ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? –
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಒಂಟಿಯಾಗಿ ಈ ಬೆಟ್ಟ ಸುತ್ತಿದವನು
ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು
ಅವುಗಳ ಮೈಯ ಮುಂಜಾನೆಯ ತಂಪು
ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ
ಕೈಯಲ್ಲಿ ಸ್ಪರ್ಶಿಸಿದವನು
ಆಹ! ಅದೆಂಥ ಸಂಗೀತ
ಎಲ್ಲರೂ ಮಲಗಿರುವ ಹೊತ್ತು,
ಸಮುದ್ರದೊಳಗಿಂದ ಬೀಸಿದ ಗಾಳಿ
ಹುಲ್ಲು ಹೂವುಗಳ ನಡುನಡುವೆ ಸುಳಿದು
ಎಬ್ಬಿಸುವುದೇನು ಕಚಗುಳಿ
ತಿಂಗಳ ಬೆಳಕು ನೀರಲಿ ಬಿದ್ದು
ತಳತಳಿಸುತಿರುವಾಗ
ಎಚ್ಚರಾದವರೆಷ್ಟು ಎದ್ದು ಕುಳಿತವರೆಷ್ಟು
ಮೈಖೆಲೇಂಜೆಲೊ ಹೇಳು ಎಲ್ಲ ತಿಳಿದವನು ನೀನು
ಶಬ್ದಗಳ ಹುಡುಕುತ್ತ ನಾನು
ಇಷ್ಟು ದೂರವು ಬಂದೆ
ಇನ್ನು ಇಲ್ಲಿಂದ ಮುಂದರಿಯಲಾರೆ–
ಮುಂದರಿಯದಿರಲಾರೆ ಎನ್ನುತ್ತಲೇ
ನಿನ್ನ ಗುರುತನು ಕಂಡೆ
ಶತಮಾನಗಳು ಕಳೆದುದು ನಿಜ
ಬಿಸಿಲು ಮಳೆಗಳು ಬಂದು ಹೋದುದು ನಿಜ
ಈ ಸಮುದ್ರವೂ ಮೊರೆಯಿತು
ಅದಷ್ಟೋ ಬಾರಿ
ಕಾದು ನಿನ್ನ ದಾರಿ-
ನನ್ನ ತೀರಗಳು ಬೇರೆ
ನನ್ನ ಮಳಲಿನ ಬಣ್ಣ ಬೇರೆ
ನನ್ನ ಶಿಲಾರೂಪಗಳು ಬೇರೆ
ಆದರೇನಾಯಿತು
ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು
ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ
ಹರ್ಷ ಬದಲಾಗುವುದೆ
ಯಾರಲ್ಲೂ ಹೇಳದಂಥ ಸಂ-
ಘರ್ಷ ಬದಲಾಗುವುದೇ
ಅಹ! ಶಬ್ದಗಳ ಹುಡುಕುತ್ತಲೇ
ಕೇಳಿಸುವುದೇನು ಶಬ್ಧ!
ಅಂಬಿಗನ ಹಾಡೆ
ಕಮ್ಮಾರನ ಹೊಡೆತವೆ
ಅತಿ ನಸುಕಿಗೇ ಎದ್ದ
ಬೆಸ್ತನೊಬ್ಬನ ನಡೆತವೆ
ನನ್ನದೇ ಎದೆ ಬಡಿತದ
ಯಾವ ಶಬ್ದಗಳಲ್ಲಿ ಯಾವ ಅರ್ಥಗಳು
ಮೈಖೆಲೇಂಜೆಲೊ ಹೇಳು
*****