ಖಾಲಿ ಹಾಳೆಯ ಮೇಲೆ
ಬರೆಯುವ ಮುನ್ನ
ಚಿತ್ರ
ಯೋಚಿಸಬೇಕಿತ್ತು
ಯೋಚಿಸಲಿಲ್ಲ
ಬರೆದೆ
ವಿಧಿ ಬರೆದಂತೆ
ಎಲ್ಲಾ ಪಾತ್ರಗಳು ಸುಮ್ಮನಿದ್ದವು
ಮೂಕರಂತೆ
ಕಾಲ ಕಳೆದಂತೆ
ಕೆಲವು ಕೆಮ್ಮಿದವು
ಹಲವು ಸೀನಿದವು
ರೋಗ ಬಂದಂತೆ
ಆಕಳಿಸಿದವು ನಿದ್ದೆ ಹಿಡಿದಂತೆ
ಪಿಸುಗುಟ್ಟಿದವು
ಗೊಣಗಿಕೊಂಡವು
ಬರೆಯುವ ಕೈ
ಹಿಡಿದು ನಿಲ್ಲಿಸಲಿಲ್ಲ ಒಂದೂ
ಒಂದು ದಿನ ಒಬ್ಬ
ಮಸಿ ಹೊದ್ದು ಮಲಗಿದ್ದವನು
ಬುದ್ದನಂತೆ ಎದ್ದ
ಮತ್ತು ಮೆಲ್ಲಗೆ ಹೇಳಿದ
ತಗೋ ಬರೆ
ಈ ಬಣ್ಣಗಳಲ್ಲಿ ಹೊಟ್ಟೆ
ಯ ಜೊತೆಗೆ ಹಲ್ಲುಗಳ ಕೊಡ
ಮಾತಾಡಲು ನಾಲಗೆಯ ಬಿಡು
ಹಾಗೆ ಚೂರು ಬುದ್ಧಿಯ ಇಡು
ದುಡಿಯಲು ಕೈಗಳ ಕೊಡು
ಅಲ್ಲೊಂದು ಹೃದಯ ಇಡು
ನಿನ್ನ ಎಲ್ಲಾ ಬರೆಹಗಳಲ್ಲಿ
ಒಂದಾದರೂ ಕಣ್ಣಿರಲಿ
ನೀನು ಬರೆದದ್ದು ನೋಡುವುದಕ್ಕೆ
ಸಾಧ್ಯವಾದರೆ ತಿದ್ದಿ ಕೊಳ್ಳಲಿಕ್ಕೆ’
ಖಾಲಿ ಕುಂಚ ಹಿಡಿದು
ಬೆರಗಾಗಿ ನಿಂತೆ
ಬೆಳಿಕಿನೆಡೆ ಮುಖ ಮಾಡಿ
ಕಿಂದರ ಜೋಗಿ
ಅವನ ಹಿಂದೆ ಜೀವ
ಪಡೆದ ಚಿತ್ರಗಳ ಸಾಲು
ಮೈ ತುಂಬಾ
ಮಿರ ಮಿರ ಮಿರುಗುವ ಬಣ್ಣ
ನೂರು ಸೂರ್ಯರ ಕಣ್ಣ!
*****