ಜಗವು ತೆರೆದ ಬಾಗಿಲು ಹೃದಯಗಣ್ಣ
ತೆರೆದು ನೋಡು ಸೃಷ್ಟಿ ಸತ್ಯ ತಿಳಿಯಲು ||ಪ||
ಬಾನು ಇಳೆಯು ವಾಯುವಗ್ನಿ
ಜಲವು ಜೀವ ಕಾರಣ,
ಜೀವ ದೇವ ದ್ವೈತಾದ್ವೈತ
ಸೃಷ್ಟಿ ಸೊಬಗ ತೋರಣ |
ಭೂಮಿ ಬಾನಿನೊಡಲು ಕಡಲು
ಹಸಿದ ಬಸಿರನ್ಹೂರಣ,
ಬಣ್ಣ-ಬಣ್ಣ-ಬಣ್ಣ ಕಣ್ಣ
ಭಾವ ಭಿನ್ನ ದೌತಣ |
ಚಿತ್ತ ಚೈತ್ಯ ಚೈತ್ರ ಚಿತ್ತು
ನಿತ್ಯವರಳೋ ಮೂಡಣ,
ಶಾಂತ ಶಮ ಶರಣ್ಯ ಶಕುತಿ
ಸಮರಸವದು ಪಡುವಣ |
ಚುಂಚದಂಚುನಂಚಿನಲ್ಲೂ
ಹರುಷ ರವದ ರಿಂಗಣ,
ಮಿಗದ ಮೊಗದ ಕ್ರೂರದಾಚೆ
ಮಾತೃ ಮಮತೆ ಪೋಷಣ, |
ಹೊರಳಿ ಹೊರಳಿ ಮರಳುತಿಹುದು
ಹಗಲಾರುಳಿನೆ ಅಂದಣ,
ಯುಗದಾದಿಯಿಂದ ಸಾಗುತಿಹುದು
ಸೃಷ್ಟಿ-ದೃಷ್ಟಿ ಸಮ್ಮೇಳನ
*****