ರೊಕ್ಕದ ರೇಸು ಹೊಂಟೈತೆ ತಗೊ
ಸಿಕ್ಕಿದ ದಾರಿಯೆ ಹಿಡಿದೈತೆ
ನನಗೇ ತನಗೇ ಎನ್ನುತ ನುಗ್ಗಿದೆ
ಬಾಚುತ ದೋಚುತ ಗಳಿಸುತ ಬಲಿಯುತ
ಓಡಲಾಗದೇ ಕಂಗೆಟ್ಟವರನು
ತೊತ್ತಳ ತುಳಿಯುತ ಸಾಗೈತೆ
ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ
ಗೂಡು ಇಲ್ಲದೆ ಪಾಡು ಇಲ್ಲದೆ
ನರಳುವ ಮಂದಿ ಹೊರಳಾಡೈತೆ
ತುಳಿಯುವ ಕಾಲಾಗೆ ಬಿದ್ದೈತೆ
ರೊಕ್ಕದ ದಾರ್ಯಾಗೆ ಕರುಣೆಯು ಬತ್ತೈತೆ
ಹೃದಯವು ಕೊರಡೇ ಆಗೈತೆ
ಮಾನವೀಯತೆಯು ಕೊಳಚೆಯ ಸೇರಿದೆ
ಸವಕಲು ನಾಣ್ಯ ಆಗೈತೆ
ನ್ಯಾಯ ನೀತಿಗಳು ಪ್ರೀತಿ ಮಮತೆಗಳು
ಭಾವುಕ ಭ್ರಮೆಗಳ ಗೊಣಗಾಟ
ದೇಶ ಭಕ್ತಿಯೋ ಕವಿಗಳ ರೋಗ
ರೊಕ್ಕದ ಮುಂದೇ ಹುಡುಗಾಟ
ತಾಯಿಯೆ ಆಗಲಿ ತಂದೆಯೆ ಆಗಲಿ
ರೊಕ್ಕದ ಮುಂದೇ ಮುದಿಹದ್ದು
ಅಣ್ಣ ತಮ್ಮಂದಿರು ಅಕ್ಕ ತಂಗಿಯರು
ಮಾತಾಡಿಸಿದರೆ ವಿಷಮದ್ದು
ಸುತ್ತಲ ಜಗತ್ತು ಕಾಣದ ಹಾಂಗೆ
ಕುರುಡನ ಮಾಡುವುದೀ ರೊಕ್ಕ
ದೀನ ವಾಣಿಗಳು ಕೇಳಿಸದ್ಹಾಂಗೆ
ಕಿವುಡನ ಮಾಡುವುದೀ ರೊಕ್ಕ
ಕೋಮಲ ಭಾವನೆ ಮುಟ್ಟದ ಹಾಂಗೆ
ಕೊರಡುಗಟ್ಟಸುವುದೀ ರೂಕ್ಕ
ಎಲ್ಲರ ಸೌಖ್ಯದ ಆದರ್ಶಗಳನು
ತರಗೆಲೆ ಮಾಡುವುದೀ ರೊಕ್ಕ
ನೆಲೆಯೇ ಇಲ್ಲದವರೆಷ್ಟೇ ಇರಲಿ
ನನ್ನ ಸೈಟುಗಳೂರೂರಲ್ಲಿ
ಕಾಲಲ್ಲಿ ನಡೆವರ ಖರ್ಮಗಳಿರಲಿ
ಹಾರುವೆ ನಾ ಕಾರುಗಳಲ್ಲಿ
ಕಾಸಿಗು ಗತಿಯಿಲ್ಲದ ಕೋಟಿ ಜನ
ಕೋಟಿ ಕೋಟಿಗಳು ನನಗಿರಲಿ
ಚಳಿ ಬಿಸಿಲುಗಳಲ್ಲಿ ಒದ್ದಾಡುವ ಜನ
ಏರ್ ಕಂಡಿಷನ್ನು ಮನೆಯಿರಲಿ
ನೌಕರಿಗಾಗಿ ಲಕ್ಷ ಲಕ್ಷಗಳು
ಕೊಡುವೆನು ನನಗೇನಿಲ್ಲ ಭಯ
ವರದಕ್ಷಣೆಗೋ ಎಷ್ಟು ಲಕ್ಷಗಳು
ಕೇಳಲು ನಾಚಿಕೆ ಏಕಯ್ಯ
ಹರಕು ಬಟ್ಟೆಗಳ ಮಕ್ಕಳ ಮುಂದೆ
ನನ್ನ ಮಗಳ ಬರ್ಥ್‌ಡೇ ಪಾರ್ಟಿ
ವಿಧವಿಧ ತಿಂಡಿ ಷೋಕೀ ಮಂದೀ
ಕಣ್ಣುಕುಕ್ಕುಬೇಕು ಈಪಾಟಿ
ಊರಿಗೇ ಊರೇ ನಿಂತು ನೋಡುವುದು
ರೊಕ್ಕುಳ್ಳ ನಮ್ಮ ಮದುವೆಗಳ
ಸಾವಿರಗಟ್ಟಲೆ ತಿಂದೆಂಜಲದೆಲೆ
ಮುತ್ತಬೇಕು ತಿರುಕರ ಜಗಳ
ರೊಕ್ಕ ಮಾಡುವುದು ಒಂದೇ ಮಂತ್ರ
ರೊಕ್ಕ ಗಳಿಸುವುದೆ ನಮ ತಂತ್ರ
ರೊಕ್ಕವಿದ್ದವನೆ ಮನುಷ್ಯ ಲೋಕದಿ
ಇಲ್ಲದವನೆ ಹೆಣ ಅತಂತ್ರ
*****