ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ
ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ
ಮೂಲೆ ಮೂಲೆ, ಸಂದಿ ಗೊಂದಿ
ತಡವುತ್ತಾ, ಎಡವುತ್ತಾ
ಅಸಂಬದ್ಧ ಗೊಣಗುತ್ತಾ
ಅಪ್ರಚಲಿತ ಜಾನಪದ ಗೀತೆ
ಗುನುಗುತ್ತಾ
ಹರಿದ ಸೀರೆ ತುಂಡು
ತೇಪೆಗೊಂದಿಷ್ಟು ಅರಿವೆ ಹಿಡಿದು
ಮಸುಕು ಕಣ್ಣೊಳಗೆ
ಮಬ್ಬು ಚಿತ್ರಗಳು ಮೂಡಿ
ಮರೆಯಾಗುತಿರಲು
ಇವಳು ಬಿಡದೇ ಸೂಜಿ ಹುಡುಕುತ್ತಾಳೆ!
ಅದ್ಭುತಗಳ ಸೃಷ್ಟಿಸುವ
ಅಲ್ಲಾವುದ್ದೀನನ ಜಾದೂ ದೀಪವೇ
ಕೈಯೊಳಗೆ ಹಿಡಿದಂತೆ
ಮಿಣುಕು ಚಿಮಣಿ ಬುಡ್ಡಿಯ
ಮೈನೇವರಿಸುತ್ತಾ ಸೂಜಿ
ಹುಡುಕಲು ಆಜ್ಞಾಪಿಸುತ್ತಾಳೆ.
ಕಾಣದ ಕಣ್ಣು ಮತ್ತಷ್ಟು
ಅರಳರಳಿಸಿ ಕಾಯುತ್ತಾಳೆ!
ಸೂಜಿಗಾಗಿ ನೆಲಸಾರಿಸುವಾಗ
ಚುಚ್ಚಿದ ಸೂಜಿಯ ಮೊನೆ
ಗಬಕ್ಕನೆ ಹಿಡಿದು
‘ಹಿಡಿಮುಷ್ಠಿಯೊಳಗೆ
ಇಡಿ ಬದುಕು ಸಿಕ್ಕಂತೆ’
ಸಂಭ್ರಮಿಸತ್ತಾಳೆ!
ಹೌದು ಹರಿದ ಸೀರೆಗೆ
ತೇಪೆ ಬೇಡವೇ?
*****