ಇರುಳಿನ ಮಡಿಲಲಿ ಒಲವಿನೊಂದು ಮನ-
ದಾಸೆಯ ನನಸಂತೆ,
ಆಗಸದೊಡಲಲಿ ಚಂದಿರ ನಗುತಿರೆ,
ಜೀವನೆ ಕನಸಂತೆ!
ಒಂದು ಚಕೋರಿಯು ಚಂದಿರನೊಲವನು
ಪಡೆಯಲಂದು ಮನವ
ಭಾವ ಪುಷ್ಪಗಳ ಪರಿಮಳವಾಗಿಸಿ
ಹರಿಸಿತು ಎದೆಯೊಲವ
ಹಕ್ಕಿ ಚಂದಿರನ ಸನಿಯ ಸಾರಲಿಕೆ
ಚಿಮ್ಮಿ ಹಾರುತಿಹುದು.
ಒಲವಿನ ಎಣೆಯಿಲ್ಲದ ಸುಖದಾಸೆಯು
ಸ್ಫೂರ್ತಿಯನಿತ್ತಿಹುದು.
ಹಾರಿ ಹಾರಿ, ಸರಿ ಸಾರಿ ಬೀಳುತಿರೆ,
ಹಕ್ಕಿ ನೋಡಿತಲ್ಲಿ,
ಇರುಳನಲ್ಲ ತನ್ನೊಲವ ಚಂದಿರನು
ಹಗಲ ಹಿಡಿತದಲ್ಲಿ.
ತನ್ನೆದೆಯೊಲವಿನ ಆಸೆಯೆಲ್ಲ ಹುಸಿ
ಹುಡಿಯ ಗುಡ್ಡೆಯಾಗಿ,
ಹಕ್ಕಿ ಚಿಂತಿಸಿತು ಇನಿಯನ ಜತೆಯನು
ಸೇರುವ ಬಗೆಗಾಗಿ.
ಸುಖ ಸಂತೋಷದಿ ನೋಡಿತೊಂದು ಕಿಡಿ
ಬೆಂಕಿ ಮಸಣದಲ್ಲಿ;
“ಇದರ ಉಡಿಯೊಳೆನ್ನೆದೆಯ ನೀಗುವೆನು,
ಉಳಿವೆ ಬೂದಿಯಲ್ಲಿ.
ಮುಂದಕೊಂದು ದಿನ, ಶಿವನು ಈ ಕಡೆಗೆ
ಬಂದೆ ಬರುವನಂದು,
ಚಿತೆಯ ಭಸ್ಮವನು ಕೈಯಲೆತ್ತಿ ಹರ
ಹಣೆಗೆ ಇಡುವ ನಿಂದು.
ಶಂಕರ ಶಿರದಲಿ ರಾಜಿಸುತಿಹನದೊ,
ಇನಿಯನವನ ಬಳಿಗೆ
ಚಿತೆಯ ಭಸ್ಮದಲಿ ಸಾರಿ ಸೇರುವೆನು,
ತ್ಯಾಗ ಒಲವ ನೆರಿಗೆ.”
ಎನುತ ಹಕ್ಕಿ ಹಾರಿತ್ತು ಬೆಂಕಿಯಲಿ,
ಮೂರೆ ಗಳಿಗೆಯಲ್ಲಿ
ಜೀವ ಹಾರಿರಲು, ರವಿಯು ಉದಿಸಿದನು
ಬಾಳ ಮೂಡಲಲ್ಲಿ!
*****