ಏರಿ ಏರಿ ಮೇಲೇರುತ ನಭದಲಿ ಹಕ್ಕಿ
ಜವ್ವನದ ಅಮಲಿನಲಿ ಬೀಗುತಿಹುದು ಸೊಕ್ಕಿ |
ಶೈಶವ ಬಾಲ್ಯದ ಗೂಡನೆ ಮರೆತು,
ಮೋಡದಲೆಯ ನೂಪುರದಲಿ ಕುಳಿತು,
ಮುಪ್ಪನು ಕಂಡು ಜಗಿದು ಜರಿದು,
ನಸು ನಗುತಿದೆ ಗರಿಗೆದರಿ |
ರೆಕ್ಕೆ ಪುಕ್ಕ ಕೊಕ್ಕಿನಲುನ್ಮಾದವು,
ನೆತ್ತರ ಕಣ ಕಣ ತುಂಬಿದ ಮದವು,
ಮುಷ್ಠಿಯಿಲೆಲ್ಲವ ಹಿಡಿದಳೆಯುವ ತವಕವು,
ಹಾರುತ ಅಂಕೆಯ ಮೀರಿ |
ಗುಟುಕ ಮನಸುಗಳ ಕಣ್ಣಲಿ ನೀರಿಳಿಸಿ,
ಚಿಟಿಕೆ ಹೊಡೆಯುತಲಿ ಜೊತೆ ಮೇಳೈಸಿ,
ನಿತ್ಯ ಯೌವನಿಗ ಚಿರಂತನ ತಾನೆಂದು,
ಮತ್ತಲಿ ಕುಣಿಯುತ ಹಾರಿ |
ಕಾಲವ್ಯಾಧನು ಬಾಣವ ಬಿಡಲು,
ಕಳಚಿತು ಯೌವ್ವನವು ಮುದುಡಿತು ಗೂಡೆಲುಬು
ಕಾಳುಕಾಳನು ಜೀರ್ಣಿಸಲಾಗದೆ,
ಉಸಿರುಗಟ್ಟಿತು ಹೌಹಾರಿ |
*****