಡಿನ ಭಾಂಗ್ರಾವನ್ನು, ಅದರ ಭಾಷಾ ಶುದ್ಧತೆಗೆ ಧಕ್ಕೆಯಾಗದಂತೆ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಮೊದಲನೇ ಸಂಗೀತಗಾರ ಎನಿಸಿಕೊಂಡಿದ್ದರು ಸಲಿಲ್.
ಸಲಿಲ್ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಾಗ ಎಸ್ ಡಿ ಬರ್ಮನ್, ಹೇಮಂತ ಮುಖರ್ಜಿ, ಅನಿಲ ಬಿಸ್ವಾಸ್, ನೌಶಾದ್, ಶಂಕರ್-ಜೈಕಿಶನ್, ಸಿ ರಾಮಚಂದ್ರ, ರೋಶನ್, ಮದನ ಮೋಹನ ಮುಂತಾದ ಘಟಾನುಘಟಿ ಸಂಗೀತಗಾರರ ತಂಡವೇ ಅಲ್ಲಿತ್ತು.
ಪಾಶ್ಚಾತ್ಯ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಬೆಸೆಯುವುದು ಆ ಸಮಯದ ಚಲನಚಿತ್ರ ಗೀತೆಗಳ ಸ್ವರ ಸಂಯೋಜನೆಯ ಗುರಿಯಾಗಿತ್ತು.
ಆದರೆ ಸಲಿಲ್ ಅವರು ಈ ಎಲ್ಲಾ ಸಂಗೀತಗಾರರಿಗೂ ಭಿನ್ನವಾಗಿ ರಶಿಯನ್, ಹಂಗೇರಿಯನ್ ದೇಶಗಳ ಜನಪದ ಸೊಗಡನ್ನು ಹಿಂದಿ ಚಿತ್ರಗೀತೆಗಳಿಗೆ ಅಳವಡಿಸಿ ತಮ್ಮ ಸಂಗೀತ ಮಾಧುರ್ಯವನ್ನು ಮೆರೆದಿದ್ದರು.
ಹಿಂದಿಯಷ್ಟೇ ಅಲ್ಲ ಕನ್ನಡ, ಮರಾಠಿ, ತಮಿಳು, ಮಲೆಯಾಳಂ, ತೆಲುಗು, ಅಸ್ಸಾಮಿ ಹೀಗೆ ಬಹುಭಾಷಾ ಸಂಗೀತ ಪ್ರೇಮಿಗಳ ಮನಗೆದ್ದು, ಸಲಿಲ್ ತಮ್ಮ ಪ್ರತಿಭೆ ಮೆರೆದರು. ಕನ್ನಡದಲ್ಲಿ ‘ಸಂಶಯ ಫಲ’, ‘ಒಂದೇ ರೂಪ ಎರಡು ಗುಣ’, ‘ಚಿನ್ನಾ ನಿನ್ನ ಮುದ್ದಾಡುವೆ’ ಮುಂತಾದ ತಮ್ಮ ಮಧುರ ಸಂಗೀತ ಸ್ಪರ್ಶವನ್ನು ನೀಡಿ ಕನ್ನಡ ಸಂಗೀತ ಪ್ರೇಮಿಗಳ ಮನಗೆದ್ದಿದ್ದರು.
ಇಂದಿಗೂ ‘ಮಧುಮತಿ’ ಚಿತ್ರದ ‘ಆಜಾರೆ ಪರದೇಶಿ’ ‘ಸುಹಾನಾ ಸಫರ್’ ‘ಘಡಿ ಘಡಿ ಮೇರಿ ದಿಲ್ ಧಡಕೆ’ ಮಾಯಾ ಚಿತ್ರದಲ್ಲಿಯ ‘ಆಯಿ ದಿಲ್ ಕಹಾಂ ತೇರಿ ಮಂಜಿಲ್’ ಹಾಗೂ ‘ಜಾರೆ ಜಾರೆ ಉಡಜಾ ರೇ ಪಂಛೀ’ ಹಾಗೂ ‘ತಸ್ವೀರ್ ತೇರಿ ದಿಲ್ ಮೈನೆ’ ಮತ್ತು ‘ಕಾಬೂಲಿವಾಲಾ’ ದ ‘ಏ ಮೇರಿ ಪ್ಯಾರೆ ವತನ’, ‘ಗಂಗಾ ಆಯೇ ಕಹಾಂ ಸೆ’ ಇತರೆ ಹಲವಾರು ಗೀತೆಗಳನ್ನು ಕೇಳಿದರೆ ಸಲಿಲ್ ಅವರ ಸಂಗೀತ ಎಷ್ಟು ಮಧುರ ಎಂಬುದು ಅನುಭವವಾಗುತ್ತದೆ. ಆದರೆ ಇತ್ತೀಚಿನ ಹಿಂದಿ ಚಿತ್ರ ನಿರ್ಮಾಪಕರು, ನಿರ್ದೇಶಕರು ಸಲಿಲ್ ಅವರ ಸಂಗೀತವನ್ನು ಸರಿಯಾಗಿ ಬಳಸಿಕೊಳ್ಳದೇ ಹೋದದ್ದು, ಮಾತ್ರ ದುರಾದೃಷ್ಟ.
ಸಲಿಲ್ ಅವರು ‘ಚೆಮ್ಮೀನ್’ ಚಿತ್ರದ (ಮಲಯಾಳಂ) ಸಂಗೀತಕ್ಕಾಗಿ ರಾಷ್ಟ್ರೀಯ ಪುರಸ್ಕಾರದ ಮನ್ನಣೆ ಪಡೆದಿದ್ದರು.
ತಮ್ಮ ಆರೋಗ್ಯ ಸುಧಾರಿಸಿದ ಕೂಡಲೇ ಹೃಷಿಕೇಶ ಮುಖರ್ಜಿಯವರೊಂದಿಗೆ ಸೇರಿಕೊಂಡು ‘ವೀಲ್‌ಚೇರ್’ ಚಿತ್ರವನ್ನು ನಿರ್ಮಿಸುವ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ವಿಧಿಯು ಅದಕ್ಕಿಂತ ಮೊದಲೇ ತನ್ನ ಯೋಜನೆಯನ್ನು (೫.೯.೧೯೯೫) ಅವರ ಸಾವಿನೊಂದಿಗೆ ಕಾರ್ಯಗತಗೊಳಿಸಿತು.
ಸಲಿಲ್ ಚೌಧರಿ ಅವರು ದೈಹಿಕವಾಗಿ ಇಂದು ನಮ್ಮ ಜೊತೆಗಿರದಿದ್ದರೂ, ಅವರು ನೀಡಿದ ಅಸಂಖ್ಯಾತ ಇಂಪಾದ ಗೀತೆಗಳು ಅವರನ್ನು ನಮ್ಮ ಹೃದಯದಲ್ಲಿ ಜೀವಂತವಾಗಿರಿಸಿವೆ.
*****