ಈ ಬೀದಿಯಲಿ ಎಷ್ಟೊಂದು
ಗೂಡಂಗಡಿಗಳು ಹೊಟ್ಟೆ
ಉಬ್ಬಿದ ಬಸುರಿಯಂತೆ ತುಂಬ
ತುಂಬಿಕೊಂಡಿವೆ ಗಿಜ ಗಿಜ ಸಾಮಾನುಗಳು
ಸಂಜೆ ಸೂರ್ಯ ಸುಮ್ಮನೆ ಇಣುಕಿದ್ದಾನೆ.
ಜನರ ಪಾದದ ಗುರುತುಗಳು
ಒಂದರ ಮೇಲೊಂದು ಹೊಂದಿಕೊಂಡಿವೆ
ಗೆರೆಯಂತೆ ಕಾಣುವ ರಸ್ತೆಯಲಿ
ಮಕ್ಕಳ ಕೈ ಹಿಡಿದು ನಡೆದಿದ್ದಾಳೆ
ಬೇರೆ ಬೇರೆ ಬಣ್ಣಗಳು ಅಲ್ಲಲಿ ಚೆಲ್ಲಿವೆ.
ಮಾರುವ ಹಸಿವಿಗೆ ಕೇಳುವ
ಮಾತುಗಳು ತಕರಾರು ಎಬ್ಬಿಸಿವೆ
ಇಲ್ಲಿರುವ ರಾಶಿಗಳ ಸಾಮಾನಿನಲಿ
ಪುಟ್ಟಿಯ ಬಣ್ಣದ ಬಲೂನು ಕಾಣಲಿಲ್ಲ
ಮೋಹದ ಮಗುವಿನ ಕಣ್ಣಂಚಿನಲಿ ನೀರ ಬಿಂದು.
ಬಗೆ ಬಗೆದು ನೋಡುತ್ತಾರೆ
ತೆಗೆ ತೆಗೆದು ಚೌಕಾಶಿ ಮಾಡುತ್ತಾರೆ
ಕೊಟ್ಟು ಕೊಳ್ಳುವ ವ್ಯಾಪಾರ ವಹಿವಾಟು
ದೊಡ್ಡ ರಸ್ತೆಯು ಸಣ್ಣ ಬೀದಿಗೆ ಖಸು ಹೆಚ್ಚಿಸಿದೆ
ನಾಳೆ ಮತ್ತೆ ಬರುವೆನೆಂದು ಸೂರ್ಯ ಸರಿದಿದ್ದಾನೆ.
*****