ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ
ಅವರೇ ಇದ್ದರು
ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ
ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು
ನಕ್ಕರು ವಿಚಾರಿಸಿದರು ಉಪದೇಶಿಸಿದರು
ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ
ನರನರ ಎಳೆದಾಗಲೂ ಕಣ್ಣು ಸುತ್ತಿದಾಗಲೂ ಪಂಚಾಗ್ನಿ ಮಧ್ಯೆ
ಕರಗಿದಾಗಲೂ ನಾನು
ಉದ್ದವಾಗಿ ಭಾರವಾಗಿ ಎಳೆದೆಳೆದು ಗರಗರಾ
ಉಪದೇಶಿಸಿದರು
ಅರ್ಥವಾದಂತೆ ಅನ್ನಿಸಲಿಲ್ಲ ಅನಿಸದೆ ಈಚೆಗೆ ಬಂದೆ
ಬಂದಾಗ ಅವರು ಕೆಕ್ಕರ ನೋಡಿದರು ನೋಡನೋಡುತ್ತ ಭಂಗಿ
ಬದಲಿಸಿದರು ಒಂದು ಠೀವಿಯಿಂದ ಇನ್ನೊಂದಕ್ಕೆ ಹೊಕ್ಕರು ಹೊಕ್ಕು
ಬೇತಾಳ ನೆರಳು ಬೆಳೆದು ಆಕ್ರಮಿಸಿ ಬಂದು ಹಿಡಿದು
ಕಟ್ಟಿ ಕೆಡವಿದರು ಕೋರ್ಟಿಗೆ ಎಳೆದೊಯ್ದರು
ಅಲ್ಲಿ ನಿಲ್ಲಿಸಿದರು ಬೆರಳು ತೋರಿಸಿ ಆರೋಪಿಸಿದರು
ಪ್ರಶ್ನೆಗಳನ್ನು ಹಾಕಿದರು ಉತ್ತರಿಸಿದರು ವಾದಿಸಿದರು
ತೀರ್ಪಿತ್ತರು ಕೊನೆಗೆ ಇಂಚಿಂಚಾಗಿ ಕೊಂದರು
[ಕಾಫ್ಕಾ’ನ ದಿ ಟ್ರಯಲ್ ಓದಿದ ಮೇಲೆ ಬರೆದುದು]
*****