ನೀರುಣಿಸಿ ಸಲುಹಿದರು ಹುಳುಹತ್ತಿ ಬೆಳೆಯಲಿಲ್ಲಾ !
ತಿಳಿಯಲಿಲ್ಲೆನಗೆ ಮಣ್ಣಲ್ಲಾ ಉಸುಕೆಂದು ಈ ನೆಲಾ!
ಹೃದಯ ಬಟ್ಟಲೊಳು ಭಕ್ತಿ ಹಾಲು; ದೇವನೊಲಿಯಲಿಲ್ಲಾ!
ಬಟ್ಟಲೇ ಎಂಜಲಾಗಿಹುದು; ಮಾಯೆ ಈ ಹೃದಯವಲಾ!
ಚಲುವಾದ ಕಾಯಾಯ್ತು; ತಿನ್ನಲಾಸೆ ಮನಕಾಯ್ತು
ಮರವೇರಿ ಹರಿದು; ಕೆಳಗಿಳಿದು ಒಡೆದೆ; ಹುಳುಕಾಯ್ತು!
ಹೊನ್ನಿನರಮನೆ ಇತ್ತು; ಎದೆಯುಬ್ಬಿ ಮನ ಹೋಯ್ತು
ಓಡಿ ಹಿಡಿಯುತ ನೋಡಿದೆ; ಸ್ವಪ್ನವೆಂದಾಯ್ತು!
ಹಳ್ಳದಲಿ ಈಸಾಡಿ ಸಾಕೆಂದು ಬರುವಾಗ; ಕೇದಗೆವನ !
ತಡೆಯದಾ ಮೂಗು ಕೈಗೆ ದುಡುಕೆಂದಾಗ; ಹಾ! ಹೆಡೆ ಹಾವಿನ
ಜೀವನದಿ ಏಕಾಗಿ ಜೋಕೆಯಿಂದಿರುವಾಗ; ಆಶೆ ಬಂಧನ!
ನೆಚ್ಚಿ ಗುರುವರನ ಬೇಡುವದೇ ಮುಕುತಿ ಮಾನವನ !
*****