ಕರಿಮೋಡ ಕರಗಿ
ಹರಿದು ಹರುಷದ ಧಾರೆ
ಭೂದೇವಿ ಮೈತುಂಬಿ ಬರಲಿ.
ಬಾಳ ದೀಪಗಳು ಬೆಳಗುತ್ತಾ ಇರಲಿ
ಮನ-ಮನೆಗಳು ನಗುತಲಿರಲಿ.
ಜಾತಿ ವಿಜಾತಿಯ ತೊರೆದು
ಭಾತೃತ್ವವ ಮೆರೆದು
ಒಂದಾಗಿ ದೀಪ ಹಚ್ಚೋಣ.
ಭಾರತಾಂಬೆಯೆ ನಮ್ಮ
ಜನ್ಮ ನೀಡಿದ ತಾಯಿ
ಒಂದಾಗಿ ರಕ್ಷೆ ನೀಡೋಣ.
ಹರಿವುದೊಂದೇ ರಕ್ತ
ಕುಡಿಯುದೊಂದೇ ನೀರು
ಮತ್ತೇಕೆ ಹಗೆತನದ ತಂತ್ರ.
ಒಂದೆ ಅಮ್ಮನ ಹಾಲು
ಕುಡಿದಂಥ ನಾವು
ಹಾಡೋಣ ಐಕ್ಯಮಂತ್ರ.
ಸಾಮರಸ್ಯದ ಬದುಕು
ಇದೆ ನಮ್ಮ ಕನಸು.
ನಂದಿ ಹೋಗಲಿ ತಾಪ.
ನೋವಿರಲಿ ನಲಿವಿರಲಿ
ನಗುತ ಸಾಗುವ ನಾವು
ಹಚ್ಚೋಣ ಲಕ್ಷ ದೀಪ.
*****