ಹರಿಯುವ ಹೊಳೆಗೂ ಸುರಿಯುವ ಮಳೆಗೂ
ಏನೇನಿದೆಯೋ ಸಂಬಂಧ!
ಬೆಳಕಿನ ಹನಿಗೂ ಹಕ್ಕಿಯ ದನಿಗೂ
ಇಲ್ಲವೆ ಹೇಳಿ ಒಳಬಂಧ?
ನಾರುವ ಕಸಕೂ, ಹೂ ಪರಿಮಳಕೂ
ಇದ್ದೇ ಇದೆ ಬಿಡಿ ಮಾತುಕಥೆ;
ಹಣ್ಣಿನ ಒಳಗೇ ಬೀಜವಿಡಲು ಮರ
ಉಪಾಯವಲ್ಲದೆ ಇದ್ದೀತೇ?
ಕುಡಿಯಲು ಬಾರದ ಕಡಲಿನ ನೀರಿನ
ಹಿಂದೂ ಒಂದಿದೆ ಒಳಮರ್ಮ
ಮುಂದಿನ ಸಾಲಿನ ಮುಗಿಲಿನ ಬೆಳೆಗೆ
ಕೂಡಿಸಿ ಇಡುವ ಜಲಧರ್ಮ
ಬಲ್ಲೆವೆ ನಾವು ಸೃಷ್ಟಿಯ ಮರೆಯಲಿ
ಯಾರೋ ಹೂಡಿದ ಗುಟ್ಟುಗಳ?
ಬಲ್ಲೆವೆ ಹೇಳಿ ಸೃಷ್ಟಿಯ ಹಾಡಲು
ದೈವವು ಬಳಸುವ ಮಟ್ಟುಗಳ?
*****