ಸರಪಳಿ

ಏನೆಲ್ಲ ಅರ್‍ಥ ಒಂದು ಸರಪಳಿಗೆ ನಾಯಿಕೊರಳು, ಕಳ್ಳರ ಕೈಕೊಳ ಹೆಣ್ಣಿನ ಮಾಂಗಲ್ಯ ಮಾನವೀಯತೆಯ ಬಂಧನ ಕೆಲವು ಕಳಚುತ್ತ ಹೋದರೆ ಉಳಿದವು ಬಿಗಿಯಾಗುತ್ತಲೇ ಇರುತ್ತವೆ ಅನುವಂಶಿಕ ಸರಪಳಿ. *****

ಟಿ.ವಿ. ಪ್ರಭಾವ

೧೬ರ ಹಳ್ಳಿ ಹುಡುಗಿ ಸೀರೆ ಎರಡು ಕೊಂಡಾಗಿದೆ ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ ಹುಡುಕಾಟ ನಡೆದಿದೆ ಅಷ್ಟೇ ಅಲ್ಲ ಮೇಕಪ್ ಸೆಟ್ ಹೈ ಹೀಲ್ಡ್ ಬೇಕಂತೆ ಜೊತೆಗೆ ಇನ್ನೂ ಇನ್ನೂ ಓದಿ ಕಾರು ಹೊಡೆಯಬೇಕಂತೆ. *****

ಮೊರೆತ

ಪದೇ ಪದೇ ಕೇಳುತ್ತೀಯಲ್ಲ ಮಗಳೆ, ಸಮುದ್ರದಾಳ ಅಗಲ ಬಣ್ಣ ವಾಸನೆ ರುಚಿ ಅಲೆ, ನೊರೆ, ತೆರೆ ತೇಲಾಡುವ ನೌಕೆ ಹಡಗು ಲಂಗರು ಇವೆಲ್ಲ ಏನೆಂದು! ಅದೆಲ್ಲ ನಾನು ನೀನು ನಮ್ಮ ನಿರಂತರ ಮಹಾ ಮೊರೆತ....

ಒಳತೋಟಿ

ನಾಲ್ಕು ಮಡಿಕೆಯ ಚಪಾತಿಯೊಳಗೆ ಭಾವನೆಗಳನ್ನು ಹೂತು ಲಟ್ಟಿಸಿ ಸಮಾಧಿ ಮಾಡಿದರೂ ತವೆಯ ಮೇಲೆ ಒಂದೊಂದಾಗಿ ಕೋಪಕಾರುತ್ತ ಉಬ್ಬಿ ಕೆಣಕಿ ಬಾಯಿ ಇಲ್ಲದವಳೇ ಎನ್ನುತ್ತ ಬುಸ್ ಎಂದು ಕೈ ಸುಟ್ಟಾಗ ಮತ್ತೆ ಚುರುಕಾಗಲು ಪ್ರಯತ್ನಿಸುತ್ತವೆ.... *****