ಮಕ್ಕಳು ಆಡುತ್ತಿರುತ್ತವೆ
ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ
ದುಡಿವ ಜನ ದುಡಿಯುತ್ತಿರುತ್ತಾರೆ
ಓಡಾಡುವವರು ಓಡಾಡುತ್ತಿರುತ್ತಾರೆ
ಮಲಗಿರುವವರು ಮಲಗಿರುತ್ತಾರೆ
ಕುಳಿತಿರುವವರು ಕುಳಿತಿರುತ್ತಾರೆ
ಹೊಟ್ಟೆಗೋ ಹೊಟ್ಟೆಕಿಚ್ಚಿಗೋ
ಕರುಳ ಕರೆಗೋ ಸಂಚು ಹೊಂಚುಗಳಿಗೋ
ಸೆಳೆದಾಟಗಳಿಗೋ ಹಲವರು
ಹಲವು ವಿಧಗಳಲ್ಲಿ ಬಡಿದಾಡುತ್ತಿರುತ್ತಾರೆ
ಇಲ್ಲೇ ಇಲ್ಲೇ ಶಾಶ್ವತವಾಗಿ ಇರುತ್ತೇವೆಂಬಂತೆ
ಅಷ್ಟಾವಕ್ರಗಳಲ್ಲೂ ಎಲ್ಲಾ ಸುಸೂತ್ರ
ನಡೆದಿರುತ್ತದೆ ಬದುಕು ಜಟಕಾ ಬಂಡಿ
ಇವನೆಲ್ಲ ಹೊತ್ತ ಈ ತಾಯಿ
ಸುಮ್ಮನೆ ಬಿಮ್ಮನೆ ಬೀಗಿಕೊಂಡಿದ್ದರೆ
ಎಲ್ಲ ಸಲೀಸಾಗಿ ಸಾಗುತ್ತಿರುತ್ತದೆ
ಅವಳಿಗೆ ಹೊಟ್ಟೆ ನೋವಾಗಿ
ಹೊಡೆಮರಳಿತೆಂದರೆ
ಬೇಜಾರಾಗಿ ಒಮ್ಮೆ ಮೈ ನಡುಗಿಸಿದಳೆಂದರೆ…
ಅಥವಾ ಬಾಯಿ ತೆರೆದು ಆಕಳಿಸಿದಳೆಂದರೆ….
ಅಥವಾ ಅವಳಿಗೆ ಸೀನು ಬಂದು
ಸುಡು ಸುಡು ದ್ರವದ ಸೀನು
ಸೀದಿದಳೆಂದರೆ….
ಅಥವಾ ತನ್ನ ಸೀರೆ ನೆರಿಗೆಗಳ
ಸರಿಪಡಿಸಿಕೊಳ್ಳಲು ಸೀರೆ ಝಾಡಿಸಿದಳೆಂದರೆ…
ಅಥವಾ ಯಾಕಾದರೂ ನಿಟ್ಟುಸಿರು ಬಿಟ್ಟು
ಭೋರೆಂದು ಉಸಿರು ಬಿಡತೊಡಗಿದಳೆಂದರೆ…
ನಿಂತವರು ನಿಂತಲ್ಲಿ ಕುಂತವರು ಕುಂತಲ್ಲಿ
ಮಲಗಿದವರು ಅಲ್ಲೆ ಓಡಾಡುವವರು ಅಲ್ಲಲ್ಲೆ
ಬಡಿದಾಡುವವರು ಕಚ್ಚಾಡುವವರು
ಪ್ರೀತಿಸುವವರು ರಮಿಸುವವರು
ರೋಗಿಗಳು ಭೋಗಿಗಳು ಯುವಕರು ಮುದುಕರು
ಕೂಸು ಕುನ್ನಿ ಗಂಡು ಹೆಣ್ಣು ಎಲ್ಲ ಎಲ್ಲರೂ
ನೆಲಸಮ ಮಣ್ಣಲ್ಲಿ ಮಣ್ಣು
ಇಲ್ಲಿ ಉಳಿದ ಬಾಯಿ ಬಡಕೊಳ್ಳುವವರು
ಪತ್ರಿಕೆ-ಆಕಾಶವಾಣಿ-ದೂರವಾಣಿ ಸುದ್ದಿಗಳಿಗೆ
ಕೆಲವು ದಿನ ಆಹಾರ ಸಿಗುವುದು
ಅನುಕಂಪಗಳ ಸುರಿಮಳೆ ಸುರಿಯುತ್ತದೆ
ಸಹಾಯ ಹಸ್ತ ಭೂಮಂಡಲದುದ್ದ ಚಾಚುತ್ತವೆ
ಕೆಲಕಾಲ ಗತಿಸಿದಂತೆಲ್ಲಾ
ಈ ತಾಯಿಯ ಮೈಮೇಲಾದ ಗಾಯ
ಮಾದು ಹೋಗಿಬಿಡುತ್ತವೆ
ಎಂದಿನಂತೆ ಆಡುವವರು ಆಡುತ್ತಾರೆ
ಹೊಡೆದಾಡುವವರು ಹೋರಾಡುವವರು
ದುಡಿಯುವವರು ದುಃಖಿಸುವವರು
ನಗುವವರು ಕೆಲೆಯುವವರು
ತಂತಮ್ಮ ಪರಿಗಳ ಬದುಕುತ್ತಾರೆ
ಮತ್ತೆ ಈ ತಾಯಿ ಸುಮ್ಮನೆ ಬಿಮ್ಮನೆ
ಬೀಗುತ್ತ ಸಾಗುತ್ತಾಳೆ
*****