ರೊಟ್ಟಿ ತಟ್ಟೀ ತಟ್ಟೀ ಅವ್ವನ
ಕೈಯ ರೇಖೆಗಳು ಕರಗಿ
ಚಿಕ್ಕೀ ಬಳೆಗಳು ಮಾಸಿವೆ
ಒಲೆಯ ಖಾವಿಗೆ ಅವಳ ಬೆವರ,
ಹನಿಗಳು ಇಂಗಿ ಆವಿಯಾಗಿ ಮೋಡ
ಕಟ್ಟಿವೆ ಮನೆಯ ಮಾಡಿನ ಮೇಲೆ
ಅವಳೀಗ ನೀಲಿ ಆಕಾಶದ ಜೀವ ಹನಿ.
ಬಸವಳಿದ ಹೆರಿಗೆ ಮನೆ ಸಂಭ್ರಮ
ಸಾಂಬ್ರಾಣಿ ಹೊಗೆಯ ಅಗ್ನಿಕುಂಡ
ಬೆವರ ಋಣ ಉಪ್ಪಿನ ಋಣ
ಎಲ್ಲವನ್ನು ಅಂಟಿಸಿಕೊಂಡ ಅಡುಗೆ ಮನೆ,
ಗೋಡೆ ಅಲ್ಲಲ್ಲಿ ಹಕ್ಕಳು, ತೇಪೆಯ ಸಾರಣಿ
ಹಿಡಿದ್ದಾಳೆ. ತಿಕ್ಕಿದ ಕೊಡಪಾನಗಳಲಿ
ತುಂಬಿ ಜೀವಜಲ ಅವಳು ನದಿಯಾದವಳು.
ಕಣ್ಣು ಮುಚ್ಚಿ ನಿದ್ರಿಸುವ ಕರುಳ ಬಳ್ಳಿ
ತಟ್ಟಿ ಹಬ್ಬಲೆಂದು ಚಪ್ಪರ ಹಾಕಿ
ಪ್ರೀತಿ ಮಮತೆಯ ನೀರೆರೆದು
ಅಂಟಿನ ದಂಟಿನಲಿ ಮೊಗ್ಗು ಅರಳಿಸಿ
ಹಂತ ಹಂತಕ್ಕೇರಿಸುವ ಮಲ್ಲಿಗೆ ಗಿಡ
ಘಮ್ಮೆಂದು ಸೂಸಿ ಸೌರಭ ಒಳ ಹೊರಗೆ
ಗಾಳಿ ಗಂಧವಾಗಿ ಪಸರಿಸಿ ಚಂದನವಾದವಳು.
ಕಣ್ಣ ಬೊಂಬೆಯ ಒಲವಿನಲಿ ಕನಸು ಹರಡಿ
ಕೈ ಹಿಡಿದು ಕಾಲ ಚಲನೆ ಕಲಿಸಿದವಳು
ಪ್ರೀತಿ ಮನಕೆ ಬೀಜಬಿತ್ತಿ ಹಸಿರು ಚಿಗುರಿಸಿ
ಹದ ಮಾಡಿದ ಭೂಮಿ ತುಂಬ ಚರಗ ಚೆಲ್ಲಿ
ನಿಚ್ಚಳದ ಹಾದಿಯಲಿ ಸಾಲು ದೀಪವಿರಿಸಿ
ಎದೆಯ ಹಾಲಿನ ಪಾಯಸ ಉಣಿಸಿ
ಒಲವ ಹುಟ್ಟಿಸಿ ದೇವರ ಮನೆಯ ಮೂರ್ತಿಯಾದವಳು.
*****