ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ
ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ!
ಜಗದ ಕೊನೆಯನು ತಂದ ದೂತರಂತೆ
ಪ್ರಳಯ ರುದ್ರನ ಅಂಶ ತಾಳ್ದರಂತೆ
ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು.
ನೀನೇಳಬೇಡ, ಮಗು, ಉಷೆಯೆ ಮಲಗಿನ್ನು!
ನಾಳೆಯಂತೊ ಏನೊ ಎಂಬುದೇತಕೆ ಚಿಂತೆ?
ಬಾಳು ಎಂತೋ ಏಕೋ, ಬರಿಯ ಬಯಕೆಯ ಬೊಂತೆ!
ನಂದುತಿಹ ನನ್ನದೆಯ ನೋವ ನೀ ಕಾಣದಿರು
ಈಗೇಳಬೇಡ, ಮಗು, ಉಷೆಯೆ ಮಲಗಿನ್ನು?
ಹೊಂಗನಸುಗಳು ಬಂದು ನಿನ್ನ ಮುತ್ತಿಡುತಿರಲಿ,
ಆ ಮುತ್ತುಗಳೆನ್ನ ಮುತ್ತು ಮಾಸದೆ ಇರಲಿ.
ಈ ಜಗದ ಕೊರತೆಯ ನನಸದನು ತಾಗದೊಲು
ಏಳದಿರು ಮುದ್ದು ಮಗು, ಉಷೆಯೆ ಮಲಗಿನ್ನು!
ನಾನಿನ್ನ ಜಗದೊಳಗೆ ಮುಂದೊಮ್ಮೆ ಬಂದಾಗ
ನಿನ್ನೊಲವ ಬೆಳಕ ರವಿ ಹೃದಯದಲಿ ಸುಳಿದಾಗ
ನೀನೇಳು ನನ್ನ ಮಣಿ, ಎದೆಯ ಹಗಲಿನ ರಾಗ,
ಆಗ ಕಣ್ತೆರೆ, ಈಗ ಉಷೆಯೆ, ಮಲಗಿನ್ನು!
*****