ಕಣ್ಣೀರಿನ ಕಡಲಿನ ಮೇಲೆ
ಮಿಂಚಿದೆ ನನ್ನೀ ಬಾಳಿನ ಒಲವಿನಲೆ!
ದೂರ ತೋರಿದಾ ನೀಲ ಬೆಟ್ಟಗಳ ನೀಲ ಮುಗಿಲಿನಲ್ಲಿ
ಮುಳುಗು ಸೂರ್ಯನಾ ಕೆಂಪು ಕಾಡಿಗೆಯ ಬಣ್ಣ ಮಡಿಲಿನಲ್ಲಿ
ತಾರೆ ಓರೆಯಲಿ ನಿಂತು ನೋಡುತಿರೆ, ಅಲೆಯು ಮೇಲೆ ಹೊಮ್ಮಿ
ಚಿಣ್ಣ ಚಿಣ್ಣನೇ ದುಗುಡ ಹನಿಗಳಲಿ ಹಾರುತಿಹುದು ಚಿಮ್ಮಿ!
ನಾವು ಪಡೆದುದಿದು; ಜೀವ ನೀಡಿದುದು; ಸಾವು ತಂದುದಿದನೆ?
ಕೇಳಿ ಕಾಡಿ ಯುಗ ಬಾಳ ವಿರಹದಲಿ ತಂದ ಹಸದ ಹದನೆ?
ಗಾಳಿ ಸೆರಗಿನಲಿ ಹೋಳುನಡೆಯುತಲಿ ಮುಗಿಲು ಸಿಡಿಯುವಂತೆ
ನನ್ನ ಬಾಳಿನಲಿ ಚೆನ್ನೆ ಸಾಗಿದಳು ತಾರೆ ಮರಳುವಂತೆ!
ಹಗಲು ಬರುವುದೋ? ಇರುಳು ಕಳೆವುದೋ? ಆಸೆ ಉಕ್ಕಲಹುದೇ?
ಬಾಳ ತುಂಬಿರುವ ಗೋಳ ಮರೆಯುತಲಿ ನಾಳೆ ಒಕ್ಕಲಹುದೆ?
ಚಿಂತೆ ಚಿತೆಗೆ ಬಲಿ ನಿಂತು ಉರಿಯುತಿಹ ತವಕಗೊಂಡ ಮನವ
ಶಾಂತಗೊಳಿಸಲೆಂದೆಂತು ನಡೆಸಿದರು ಕಾಣಲಿಲ್ಲ ಉಷೆಯ!
*****