ಮತ್ತೇನಿಲ್ಲ ಅಲ್ಲಿ ಒಂದು ಬ್ರಷು
ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ
ಕರಿ ಮಸಿಯ ಚಿತ್ತಾರ
ತೊಟ್ಟಂಗಿಯ ಸುತ್ತ
ತಂಡಿ ಅಡರಿದ ಕೆಟ್ಟ
ಮುಂಜಾನೆಯಿರಲಿ
ಜಿಟಿಜಿಟಿ ಮಳೆಯ ಜಿಗುಟು
ಪ್ರಾತಃಕಾಲವೇ ಬರಲಿ
ಉರಿ ಬಿದ್ದ ಬೇಸಿಗೆಯ
ಬಿಸಿ ಬೆಳಗೆ ಆಗಲಿ
ತಟ್ಟಿ ಎಚ್ಚರಿಸೆ ಪುಟ್ಟ ದೇಹದ
ಆ ದಿಟ್ಟ ಬಾಲಕ ಪಟಕ್ಕನೆ
ಎದ್ದು ಬಿಡುವ ದಿನದ ಕಾಯಕಕೆ
ಮನ ಮುದುಡಿರುವಾಗ
ಆ ಕೈಗಳೂ ಮಾತ್ರ ಎಡರಿಲ್ಲದೇ
ಕುಣಿಯತ್ತವೆ ಆಕಾರಕ್ಕೆ ತಕ್ಕಂತೆ
ಕೈಲಿಡಿದ ಚಪ್ಪಲಿಗೆ
ಹೊಳಪು ನೀಡುವ ಕ್ರಿಯೆಗೆ
ಹಸನು ಬಾಳಿನ ಕನಸು
ಕಣ್ಣಾಲಿಯ ಕೊನೆಯಲ್ಲಿ
ಮತ್ತೆ ಹೆಗಲ ಹೊರೆ
ಹೊಣೆಗಾರಿಕೆಯ ಕಟ್ಟು
ಪಾಟಿ ಚೀಲದ ಹುಡುಗ
ಕಣ್ಮುಂದೆ ಸರಿದರೂ ಸಾಕು
ಅತ್ತಲೇ ಕೀಲಿಸಿದ ನೋಟ
ಮತ್ತೆ ಸದ್ದಿಲ್ಲದೇ ತೊಯ್ದ
ಕಣ್ಣ ಕೆಳಗಿನ ಗಲ್ಲ
ಮಸಿಗೊಂಡ ಮೃದು ಹಸ್ತಗಳು
ಹಪಾಹಪಿಸುತ್ತಿವೆ ಹಿಡಿಯಲು
ಹೊತ್ತಿಗೆಯ
ಹಗೆತ್ತಮ್ಮ ಜೊತೆಗೂಡಿ
ಹೆಜ್ಜೆಯಿಡುವುದು ಆಸೆ
ಗೆಳೆಯರೊಂದಿಗೆ ಸೇರಿ
ಚೆಂಡಾಡುವುದು ಆಸೆ
ಆದರೆ,
ಮಸಿಕೊಂಡರಷ್ಟೆ ಆ ಕೈಗಳು
ತುಂಬುವುದು ಒಡಲು
ಹೆತ್ತವರು ಅಳಲು
ಎಂತಲೇ
ಆಸೆಯೆಂಬ ಬುಟ್ಟಿಗೆ
ಬಟ್ಟೆಯ ಕಟ್ಟಿ
ಮುಚ್ಚಿಡುವ ಮುಗುದನ
ಅದೇ ಕೈಗಳು
ಜೋತು ಬೀಳುತ್ತಿವೆ
ಅದೇ ಕಾಯಕಕೆ ಹೊರತಿಲ್ಲದೇ
ಟಾಕು ಟೀಕಾದ ಸೂಟುಧಾರಿಯ
ಬೂಟು ಮಿರಿಮಿರಿ ಮಿಂಚಿದಷ್ಟು
ಆಸೆಗಂಗಳ ಆ ಹುಡುಗ
ಕರಿಕೈಯ ಚಾಚುತ್ತಾನೆ
ಎರಡು ರೂಪಾಯಿ ನೋಟಿಗಾಗಿ.
*****