ಖಾಲಿಯಾದ ಬಾನು ನೀಲಿಯಾಗಿದೆ
ಬಿಸಿಲು ಬಗೆಯ ಬೆರಗಿಗೆ
ಮೋಡಗಳು ವಲಸೆ ಹೋಗಿವೆ
ಒಂಟಿ ಹಕ್ಕಿ ಬಿರುಬಿಸಿಲಲ್ಲೂ ಹಾಡುತಿದೆ.
ನೆತ್ತರದ ಕೆಂಪು ಧರೆಯ
ಕಾನ್ವಾಸಿನ ತುಂಬೆಲ್ಲಾ
ತಿಳಿ ಹಸಿರು ಚಿಗುರು ಮರಗಿಡಗಳು
ದಾರಿಯಲಿ ಯಾರ್‍ಯಾರೋ ದಾಟಿ ಹೋದ ಹೆಜ್ಜೆಗಳು.
ಕರಿ ಡಾಂಬರು ರಸ್ತೆ ಹುಟ್ಟು
ಹಾಕಿವೆ ಬಿಸಿಲ ಕುದುರೆ
ಮೌನದಾರಿಯಲಿ ಮಾತುಗಳು
ಸುಮ್ಮನೆ ಬಾಯಿ ಮುಚ್ಚಿಕೊಂಡಿವೆ
ನದಿಯ ನೀರು ಇಂಗಿ ಜಲ
ತುಸು ಬಿಣಚು ಕಲ್ಲುಗಳು
ಯಾರ್‍ಯಾರೋ ದಾರಿ ಹೋಕರು
ಹೇಳಲಿಲ್ಲ ವಿದಾಯ ಉಸಿರು ಕಂಪಿಸಿತು.
ಹಸಿವೆಯ ಜೀವ ನಿರಂತರ
ಮಿಡಿಯುತಿದೆ ಒಂದು ದಿನ
ಮೇಲಿಂದ ಇಳಿದು ಬರುವ ಜೀವ
ಜಲ ಹರಿದು ಜಗದ ಪರಿವರ್ತನೆ.
ಅರೆದುಕೊಂಡ ಬದುಕಿಗೊಂದು ಕಾಲ
ಋತು ಹಕ್ಕಿ ಹಾರಬೇಕು ಬಾನು ನೀಲಿಯಲಿ
ಎಲ್ಲೋ ಹಬ್ಬಿದ ಸಂಬಂಧದ ಎಳೆಗಳು
ಬೆಳೆಸಬೇಕಾದ ಬೆಳಕು ಸೂರ್ಯ.
*****