ಹಸಿರು ಗರಿಕೆಯ ಚಿಗುರು ಹಬ್ಬಿ
ಮನದ ತುಂಬ ಒಲವ ಸಿರಿ
ನಿನ್ನೊಂದಿಗೆ ಮಾತ್ರ ಈ ಲೋಕ
ಗುಪ್ತಗಾಮಿನಿ ನದಿ ಹರಿದು
ಗಿಡಮರಗಳ ಮರ್ಮರ ಸಾಕ್ಷಿ
ಎಲ್ಲ ಲೋಕವೂ ನಿನಗಿಂತ ಚಿಕ್ಕದು
ಎಷ್ಟೊಂದು ಕುಸುಮಗಳರಳಿ
ತೀಡಿ ಗಾಳಿ ಗಂಧ ತೇಲಿ
ಎಲ್ಲದಕೂ ಮೂಲ ಬೆಳಕು ನೀನು.
ಹೂವು ಹಕ್ಕಿ ಗಾಳಿ ಕಂಪ ಸವರಿ
ಪೂಜೆಯ ಪರಿ ಅರಳಿ ಸರಿ
ಎಲ್ಲದಕೂ ಲೋಕ ಪರಿಚಾರಕ ನೀನು.
ಹರಿದು ಹಬ್ಬಿ ಚಿಗುರಿ ಚಿಮ್ಮಿ
ಒಡಲಾಳದಲಿ ಸಿರಿಗಂಧ ತೇಲಿ
ನೀನು ಕಾರಣವಾದ ಎಲ್ಲಾ ಪ್ರೀತಿಗೆ.
ಗರಿಸಿರಿಗಳ ಭೂಮಿ ಭಾನು
ನಕ್ಷತ್ರ ಸೂರ್ಯಮಂಡಲ ಮಿನುಗಿ
ಅದರೊಳಗೆ ಹಾಗೆ ಉಳಿದ ಹೋದ ನೀನು
ಎಲ್ಲ ಬೆಳಕ ಕಿರಣಗಳ ಸರಿಸಿ
ಮೋಡ ಮಳೆ ಸುರಿಸಿ ಹರಿಸಿ
ಮಾತು ಮೀರಿದ ನೀನು ಲೋಕಸಿರಿ.
*****