ನನ್ನ-ನನ್ನಂತವರ ಹುಟ್ಟಿನೊಂದಿಗೇ
ಆಳ ಬೇರು ಬಿಟ್ಟು ಬೆಳೆದ
ಎಷ್ಟೊಂದು ಎಂದೆಂದೂ
ಕೇಳಲಾಗದ ಪ್ರಶ್ನೆಗಳು!
ಸೀತೆ ಸಾವಿತ್ರಿ ಅಹಲ್ಯೆ ಎಂದೂ
ಕೇಳದ ಪ್ರಶ್ನೆಗಳು
ದ್ರೌಪದಿ, ಗಾರ್ಗಿ, ಸಂಚಿಹೊನ್ನಮ್ಮ
ಕೇಳಿಯೂ ಉಳಿದ ಪ್ರಶ್ನೆಗಳು!
ಆದಿ ಅಂತ್ಯವಿಲ್ಲದೇ
ದಶಮಾನ ಶತಮಾನ ಸಹಸ್ರಮಾನಗಳಿಂದ
ಬಹುಶಃ ‘ಈವ್’ಳ ಹುಟ್ಟಿನೊಂದಿಗೇ
ಹುಟ್ಟಿಕೊಂಡ ಉತ್ತರಗಳೇ ಇಲ್ಲದ ಪ್ರಶ್ನೆಗಳು
ಬೆಂಬಿಡದ ಭೂತಗಳು!
ಅಪ್ಪಿ-ತಪ್ಪಿಯೂ ಅವು ಹೊರಗೆ ಇಣುಕದಂತೆ
ಸುರುಳಿ ಸುತ್ತಿ ಸುತ್ತಿ
ಮತ್ತೂ ಗೋಜಲಾಗಿಸಿ
ಸಣ್ಣ ಉಂಡೆ ಮಾಡಿ
ಮನದ ಮೂಲೆಯಲ್ಲೇ ಎಲ್ಲೋ
ಒತ್ತರಿಸಿಟ್ಟು ಕಾವು ಕೊಟ್ಟ ಪ್ರಶ್ನೆಗಳು
ಎಂದೆಂದೂ ಯಾರಲ್ಲೂ ಕೇಳಲಾಗದ ಪ್ರಶ್ನೆಗಳು
ಇದ್ದೂ ಸತ್ತಂತೆ ಇದ್ದರೆಷ್ಟು ಬಿಟ್ಟರೆಷ್ಟು?
ಇಲ್ಲಾ ನಮ್ಮ ಬದುಕಿನಲಿ
ಪ್ರಶ್ನೆಗಳಿಗೆ ಕೆಲಸವಿಲ್ಲ
ಮತ್ತಾರೋ ಆಜ್ಞಾಪಿಸಿದ ಉತ್ತರಗಳ
ಉಭ-ಶುಭವೆನ್ನದೇ ಒಪ್ಪಿ
ಅದನೇ ಮುಂದಿನ ಪೀಳಿಗೆಗೆ ಹಂಚಿ
ಎಂದೆಂದೂ ಕೇಳಲಾಗದ ಪ್ರಶ್ನೆಗಳು
ಒಳಗೇ ಚುಚ್ಚಿ
ನೋಯಿಸುತ್ತಿದ್ದರೂ ಸರಿ
ಕಾದುಕೆಂಡವಾದ ಪ್ರಶ್ನೆಗಳಿಗೆ
ತಣ್ಣನೆ ಕೊರೆವ ನೀರು ಚೆಲ್ಲಿ
ಇಲ್ಲಾ, ಏನೂ ಆಗಿಯೇ ಇಲ್ಲವೆಂಬಂತೆ
ಮುಗ್ಧತೆಯ ಮುಖ ತೊಟ್ಟು
ಬದುಕು ಸವೆಸುತ್ತೇವೆ
ನಾನು-ನನ್ನಂತವರು!
*****