ಸುಂದರ ಬೆಂಗಳೂರಿನ ಸಿಟಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಕಿಡಿಗೇಡಿ ಬಸ್ಸು ಒಂದು ಗಂಟೆ ತಡವಾದರೂ ಮುಖ ತೋರಿಸಲಿಲ್ಲ.
ನನ್ನೆದುರಿನ ಪಾನ, ಬೀಡಾ, ಸಿಗರೇಟ, ಗುಟಕಾ, ಚಿಲ್ಲರೆ ದಿನಸಿ ಡಬ್ಬಿ ಅಂಗಡಿಯ ಮಾಲಕ ಅಂಗಡಿಯೊಳಗಿನ ಒಂದು ಬುಟ್ಟಿ ಕಸ ಬೆಂಗಳೂರಿನ ಸುಂದರವಾದ ದಾರಿಯ ಮೇಲೆ ಸ್ಥಿತಪ್ರಜ್ಞ ತಪಸ್ವಿಯಂತೆ ಚೆಲ್ಲಿಬಿಟ್ಟ. ನನ್ನ ಹೊಟ್ಟೆ ಚುರ್ ಎಂದಿತು. ಮತ್ತೆ ತನ್ನ ಅಂಗಡಿ ಸುತ್ತಮುತ್ತ ಕಸ ಗುಡಿಸುತ್ತಲೇ ಚಂದ ಮಾಡಿದ. ಸಿಗರೇಟ ಪ್ಯಾಕಗಳು, ಟೆಂಗಿನ ಜುಬ್ರ, ಪ್ಲಾಸ್ಟಿಕ್ ಡಬ್ಬಗಳನ್ನೆಲ್ಲ ದಾರಿಯ ಮೇಲೆ ಎಸೆದು ತನ್ನ ಡಬ್ಬ ಅಂಗಡಿಯ ಸಿಂಹಾಸನವನ್ನೇರಿ ಕುಂತ.
ನನ್ನ ಪೀಡಾ ಬಸ್ಸು, ತಡವಾಗಿದ್ದರಿಂದ, ಕೆಲಸವಿಲ್ಲದ ಸನ್ಯಾಸಿಯಂತೆ ಆ ಕಸದ ಮೇಲೆ ಹಾದು ಹೋಗುವ ಕಾರುಗಳು, ಬಸ್ಸುಗಳು, ಸ್ಕೂಟರ್ ಗಳು, ಲಾರಿಗಳು, ಜನರು, ಶಾಲೆಯ ಮಕ್ಕಳು…. ಅವರನ್ನೆಲ್ಲ ನೋಡುತ್ತಾ ನಿಂತೆ. ದಾರಿಯಲ್ಲಿ ಯಾರು ತಕರಾರು ತೆಗೆಯಲಿಲ್ಲ. ಅದು ಅಂಥ ಅಪರಾಧ ಅಂತ ಯಾರಿಗೂ ಅನಿಸಲೇ ಇಲ್ಲ.
ಸುತ್ತಮುತ್ತ ನೋಡಿದೆ. ಎಲ್ಲ ಅಂಗಡಿಯವರು ಈ ಚಂದನ್ನ ಸಂಜೆಯಲ್ಲಿ ತಮ್ಮ ಅಂಗಡಿ ಕಸಗುಡಿಸಿ, ಚಳಿ ಹೊಡೆದು, ರಸ್ತೆಗೆ ಕಸದ ಗುಂಪಿ ಚೆಲ್ಲಿ, ಅಂಗಡಿಯ ಕ್ಯಾಶ್ ಕೌಂಟರಿನ ಗಣಪತಿ, ಲಕ್ಷ್ಮಿ, ರಾಘವೇಂದ್ರ, ವೆಂಕಟಪತಿ ಸ್ವಾಮಿಗೆ ಧೂಪ ದೀಪ ಸಲ್ಲಿಸಿ, ಸಂಜೆ ಬಿಸಿನೆಸ್ಸಿಗೆ ಬಿಜಿಯಾಗಿದ್ದರು.
‘ಈ ಜನ ಎಂದು ಸುಧಾರಿಸುತ್ತಾರೆ?’ ಅಂತ ನನಗೆ ನಾನೇ ಕೇಳಿಕೊಂಡೆ. ನನ್ನ ಪ್ರಶ್ನೆಗೆ ಪ್ರತ್ಯಕ್ಷ ಉತ್ತರವಾಗಿ ಒಬ್ಬ ಮನುಷ್ಯ ನನ್ನ ಪಕ್ಕದಲ್ಲೇ ಪಿಚಕ್ಕನೆ ಉಗುಳಿದೆ! ನಾನು ಭಕ್ತಿಯಿಂದ ದೂರ ಸರಿದು ನಿಂತೆ!!
ಇದೆಲ್ಲ ಬೇಡ ಅಂತ ದಾರಿಯಲ್ಲಿ ಓಡುತ್ತಿದ್ದ ಸುಂದರವಾದ ಕಾರುಗಳನ್ನು ನೋಡುತ್ತಾ ನಿಂತೆ. ಲೇಟೆಸ್ಟ್ ಮಾಡಲ್ ಕಾರುಗಳೆಲ್ಲಾ ನನ್ನ ಮುಂದೆ ಧೂಳಿನಿಂದ ಗೌರವದ ಸೆಲ್ಯೂಟ್ ಕೊಟ್ಟು ಮುಂದೆ ಸಾಗಿದವು. ಕೆಲವರು ಹುಡುಗಿಯರೂ ಕಾರು ಕರಾಮತ್ ತಾಗಿ ಓಡಿಸುತ್ತಿದ್ದರು. ಅಂಥದೊಂದು ಅದ್ಭುತ ಬೆಲೆಬಾಳುವ ನವನವೀನ ಕಾರೊಂದರ ಸೈಡ್ ಸೀಟಿನಿಂದ ಒಂದು ಕರ್ಪೂರ ಕಾಂತಿಯ ಸಿಗರೇಟ ತುಂಡು ನನ್ನ ಮುಂದೆಯೇ ಚೆಲುವಿನಿಂದ ಉರಿಯುತ್ತಾ ಬಿತ್ತು! ಇದು ಶಿವ ಸಾಕ್ಷಾತ್ಕಾರವೆಂದು ಖುಷಿಪಟ್ಟೆ!
ಪಕ್ಕದ ಗೋಡೆಯಿಂದ ಗಬ್ಬೆದ್ದು ಬರುತ್ತಿದ್ದ ಉಚ್ಚೆ ವಾಸನೆ ನನ್ನನ್ನು ಹುಚ್ಚೆಬ್ಬಿಸಿತು. ಹಲವು ಪ್ರಶ್ನೆಗಳ ಕಾರ್ಖಾನೆಗಳು ನನ್ನಲ್ಲಿ ಹೊಗೆ ಕಾರಿದವು.
ಕೊನೆಗೂ ನನ್ನ ಬಸ್ಸು ಕೈ ಕೊಡದೆ ನವಮಾಸ ಗರ್ಭಿಣಿಯಂತೆ ತುಂಬಿ ತುಳುಕಿ ಬಂತು. ಗಡಬಡಿಸಿ ಹತ್ತಿದೆ. ಹೆಂಗಸರ ಸೀಟಿನಲ್ಲಿ ಗಂಡಸರು ಗಡದ್ದಾಗಿ ಕುಂತಿದ್ದರು. ಹೆಸರು ತಪಸ್ವಿಗಳಾಗಿ ನಿಂತಿದ್ದರು.
ಓಡುತ್ತಿದ್ದ ಆ ತುಂಬಿದ ಗದ್ದಲದ ಬಸ್ಸಿನಲ್ಲಿ ಯಾರೋ ನನ್ನನ್ನು ಹಿಂದಿನಿಂದ ತಿವಿದರು. ಹೊರಳಿ ನೋಡಿದೆ. ಅಲ್ಲಿ ಹೆಂಗಸರ ಸೀಟ್ ಒಂದರಲ್ಲಿ ಕುಂತಿದ್ದ ಸುಂದರ ಅಪರಿಚಿತ ಹುಡುಗಿಯೊಬ್ಬಳು ನನಗೆ ಹೇಳಿದಳು-
‘ಅಂಕಲ್… ಬನ್ನಿ… ಇಲ್ಲಿ ಕೂತುಕೋ ಬನ್ನಿ…’
ತಾನೆದ್ದು, ತನ್ನ ಸೀಟು ತೆರುವು ಮಾಡಿ ನನ್ನನ್ನು ಕುಳ್ಳಿರಿಸಿದಳು. ಆ ಹುಡುಗಿಯ ಮುಖವನ್ನು ತುಂಬಿದ ಪ್ರೀತಿಯಿಂದ ನೋಡಿ ಥ್ಯಾಂಕ್ಸ್ ಅಂತ ಹೇಳಿ ಕುಂತೆ. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು!
ನನಗನ್ನಿಸಿತು… ಇಂಥ ಜನರು ಇಲ್ಲಿದ್ದಾರೆ… ಜನರು ಸುಧಾರಿಸಿದರೆ ನಗರ ಸುಧಾರಿಸುತ್ತದೆ… ಆದರೆ ನಗರವೇ ಸುಧಾರಿಸುತ್ತ ಹೋದರೆ ಅದು ಇನ್ನೊಂದು ದೊಡ್ಡ ಬೀಡಿ ಅಂಗಡಿ ಡಬ್ಬಾ ಆಗುತ್ತದೆ! ಈಗ ನಗರ ಕಟ್ಟುವ ಕೆಲಸ ಮುಖ್ಯವಲ್ಲ, ನಾಗರೀಕರನ್ನು ಕಟ್ಟುವ ಕಾರ್ಯ ಮುಖ್ಯ!
ಮತ್ತೆ ಆ ಹುಡುಗಿಯನ್ನು ಎರಡನೇ ಬಾರಿ ಭಕ್ತಿಯಿಂದ ನೋಡಿದೆ. ಅವಳು ನನಗೆ ಆಶೀರ್ವಾದ ಮಾಡಿದ ತರಹ ಮಂದಹಾಸ ತೋರಿದಳು! ಬಸ್ಸು ಸುಖವಾಗಿ ಸಾಗಿತು!
ಹೆಂಗ ಮರೆಯಲಿ ಆ ಹುಡುಗಿಯನ್ನು?
*****