ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ
ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ
ಹೊರಟೆ ಹೋಯಿತು ಎನಿಸುತ್ತದೆ
ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ
ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ ಬಂಧಗಳ
ಹೇಗಿದ್ದೀತು ಅದು? ದಾಹವೆ ಸೆಖೆಯೆ ಚಳಿಯೆ
ಭಯವೆ ಮರೆವೆಯೆ ನಿದ್ರೆಯೆ?
ಪ್ರಳಯದ ಕಲ್ಪನೆ ಮಾಡುತ್ತೇನೆ
ಗೋರಿಗಳು ಬಿರಿದರೆ ಕಂಕಾಳಗಳು ಕುಣಿದರೆ
ಕತ್ತಲೆ ಹಗಲ ನುಂಗಿದರೆ
ಹೇಗಿದ್ದೀತು ಅದು? ಜೋನನ ಭೀಕರ ಪ್ರವಾದಗಳ ಚಿತ್ರಗಳು
ಕಣ್ಣಿಗೆ ಕಟ್ಟುತ್ತವೆ ಬೆಂಕಿಯ ಕುದುರೆಗಳು ಕೆನೆಯುತ್ತವೆ
ಹೆದರಿಸುವ ಶಬ್ದಗಳಿವೆ
ಈಚೆ ಪರಂಪರೆಯ ವಿಶ್ವಾಸಗಳಿವೆ
ಸಮುದ್ರ ಏಳುವ ಎಲ್ಲವೂ ಮುಳುಗುವ
ಕ್ರೂರ ಪರ್ಯಾವಸಾನದ ದೀರ್ಘ ಮೌನದಲ್ಲಿ
ಅದು ಇದ್ದೀತೆ ಹೀಗೆ ಆಕಾಶ ದೊಪ್ಪನೆ ಬಿದ್ದು ವಸ್ತುಸ್ಥಿತಿ
ಸ್ಥಿತ್ಯಂತರದ ಅರೆಕ್ಷಣದಲ್ಲಿ ಕ್ಷಯಿಸಿ ಇನ್ನೊಂದೇ ಸ್ಥಿತಿಯೂ ಇರದೆ
ಆಕಾಶ ಬಿರಿದಂತೆ ಆಕಾಶ
ಇದ್ದೀತೆ ಅಂಥ ಆಕಾಶವೂ ಇಲ್ಲದೇ ಯಾವುದೂ
ಇಲ್ಲದ ಅಂಥ ಋಣಸ್ಥಿತಿಯ ವಿರೋಧಾಬಾಸ
ಈ ಸೃಷ್ಟಿಯ ಆರಂಭದಲ್ಲೂ ಇದ್ದರೆ ಇದೆಲ್ಲದರ
ಅವಸಾನದಲ್ಲೂ ಇದ್ದರೆ ಈ ಮಧ್ಯೆ
ನಿಶ್ಚಿತ ಪ್ರತೀಕ್ಷೆಯಲ್ಲಿ ಕಟ್ಟಿಗೆಯೊಟ್ಟಿ ತಯಾರಾದ ವ್ಯಕ್ತಿಗಳ
ಆ ಜನಾಂಗದ ಹುಟ್ಟಿನ ಸಾವಿನ ನಡುವೆ ಕರ್ಮದ
ಮರೆವಿನಲ್ಲಿ ಬುದಕಿದ ಹುಸಿ ಬದುಕಿನ ಹಾಗೂ
ಸ್ವರ್ಗ ಮೋಕ್ಷಗಳ ಸ್ವಯಂಕೃತ ಭ್ರಮೆಯ ಬ್ರಹ್ಮ ಪರಬ್ರಹ್ಮದ
ಸ್ವಸಮಾಧಾನ ಸ್ವಸ್ಥತೆಯ ಕಲ್ಪನೆಯನ್ನೂ ಛಿದ್ರಿಸಿ
ಅಲೆಹೊಡೆವ ಪ್ರಜ್ಞೆ
ವ್ಯಕ್ತಿಯ ನಾಡಿಯಲ್ಲೂ ಜನಾಂಗದ ಪ್ರವಾಹದಲ್ಲೂ
ಹರಿಯುತ್ತಲೇ ಇರುವಾಗ ಇದರ ಕ್ರೌರ್ಯದ ಕೆಳಗೆ
ಅವಸಾನಿಸುವ ಆರಂಭಗಳು ಹುಟ್ಟುವ ಮೊದಲೇ
ಸಾಯುವ ಸೃಷ್ಟಿಗಳು.
*****