ಎಂದಿನಂತೆಯೆ ಬಂದಿತೇ ನಾಡ ಹಬ್ಬ?
ನಮ್ಮ ನಾಯಕರೆಮ್ಮನಾಳುವುದೆ ಹಬ್ಬ!
ಅದು ಹೊರತು, ಹಸಿದವನ ಕೈಗಿತ್ತು ಕಬ್ಬ,
‘ಓದಿ ತಣಿ’ ಎಂದಂತೆ ನಾಡಹಬ್ಬ!
ಬಣಜಿಗನ ಬೊಕ್ಕಸವು ತುಂಬಿತಿದೆ ಗಿಡಿದು;
ಕಾರ್ಮಿಕರು ಕೆರಳಿಹರು ತಮ್ಮ ಕನಸೊಡೆದು;
ಕ್ಷಾಮಮಾರಿಯ ಮುಂದೆ ಬಡಜನರು ಮಡಿದು
ಬಲಿಯಾಗುತಿಹರಿದುವೆ ನಾಡಹಬ್ಬ!
ಒಬ್ಬ ತಾಯಿಯ ಮಕ್ಕಳೆಂಬರಿವ ತೊರೆದು
ಸೇಡು ಮರುಸೇಡಿನಲಿ ಮತದ ಬಾಳ್ ಹಿರಿದು
ಹೇಟಿತನದಲಿ ಒಬ್ಬರನ್ನೊಬ್ಬರಿರಿದು
ಕೊಂದು ಕಾಳಿಗೆ ಬಿರ್ದು: ಇದುವೆ ಹಬ್ಬ!
ಸ್ನೇಹ ಸೌಹಾರ್ದ ನೆಲೆಗೊಳಲಿ: ಅದೆ ಹಬ್ಬ!
ಇಳೆ ಕಾಂತಿ ಪುಷ್ಟಿ ತುಷ್ಟಿಗಳೊಂದೆ ಹಬ್ಬ!
ನಾಡೆಲ್ಲ ನಲಿಯುತಿರಲಂದದುವೆ ಹಬ್ಬ!
ವರುಷಕೊಮ್ಮೆಯೆ? ನಿತ್ಯ ನಾಡಹಬ್ಬ!
*****