ಪ್ರತಿನಿತ್ಯ ಪತ್ರಿಕೆಯಲ್ಲಿ ರೈತರ ಆತ್ಮಹತ್ಯೆ ಅಂತ ನೋಡಿ ನೋಡಿ ಇಳಾಳ ಮನಸ್ಸು ರೋಸಿ ಹೋಗಿತ್ತು. ಯಾಕೆ ಈ ರೈತರು ಇಷ್ಟೊಂದು ಹತಾಶರಾಗಿ ಸಾವಿಗೆ ಮೊರೆ ಹೋಗುತ್ತಾರೆ, ಇದಕ್ಕೇನು ಕಾರಣ? ಇದನ್ನು ತಡೆಯುವ ಮಾರ್ಗ ಯಾವುದು? ಕೃಷಿ ನಂಬಿಕೊಂಡಿದ್ದಕ್ಕೆ ಸಾವೇ ಗತಿಯೇ… ಈ ಬಗ್ಗೆ ಒಂದಿಷ್ಟು ಚಿಂತಿಸುವ ಮನಸ್ಸುಗಳನ್ನೆಲ್ಲ ಒಂದೆಡೆ ಸೇರಿಸಬೇಕು. ಆ ಮೂಲಕ ಏನನ್ನಾದರೂ ಮಾಡಿ ರೈತರ ಮನಸ್ಸು ಆತ್ಮಹತ್ಯೆಯತ್ತ ಹೊರಳದಂತೆ ತಡೆಯಬೇಕು. ತನ್ನ ಅಪ್ಪನಂತಹ ನೂರಾರು ರೈತರು ಪ್ರತಿನಿತ್ಯ ಸಾವಿಗೆ ಶರಣಾಗಿ ನಂಬಿದವರನ್ನು ನಡುನೀರಲ್ಲಿ ಕೈ ಬಿಟ್ಟು ತಾವು ಸ್ವರ್ಗ ಸೇರಿಕೊಳ್ಳುತ್ತಿದ್ದಾರೆ!- ಈ ಕುರಿತು ಇಳಾ ಸದಾ ಯೋಚಿಸತೊಡಗಿದಳು.
ಹೀಗೆ ಯೋಚಿಸುತ್ತಿರುವಾಗಲೇ ರೇಡಿಯೋದ ಕೃಷಿಲೋಕದಲ್ಲಿ ಸಂದರ್ಶನ ನಡೆಯುತ್ತಿತ್ತು. ಮಾತನಾಡುತ್ತಿದ್ದಾತ ಇಳಾಳ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವನ್ನು ಕುರಿತೇ ಮಾತನಾಡುತ್ತಿದ್ದದ್ದು ಆಸಕ್ತಿ ಕೆರಳಿಸಿ ರೇಡಿಯೋ ಮುಂದೆಯೇ ಕುಳಿತುಬಿಟ್ಟಳು. ರೈತರ ಬಗ್ಗೆ ಕಳಕಳಿ, ಸಾವೇ ಮದ್ದು ಎಂದುಕೊಂಡು ರೈತರು ಪ್ರಾಣಹಾನಿ ಮಾಡಿಕೊಳ್ಳುತ್ತಿರುವ ಬಗ್ಗೆ ವಿಷಾದದಿಂದ ಮಾತನಾಡುತ್ತಿದ್ದವರ ಬಗ್ಗೆ ಕುತೂಹಲ ಮೂಡಿ ಆಕಾಶವಾಣಿಯವರಿಗೆ ಫೋನ್ ಮಾಡಿ ಅವರ ವಿಳಾಸ ಪಡೆದು ಫೋನ್ ಮಾಡಿದಳು. ಖುದ್ದಾಗಿ ತಾನು ಅವರೊಂದಿಗೆ ಮಾತನಾಡಬೇಕು ಎಂಬ ಬೇಡಿಕೆ ಇತ್ತಳು. ಇನ್ನೆರಡು ದಿನ ಬಿಟ್ಟು ಹಾಸನದಲ್ಲಿ ಒಂದು ಕಾರ್ಯಕ್ರಮಕ್ಕೆ ಬರುವುದಾಗಿ, ಅಲ್ಲಿ ಬಂದರೆ ತಾನು ಸಿಗುವುದಾಗಿ ತಿಳಿಸಿದಾಗ ಮನಸ್ಸಿಗೆ ಏನೋ ಒಂದು ರೀತಿಯ ತೃಪ್ತಿಯಾಯಿತು.
ಆ ದಿನ ಹಾಸನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಟು ಸಕಲೇಶಪುರದ ಬಸ್ಸು ಹತ್ತಿದಳು. ಅಲ್ಲಿಂದ ಹಾಸನಕ್ಕೆ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಹೊರಟರೆ ಮುಕ್ಕಾಲು ಗಂಟೆ ಪ್ರಯಾಣ. ಬಸ್‌ಸ್ಟಾಂಡಿನಲ್ಲಿ ಆತ ಕಾಯುತ್ತಿದ್ದರು. ಮೊಬೈಲ್‌ಗೆ ಫೋನ್ ಮಾಡಿ ಆತ ಇರುವ ಸ್ಥಳಕ್ಕೆ ಬಂದು ಅವರನ್ನು ಕಂಡ ಕೂಡಲೇ ಕ್ಷಣ ಮಾತೇ ಹೊರಡದ ಮೂಕಿಯಂತಾಗಿಬಿಟ್ಟಳು. ‘ಹಲೋ ನಾನು ನಿವಾಸ್, ನನ್ನನ್ನು ತಾನೇ ನೀವು ನೋಡಬೇಕು, ಮಾತಾಡಬೇಕು ಅಂತ ಅಂದಿದ್ದು. ಯಾಕೆ ಸುಮ್ನೆ ನಿಂತುಕೊಂಡುಬಿಟ್ಟಿರಿ’ ಅಂತ ಎಚ್ಚರಿಸುವ ತನಕ ಯಾವುದೋ ಲೋಕದಲ್ಲಿ ಇದ್ದವಳಂತೆ ವರ್ತಿಸಿದ್ದಳು.
ತಕ್ಷಣವೇ ಸಾವರಿಕೊಂಡು ‘ಹಲೋ ನಾನು ಇಳಾ, ಸಕಲೇಶಪುರದಿಂದ ಬಂದಿದೀನಿ’ ಅಂತ ಮೆಲು ಧ್ವನಿಯಲ್ಲಿ ಹೇಳಿದಳು. ಅವಳಿನ್ನೂ ಶಾಖ್‌ನಿಂದ ಹೊರ ಬಂದಿರಲಿಲ್ಲ. ತಾನು ಭೇಟಿ ಮಾಡಲಿರುವ ವ್ಯಕ್ತಿಗೆ ಮಧ್ಯ ವಯಸ್ಸು ಮೀರಿರಬಹುದು. ರೈತನಂತಿರಬಹುದು. ಹಳ್ಳಿಯವನಂತೆ ಪಂಚೆ ಉಟ್ಟು ಸಾಮಾನ್ಯ ವ್ಯಕ್ತಿಯಂತಿರಬಹುದು ಎಂದೆಲ್ಲ ಊಹಿಸಿಕೊಂಡಿದ್ದು ಎಲ್ಲವು ತಿರುವು ಮುರುವು ಆಗಿತ್ತು. ನಿವಾಸ್ ಜೀನ್ಸ್ ಪ್ಯಾಂಟ್, ತೆಳುನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದು, ಆಗಷ್ಟೆ ಕಾಲೇಜಿನಿಂದ ಹೊರ ಬಿದ್ದ ವಿದ್ಯಾರ್ಥಿಯಂತೆ ಕಾಣಿಸುತ್ತಿದ್ದ. ಸ್ಫುರದ್ರೂಪಿ ನಿವಾಸ್ ತಟ್ಟನೆ ಮನಸೆಳೆಯುವಂತಿದ್ದು, ಸಿನಿಮಾ ನಾಯಕ ನಟನಂತೆ ಆಕರ್ಷಣೀಯವಾಗಿದ್ದ. ಈ ಯುವಕನ ಜೊತೆ ತಾನೇನು ಮಾತನಾಡಬಲ್ಲೆ ಎಂದು ಮುಜುಗರಕ್ಕೆ ಒಳಗಾದಳು.
ತಾನು ಹಿಂದೆ ಮುಂದೆ ವಿಚಾರಿಸದೆ ಬರಬಾರದಿತ್ತು. ಈತ ಯಾವುದೋ ಸಿನಿಮಾ ಶೂಟಿಂಗ್‌ಗೆ ಹೊರಟವನಂತೆ ಕಾಣುತ್ತಿದ್ದಾನೆ. ಈತ ನಿಜವಾಗಲೂ ರೈತರ ಬಗ್ಗೆ ಕಾಳಜಿ ಹೊಂದಿರುವನೇ? ತಾನು ಅಂದುಕೊಂಡಿರುವುದನ್ನೆಲ್ಲ ಈತನ ಹತ್ತಿರ ಹೇಳಿಕೊಳ್ಳಬಹುದೇ… ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡಬಲ್ಲನೇ ಈತ… ಹೀಗೆ ನೂರಾರು ರೀತಿ ಆಲೋಚಿಸುತ್ತಲೇ ಇದ್ದಳು. ಅದಾವುದರ ಅರಿವಿಲ್ಲದ ನಿವಾಸ್ ‘ಮೇಡಂ, ಎಲ್ಲಿ ಮಾತಾಡೋಣ’ ಅಂತ ಕೇಳಿದಾಗ ತಬ್ಬಿಬ್ಬಾಗಿ ಅವನನ್ನೆ ನೋಡಿದಳು. ಎಲ್ಲಿ ಅಂತ ಯೋಚಿಸಲು ಅವಳಿಂದಾಗಲಿಲ್ಲ. ಅವಳ ಮುಜುಗರ ಅವನಿಗರ್ಥವಾಯಿತು ಅಂತ ಕಾಣಿಸುತ್ತ. ‘ಬನ್ನಿ ಕಾಫಿ ಕುಡಿಯುತ್ತ ಮಾತನಾಡೋಣ’ ಅಂತ ಹೋಟೆಲಿನತ್ತ ಹೆಜ್ಜೆಹಾಕಿದ.
ಇಳಾಳನ್ನು ಮೇಡಂ ಅಂತ ಸಂಭೋದಿಸಲು ಯಾಕೋ ನಿವಾಸ್‌ಗೆ ಇಷ್ಟವಾಗಲಿಲ್ಲ. ಶಾಲೆ ಮುಗಿಸಿ ಕಾಲೇಜಿಗೆ ಹೋಗುವ ಹುಡುಗಿಯಂತಿದ್ದ ಇಳಾಳ ಬಗ್ಗೆ ಅವನು ಕೂಡ ಇಷ್ಟು ಪುಟ್ಟ ಹುಡುಗಿ ಇರಬಹುದು ಅಂತ ಅಂದುಕೊಂಡಿರಲಿಲ್ಲ. ‘ಇಳಾ, ಹೇಳಿ ನನ್ನತ್ರ ಏನು ಮಾತಾಡಬೇಕು, ನನ್ನಿಂದ ಏನು ಸಹಾಯವಾಗಬೇಕು, ನಿಮ್ಮನ್ನು ನೋಡಿದರೆ ಯಾವ ಕಷ್ಟವೂ ಸೋಕದೆ ಬೆಳೆದವರಂತೆ ಕಾಣುತ್ತೀರಿ, ಅಪ್ಪ ಅಮ್ಮನ ಮುದ್ದಿನ ಮಗಳು ಅಂತ ಕಾಣುತ್ತೆ, ಏನು ಓದ್ತ ಇದ್ದೀರಿ’ ಅವಳ ಸಂಕೋಚ ಕಳೆಯಲು ಆತ್ಮೀಯವಾಗಿ ಮಾತನಾಡಿದ.
ಅಪ್ಪ ಅಮ್ಮನ ಮುದ್ದಿನ ಮಗಳು ಅಂದ ಕೂಡಲೇ ಇಳಾಗೆ ತಟ್ಟನೆ ಅಳು ಉಕ್ಕಿ ಬಂದು ಅತ್ತೇಬಿಟ್ಟಳು. ಅವಳ ಅಳು ಕಂಡು ಗಾಬರಿಯಾದ ನಿವಾಸ್ ‘ಇಳಾ, ಯಾಕೆ ಏನಾಯ್ತು, ಯಾಕೆ ಅಳ್ತಾ ಇದ್ದೀರಿ-’
ಅವನ ಗಾಭರಿಕಂಡು ತನ್ನ ಅಳುವನ್ನು ಹತೋಟಿಗೆ ತಂದುಕೊಂಡಳು. ತನ್ನ ಊರು, ತನ್ನ ವಿದ್ಯಾಭ್ಯಾಸ, ತನ್ನ ತಂದೆಯ ಆತ್ಮಹತ್ಯೆ, ಈಗ ತಾನು ಓದುವುದನ್ನು ನಿಲ್ಲಿಸಿ- ಕೃಷಿ ಮಾಡಲು ಇಳಿದಿರುವುದು, ರೈತರ ಆತ್ಮಹತ್ಯೆ ತನ್ನ ಮನಸ್ಸನ್ನು ಕಲಕುತ್ತಿರುವುದು, ಈ ಮನಸ್ಥಿತಿಯಲ್ಲಿರುವಾಗಲೇ ರೇಡಿಯೋದಲ್ಲಿ ತಮ್ಮ ಸಂದರ್ಶನ ಕೇಳಿ ಈ ವಿಚಾರವಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ಮಾತನಾಡಲು ತಾನು ಬಂದಿರುವುದಾಗಿ ಎಲ್ಲವನ್ನು ಸಂಕ್ಷಿಪ್ತವಾಗಿ ಹೇಳಿದಳು.
ಅವಳ ಎಲ್ಲಾ ಮಾತುಗಳನ್ನು ಕೇಳುತ್ತ ಸುಮ್ಮನೆ ಕುಳಿತುಬಿಟ್ಟ ನಿವಾಸ್. ಈ ಪುಟ್ಟ ಹುಡುಗಿಯ ಬದುಕಿನೊಳಗೆ ಏನೆಲ್ಲ ಘಟನೆಗಳು ನಡೆದುಹೋಗಿವೆ. ಅಪ್ಪನ ಸಾವು ಎಷ್ಟು ಆಘಾತ ಒಡ್ಡಿರಬೇಕು, ಓದುವ ವಯಸ್ಸಿನಲ್ಲಿ ಬದುಕಿನ ನಿರ್ಣಯ ಕೈಗೊಳ್ಳುವ ಪರಿಸ್ಥಿತಿಗೆ ತಲುಪಿರುವುದು, ಸ್ಕೂಲ್, ಕಾಲೇಜು ಅಂತ ಸದಾ ಮನೆಯಿಂದ ಹೊರಗೇ ಇದ್ದ ಇಳಾ ಅಪ್ಪನ ಸಾವಿನ ನಂತರ ಕೃಷಿಯನ್ನ ಆಯ್ಕೆ ಮಾಡಿಕೊಳ್ಳಬೇಕಾದ -ತೀರ್ಮಾನ ಎಲ್ಲವೂ ಅವನನ್ನು ಕಲಕಿದವು.
‘ಸಾರಿ ಇಳಾ, ನಿಮ್ಮ ಬದುಕು ಈ ರೀತಿಯ ದುರಂತ ಕಾಣಬಾರದಿತ್ತು. ನಿಮ್ಮಂತೆ ಅದೆಷ್ಟು ಮಕ್ಕಳು ಅಪ್ಪಂದಿರ ಸಾವಿನಿಂದ ತತ್ತರಿಸಿ ಹೋಗಿದ್ದಾರೋ? ಅದೆಷ್ಟು ಮಕ್ಕಳ ಬದುಕು ಮುರಾಬಟ್ಟೆಯಾಗಿದೆಯೋ? ಇದೇ ಸಮಸ್ಯೆಗೆ ಕುರಿತು ನಾನು ಸದಾ ಚಿಂತಿಸುತ್ತಿದ್ದೇನೆ. ಏಕೆಂದರೆ ನಾನು ಕೂಡ ಒಬ್ಬ ರೈತನ ಮಗ. ಕೃಷಿಯನ್ನೇ ನಂಬಿದವರು ನನ್ನ ತಂದೆ. ನನ್ನ ತಂದೆಯದೇ ಬೇರೆ ಸಮಸ್ಯೆ. ಅದನ್ನು ನಿಧಾನವಾಗಿ ನಿಮ್ಮ ಹತ್ರ ಹೇಳ್ತೀನಿ. ಅದ್ರೂ ನಿಮ್ಮ ಧೈರ್ಯ ಹಾಗೂ ನಿಮ್ಮ ನಿರ್ಧಾರದ ಬಗ್ಗೆ ನನಗೆ ತುಂಬಾ ಮೆಚ್ಚುಗೆ ಮೂಡ್ತಾ ಇದೆ. ಈ ವಯಸ್ಸಿನಲ್ಲಿ ಈ ರೀತಿ ಆಲೋಚನೆ ಮಾಡೋದು ತುಂಬ ಅಪರೂಪ. ಒಟ್ಟಿನಲ್ಲಿ ನನ್ನ ಥರ ಆಲೋಚನೆ ಮಾಡೋ ಒಬ್ಬ ಧೈರ್ಯವಂತ ಹುಡುಗಿ ನಂಗೆ ಫ್ರೆಂಡಾಗಿದ್ದಾಳೆ ಅನ್ನೋದೇ ನಂಗೆ ಸಂತೋಷ ತರೋ ವಿಚಾರವಾಗಿದೆ’ ಮನದಾಳದ ಭಾವವನ್ನು ಹೊರ ಹಾಕಿದ.
‘ನಿಮ್ಮ ಅಭಿಮಾನಕ್ಕೆ ಏನು ಹೇಳಬೇಕೊ ಗೊತ್ತಾಗ್ತ ಇಲ್ಲಾ ಸಾರ್. ಯಾಕ್ಹೀಗೆ ರೈತರು ತಮ್ಮ ಬದುಕನ್ನು ಸಾವಿನತ್ತ ತಳ್ಳಿ ಅಸಹಾಯಕರಾಗ್ತ ಇದ್ದಾರೋ ಗೊತ್ತಾಗ್ತಾ ಇಲ್ಲ. ಅದನ್ನು ಹೇಗಾದ್ರು ಮಾಡಿ ತಡೆಯಬೇಕು ಅಂತ ನನ್ನ ಮನಸ್ಸು ಚಡಪಡಿಸುತ್ತ ಇದೆ. ಅದ್ರೆ ಇದು ಹೇಗೆ ಅಂತ ಗೊತ್ತಾಗ್ತ ಇಲ್ಲಾ ಸಾರ್’ ದುಃಖ ತುಂಬಿದ ಭಾವದಿಂದ ನುಡಿದಳು.
‘ನಮ್ಮ ಮನಸ್ಸು ಒಂದೇ ವಿಚಾರದ ಬಗ್ಗೆ ಆಲೋಚನೆ ಮಾಡ್ತ ಇದೆ. ಎರಡು ಶಕ್ತಿಗಳು ಒಟ್ಟಿಗೆ ಸೇರಿ ಇದಕ್ಕೊಂದು ಪರಿಹಾರ ಕಂಡು ಹಿಡಿಯುವ ದಿಕ್ಕಿನತ್ತ ಆಲೋಚನೆ ಮಾಡಿದರೆ ಒಂದಿಷ್ಟು ಯಶಸ್ಸು ಕಾಣಲು ಸಾಧ್ಯ ಅನ್ನಿಸುತ್ತೆ. ಪ್ರಯತ್ನಪಡೋಣ, ಆ ದಿಕ್ಕಿನಲ್ಲಿ ನಾನು ಒಂದಿಷ್ಟು ತಲೆ ಕೆಡಿಸಿಕೊಂಡಿದ್ದೇನೆ. ನಮ್ಮಂಥ ಇನ್ನೊಂದಿಷ್ಟು ಮನಸ್ಸುಗಳು ಸೇರಿದರೆ ಒಂದು ಒಳ್ಳೆ ಸಂಘಟನೆ ಮಾಡೋಣ. ಈ ವಿಚಾರವಾಗಿ ಜನರಲಿ ಜಾಗೃತಿ ಮೂಡಿಸೋಣ’ ಭರವಸೆಗಳ ಮಹಾಪೂರವೇ ಹರಿಯಿತು ಅವನಿಂದ.
ಅವನ ಮಾತು, ಅವನ ಆಶ್ವಾಸನೆ, ಅವನ ಯೋಚನಾ ಧಾಟಿ ಇಳಾಳಿಗೆ ಸಾಕಷ್ಟು ಭರವಸೆ ನೀಡಿದವು. ಕಾಫಿ ಕುಡಿಯುತ್ತಲೇ ತನ್ನ ಬಗ್ಗೆ ಹೇಳಿಕೊಂಡ. ಎಂಬಿಎ ಮಾಡಿ ಬೆಂಗಳೂರಿನಲ್ಲಿ ಒಳ್ಳೆ ಉದ್ಯೋಗದಲ್ಲಿ ಇದ್ದ ತಾನು ಕೃಷಿಯತ್ತ ಆಸಕ್ತಿ ಹೊರಳಿ ಚನ್ನರಾಯಪಟ್ಟಣದ ಸಮೀಪ ಜಮೀನು ಕೊಂಡು ಸಾಗುವಳಿ ಮಾಡುತ್ತಿರುವುದಾಗಿ, ಪ್ರಗತಿಪರ ರೈತನೆಂದು ಈಗಾಗಲೇ ರಾಜ್ಯಾದ್ಯಂತ ಗುರುತಿಸಿದ್ದು ಹಲವಾರು ಪ್ರಶಸ್ತಿಗಳು ಬಂದಿದ್ದು, ತನ್ನ ಬಗ್ಗೆ ರೇಡಿಯೋ, ಟಿವಿಯಲ್ಲಿ -ಸಂದರ್ಶನ ನಡೆಸಿದ್ದು, ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತನ್ನ ಅನುಭವವನ್ನು ಇತರ ರೈತರಿಗೆ ತಿಳಿಸಲು ಸಂಘ ಸಂಸ್ಥೆಗಳು ತನ್ನನ್ನು ಕರೆಸುತ್ತಿದ್ದು ಅಂತಹ ಒಂದು ಕಾರ್ಯಕ್ರಮಕ್ಕಾಗಿಯೇ ಇಂದು ಹಾಸನಕ್ಕೆ ಬಂದಿರುವುದಾಗಿ ನಿವಾಸ ಹೇಳಿದ.
ಇಂತಹ ಪ್ರಗತಿಪರ ರೈತ ಪರಿಚಯವಾಗಿದ್ದು, ತಾನು ಈಗಷ್ಟೆ ಕೃಷಿ ಬದುಕಿಗೆ ಹೆಜ್ಜೆ ಇರಿಸುವ ಸಂದರ್ಭದಲ್ಲಿ ಅವನಿಂದ ಸಹಾಯ ಪಡೆಯಬಹುದೆಂದು ಇಳಾ ನಿರೀಕ್ಷೆ ತಾಳಿದಳು. ಅದನ್ನು ಬಾಯಿಬಿಟ್ಟು ಹೇಳಿಕೊಂಡಳು ಕೂಡ. ನಿವಾಸ ಕೂಡ ಇದಕ್ಕೆ ಸಂತೋಷವಾಗಿ ಒಪ್ಪಿಕೊಂಡ ಮತ್ತೊಮ್ಮೆ ಸಧ್ಯದಲ್ಲಿಯೇ ಬೇಟಿಯಾಗೋಣ. ಕಾರ್ಯಕ್ರಮಕ್ಕೆ ತಡವಾದೀತು ಎಂದು ಹೊರಟು ನಿಂತಾಗ ಅವನಿಂದ ಬೀಳ್ಕೊಟ್ಟು ಸಕಲೇಶಪುರದ ಬಸ್ಸು ಹತ್ತಿದಳು.
ಮನೆಗೆ ಬಂದ ಮೇಲೂ ನಿವಾಸನ ವಿಚಾರವೇ ಮನದೊಳಗೆ ಸುತ್ತುತ್ತಿತ್ತು. ತಾನೇನಾದರೂ ಹಾಸನಕ್ಕೆ ಹೋಗಿದ್ದ ವಿಚಾರ, ಅಲ್ಲಿ ನಿವಾಸನನ್ನು ಬೇಟಿಯಾಗಿದ್ದು, ತಮ್ಮ ವಿಚಾರಧಾರೆಗಳನ್ನು ಮನೆಯಲ್ಲಿ ಹೇಳಿಬಿಟ್ಟರೆ ಅಮ್ಮ-ಅಜ್ಜಿ ಇಬ್ಬರೂ ಸೇರಿ ನನ್ನನ್ನು ಖಂಡಿತಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಒಂದೇ ಸಲಕ್ಕೆ ಎಲ್ಲಾ ರೀತಿಯ ವಿಚಾರಗಳನ್ನು ಅವರ ತಲೆಗೆ ತುಂಬುವುದು ಬೇಡ. ಈಗಾಗಲೇ ತಾನು ತೋಟ ನೋಡಿಕೊಳ್ಳುತ್ತೇನೆ ಎಂದು ಹೇಳಿರುವುದು ಅಮ್ಮನಿಗೂ, ಅಜ್ಜಿಗೂ ತೀವ್ರವಾದ ಅಸಮಾಧಾನವಾಗಿದೆ. ತಾನು ಓದಲು ಮೈಸೂರಿನಲ್ಲಿಯೇ ಇರಬೇಕು ಎಂಬುದು ಅಮ್ಮನ ಮನಸ್ಸಿನಲ್ಲಿತ್ತು. ತನ್ನ ತೀರ್ಮಾನದಿಂದ ನಿರಾಶೆಯಾಗಿದ್ದರೂ ಇದೊಂದು ವರ್ಷ ಹೇಗಾದರೂ ಇದ್ದುಕೊಳ್ಳಲಿ ಎಂದು ಸುಮ್ಮನಿದ್ದಾಳೆ. ತಾನು ಒಂದು ವರ್ಷಕ್ಕೆ ಇಲ್ಲಿರಲು ಸಾಕಾಗಿ ಹೊರಟುಬಿಡುವೆನೆಂದು ಅವಳ ಭಾವನೆಯಾಗಿದೆ. ಹಾಗಿರುವಾಗ ತಾನು ಈ ಸಂಫಟನೆ, ಹೋರಾಟ ಅಂತೆಲ್ಲ ಹೊರಡುತ್ತೇನೆ ಅಂದರೆ ಸುಮ್ಮನಿರುತ್ತಾಳೆಯೇ. ಸದ್ಯಕ್ಕೆ ಈ ವಿಚಾರಗಳೆಲ್ಲ ತನ್ನಲ್ಲಿಯೇ ಇರಲಿ ಎಂದು ಸುಮ್ಮನಾಗಿಬಿಟ್ಟಳು.
ಯಾವ ಕೆಲಸಕ್ಕೆ ಇಳಾ ಹಾಸನಕ್ಕೆ ಹೋಗಿರಬಹುದು ಎಂಬ ವಿಚಾರದಲ್ಲಿ ನೀಲಾಳೂ ತಲೆ ಕೆಡಿಸಿಕೊಂಡಿರಲಿಲ್ಲ. ಸಣ್ಣ ಹುಡುಗಿ ಏನೋ ಮಾಡುತ್ತಿರುತ್ತಾಳೆ. ಹೇಗೋ ಅಪ್ಪನ ಸಾವಿನ ದುಃಖ ಮರೆತು ತೋಟ, ಗಿಡ, ಹಸು, ಕರು ಅಂತ ಆಸಕ್ತಿ ತಳೆದು ಓಡಾಡುತ್ತಿದ್ದಾಳಲ್ಲ ಅದಷ್ಟೆ ಸದ್ಯಕ್ಕೆ ಸಾಕು ಅನ್ನುವುದು ನೀಲಾಳ ನಿಲುವಾಗಿತ್ತು.
ನೀಲಾ ಶಾಲಾ ಕೆಲಸಗಳ ನಡುವೆ ಎಲ್ಲವನ್ನು ಮರೆಯುವ ಪ್ರಯತ್ನ ನಡೆಸುತ್ತಿದ್ದಾಳೆ. ಮಕ್ಕಳನ್ನು ಅಡ್ಮಿಷನ್ ಮಾಡಿಕೊಳ್ಳುವುದು, ಆ ಮಕ್ಕಳಿಗೆ ಯೂನಿಫಾರಂ, ಶೂ, ಬೆಲ್ಟ್, ಟೈ ಸಿದ್ದಪಡಿಸಿ ಕೊಡುವುದು, ಶಾಲೆ ಚೆನ್ನಾಗಿ ನಡೆಯಲು ಏನೇನು ಮಾಡಬಹುದು ಅಂತ ವಿಸ್ಮಯನಲ್ಲಿ ಚರ್ಚಿಸುವುದು, ಶಾಲಾ ಕಟ್ಟಡ ಮೇಲೇರುತ್ತಿರುವುದನ್ನು ನೋಡುತ್ತ ಇರುವುದು… ಹೀಗೆ ಬೇರೊಂದು ಪ್ರಪಂಚದಲ್ಲಿ ನೀಲಾ ಮಗ್ನಳಾಗಿಬಿಟ್ಟಿದ್ದಾಳೆ. ಮನೆಯಲ್ಲಿದ್ದರೂ ಶಾಲೆಯದೆ ಮಾತು. ಇನ್ಯಾವ ಮಕ್ಕಳನ್ನು ಶಾಲೆಗೆ ಕರೆತರಬಹುದು. ಮತ್ತೊಬ್ಬ ಶಿಕ್ಷಕರು ಬೇಕಿರುವುದರಿಂದ ಪತ್ರಿಕೆಯಲ್ಲಿ ಆಡ್ ಕೊಡುವುದೇ ಸೂಕ್ತ. ವಿವರವಾಗಿ ತಿಳಿಸಿ ಬಿಟ್ಟಿದ್ದರೆ ಇಷ್ಟವಿದ್ದವರು ಬರುತ್ತಾರೆ ಎಂದು ವಿಸ್ಮಯನಲ್ಲಿ ಚರ್ಚಿಸಿ ಜಿಲ್ಲಾ ಪತ್ರಿಕೆಗಳಲ್ಲಿ ಆಡ್ ಕೊಡಿಸಿದಳು. ಅವಳ ನಿರೀಕ್ಷೆ ಸರಿಯಾಗಿತ್ತು. ಹತ್ತು ಜನ ಅಪಪ್ಲಿಕೇಶನ್ ಹಾಕಿದ್ದರು. ಅವರಲ್ಲಿ ಸೂಕ್ತ ಎನಿಸಿಕೊಂಡಿದ್ದ ಇಬ್ಬರನ್ನು ಆಯ್ಕೆ ಮಾಡಿ, ಇಲ್ಲೆ ಉಳಿಯಲು ವ್ಯವಸ್ಥೆ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದನು ವಿಸ್ಮಯ.
ಶಾಲಾ ಕಟ್ಟಡ ಪೂರ್ತಿಯಾದ ಮೇಲೆ ಸುಂದರೇಶ್ ಮನೆ ಹೇಗೂ ಖಾಲಿಯಾಗುತ್ತದೆ. ಅದೇ ಮನೆಯನ್ನು ಅವರಿಗೆ ಉಳಿಯಲು ಕೊಟ್ಟರಾಯಿತು. ಬೇಕಿದ್ದರೆ ಸುಂದರೇಶ್ ಬಾಡಿಗೆ ತೆಗೆದುಕೊಳ್ಳಲಿ ಎಂಬ ವಿಸ್ಮಯನ ಸಲಹೆಯನ್ನು ಎಲ್ಲರೂ ಒಪ್ಪಿದರು. ಸುಂದರೇಶ್ ಬಾಡಿಗೆ ಬೇಡವೆಂದೇ ನಿರಾಕರಿಸಿದರು. ಅಲ್ಲಿಗೆ ಮತ್ತೊಂದು ಸಮಸ್ಯೆಯೂ ಬಗೆಹರಿದಿತ್ತು. ಆಯ್ಕೆಯಾದವರು ಪುರುಷರಾದ್ದರಿಂದ ಈ ವ್ಯವಸ್ಥೆಗೆ ಒಪ್ಪಿಕೊಂಡರು. ಬಹಳಬೇಗ ಕಟ್ಟಡ ಎದ್ದಿತು. ನೋಡುನೋಡುತ್ತಲೇ ಸ್ಕೂಲ್ ಸಿದ್ಧವಾಗಿಬಿಟ್ಟತು. ಸಧ್ಯಕ್ಕೆ ಒಂದು ಆಫೀಸ್ ರೂಂ ಸೇರಿದಂತೆ ಐದು ಕೊಠಡಿ ಸಿದ್ದವಾದವು. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಕಟ್ಟಡದ ಉದ್ಘಾಟನೆ ನಡೆದು ಹೊಸ ಕಟ್ಟಡದಲ್ಲಿ ಶಾಲೆ ಆರಂಭವಾಯಿತು. ವಿಸ್ಮಯನ ತಲೆಯಲ್ಲಿ ಮತ್ತೊಂದು ಆಲೋಚನೆ ಇತ್ತು. ಶಾಲೆಗೆ ಒಳ್ಳೆ ಹೆಸರು ಬಂದರೆ ದೂರ ದೂರದ ಊರುಗಳಿಂದ ಮಕ್ಕಳು ಸೇರಬಹುದು. ಆ ಮಕ್ಕಳಿಗಾಗಿ ಬೋರ್ಡಿಂಗ್ ವ್ಯವಸ್ಥೆ ಕೂಡ ಮಾಡಬೇಕೆಂದು ನಿರ್ಧರಿಸಿದ.
ರೆಸಾರ್ಟ್ ಕೆಲಸದ ಜೊತೆಗೆ ಒಂದು ಕಟ್ಟಡವನ್ನು ಬೋರ್ಡಿಂಗ್‌ಗಾಗಿ ಕಟ್ಟಿಸಲು ಪ್ರಾರಂಭಿಸಿದ. ರೆಸಾರ್ಟಿನ ಗೋಡೆಗೆ ಹೊಂದಿಕೊಂಡಿದ್ದರೂ ಅದು ಶಾಲೆಯ ಕಡೆಗಿದ್ದು ರೆಸಾರ್ಟ್‌ನಿಂದ ಬೇರ್ಪಡುವಂತೆ ಪ್ಲಾನ್ ಮಾಡಿದ್ದ. ರೆಸಾರ್ಟ್‌ಗೆ ಹೋಗುವ ದಾರಿ ಶಾಲೆ ಇರುವ ದಿಕ್ಕಿನಿಂದ ವಿರುದ್ಧದಲ್ಲಿದ್ದು, ಶಾಲೆಗೆ ಯಾವುದೇ ರೀತಿಯೂ ತೊಂದರೆಯಾಗದಂತೆ ಶಾಲೆ, ಬೋರ್ಡಿಂಗ್, ಆಟದ ಮೈದಾನ ಇವಿಷ್ಟು ರೆಸಾರ್ಟ್‌ಗೆ ಎಷ್ಟೇ ಜನ ಬಂದರೂ ಅಲ್ಲಿನವರಿಗೂ ಶಾಲೆಯಿಂದ ಕಿರಿಕಿರಿಯಾಗದಂತೆ ಎರಡರ ಮಧ್ಯ ಎತ್ತರವಾದ ಗೋಡೆ ಎಬ್ಬಿಸಿದ್ದರಿಂದ, ಶಾಲೆಯಿಂದ ರೆಸಾರ್ಟ್‌ಗಾಗಲಿ, ರೆಸಾರ್ಟ್‌ನಿಂದ ಶಾಲೆಗಾಗಲಿ ಯಾವುದೇ ರೀತಿಯ ಅಡಚಣೆಯಾಗುವಂತಿರಲಿಲ್ಲ. ರೆಸಾರ್ಟ್‌ಗೆ ಹೋಗಬೇಕೆಂದರೆ ಶಾಲೆಯ ರಸ್ತೆಯಿಂದ ಒಂದು ಕಿಲೋಮೀಟರ್ ಸುತ್ತಿಕೊಂಡು ಹೋಗುವಂತೆ ರೆಸಾರ್ಟ್ ಮುಂಬಾಗಿಲು ನಿರ್ಮಾಣವಾಗಿತ್ತು.
ಯಾವ ನಗರದ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಶಾಲೆ ಸುಸಜ್ಜಿತವಾಗಿತ್ತು. ತೋಟದ ಕೆಲಸದವರ ಮಕ್ಕಳೇ ಹೆಚ್ಚಾಗಿದ್ದರೂ ಶಾಲೆಯಿಂದಲೇ ಅವರಿಗೆ ಎಲ್ಲ ಅನುಕೂಲ ಮಾಡಿಕೊಟ್ಟದ್ದರಿಂದ ಮಕ್ಕಳೆಲ್ಲ ಶಿಸ್ತಾಗಿ ಬರುತ್ತಿದ್ದು ಕಾನ್ವೆಂಟ್ ಮಕ್ಕಳಂತೆಯೇ ಕಾಣುತ್ತಿದ್ದರು. ಶಾಲೆಯ ಬಗ್ಗೆ ಸುತ್ತಮುತ್ತ ಸುದ್ದೀ ಹರಡಿ ದೂರದೂರುಗಳಲ್ಲಿ ನೆಂಟರಿಷ್ಟರ ಮನೆಗಳಲ್ಲಿ ಮಕ್ಕಳನ್ನು ಬಿಟ್ಟಿದ್ದವರು ತಾವೇ ಸ್ವಇಚ್ಛೆಯಿಂದ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸಲಾರಂಭಿಸಿದರು. ಶಾಲೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ೪೦ ಇದ್ದ ಮಕ್ಕಳ ಸಂಖ್ಯೆ ಎಂಭತ್ತಕ್ಕೆ ಏರಿತು. ಹೊಸದಾಗಿ ಬಂದಿದ್ದ ಶಿಕ್ಷಕರಾದ ಹರೀಶ, ಜೋಸೆಫ್ ಸೇವೆ ಮಾಡುವ ಮನಸ್ಥಿತಿಯವರೇ ಆದ್ದರಿಂದ ತಮ್ಮ ಸಮರ್ಪಣಾ ಮನೋಭಾವದಿಂದ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರು. ಅವರನ್ನು ಕಂಡು ಗಂಗಾಗೂ ಶಾಲೆ ಬಗ್ಗೆ ಪಾಠಪ್ರವಚನ ಬಗ್ಗೆ ಹೆಚ್ಚು ಆಸ್ಥೆ ಮೂಡಿ ಮಕ್ಕಳ ಕಲಿಕೆ ಪ್ರಗತಿ ಸಾಧಿಸತೊಡಗಿತು. ಎಲ್ಲ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದರಿಂದ ಪೋಷಕರಿಗೂ ಸಂತೋಷವಾಯಿತು. ಒಂದು ಒಳ್ಳೆ ಶಾಲೆ ಮಾದರಿ ಶಾಲೆ ಆ ಕುಗ್ರಾಮದಲ್ಲಿ ನಿರ್ಮಾಣವಾಗಿ ಅದೆಷ್ಟೋ ಮಕ್ಕಳು ಬಿಸಿಲು ಮಳೆ ಎನ್ನದೆ ದೂರ ದೂರ ನಡೆಯುವುದು ತಪ್ಪಿತೆಂದು ಈ ಶಾಲೆಗೆ ಖುಷಿಯಿಂದ ಓಡೋಡಿ ಬರುತ್ತಿದ್ದರು.
ಶಾಲೆಯ ರೀತಿನೀತಿಗಳು ಅತ್ಯಂತ ಶಿಸ್ತುಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ಶಿಸ್ತು ಉಲ್ಲಂಘಿಸಬಾರದು ಎಂದು ವಿಸ್ಮಯ ಶಿಕ್ಷಕರಿಗೆ ಕಟ್ಟಿನಿಟ್ಟಾಗಿ ಶರತ್ತು ವಿಧಿಸಿಬಿಟ್ಟಿದ್ದ. ಶಾಲೆ ಎಂದರೆ ಪವಿತ್ರ ಮಂದಿರ ಎಂಬ ಭಾವನೆ ಎಲ್ಲರಲ್ಲಿರಬೇಕು. ಯಾವುದೇ ಮಗು ಶಿಸ್ತು ಮೀರದಂತೆ ಶಿಕ್ಷಕರು ನೋಡಿಕೊಳ್ಳಬೇಕು. ಅಂತಹ ಶಿಸ್ತಿನಿಂದಲೇ ಮುಂದೆ ಆ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಸದಾ ಹೇಳುತ್ತಿದ್ದ. ಶಿಕ್ಷಕರಿಗೂ ಅದು ಸರಿ ಎನಿಸಿತ್ತು. ಇಲ್ಲಿ ಕೆಲಸ ಮಾಡಲು ಎಲ್ಲರಿಗೂ ಉತ್ಸಾಹವಿತ್ತು. ಹೊಸತನ್ನು ಮಾಡುವ ಮನಸ್ಸು ಸದಾ ತುಡಿಯುತ್ತಿತ್ತು. ಶಾಲೆಗೆ ಉತ್ತಮ ಶಿಕ್ಷಕರು ಸಿಕ್ಕಿದರು. ಸ್ವಇಚ್ಛೆಯಿಂದಲೇ ಪರಿಶ್ರಮ ಹಾಕಿ ಶಕ್ತಿ ಮೀರಿ ಕಲಿಸುತ್ತಿದ್ದರು. ಅವರನ್ನೇನು ಯಾರು ಕಾಯಬೇಕಾಗಿರಲಿಲ್ಲ.
ಶಾಲೆಯಲ್ಲಿ ಈ ರೀತಿಯ ಶಿಕ್ಷಣವಿದೆ ಎಂದು ಗೊತ್ತಾದ ಎಷ್ಟೋ ಜನ ಪೋಷಕರು ಮುಂದಿನ ಶೈಕ್ಷಣಿಕ ವರ್ಷದಿಂದ ತಮ್ಮ ಮಕ್ಕಳನ್ನು ದಾಖಲು ಮಾಡುವುದಾಗಿ ತಮಗೆ ಸೀಟು ಕೊಡಬೇಕೆಂದು ಕೇಳಿಕೊಂಡು ಮಕ್ಕಳ ಹೆಸರನ್ನು ನೋಂದಾಯಿಸಿಕೊಂಡರು. ಹಾಗೆ ಬೇರೆ ಬೇರೆ ಊರುಗಳ ಶಾಲೆಗಳಿಂದ ಬರುವ ಮಕ್ಕಳ ಸಂಖ್ಯೆ ಮುಂದಿನ ವರ್ಷ ಹೆಚ್ಚಾಗಬಹುದು. ಅಂತ ಗೊತ್ತಾದ ಮೇಲೆ ಕಟ್ಟಡವನ್ನು ವಿಸ್ತರಿಸಲೇಬೇಕಂದು ವಿಸ್ಮಯ ಮತ್ತೆ ಕಟ್ಟಡ ಕಟ್ಟುವ ಕಾರ್ಯ ಆರಂಭಿಸಿದನು. ಆ ಕುಗ್ರಾಮದಲ್ಲಿ ಶಾಲೆ ಇಷ್ಟೊಂದು ಅಭಿವೃದ್ಧಿ ಹೊಂದಬಹುದು ಅನ್ನೊ ಕಲ್ಪನೆಯೇ ಅಲ್ಲಿ ಯಾರಿಗೂ ಇರಲಿಲ್ಲ. ಒಂದು ಶಾಲೆ ಕಟ್ಟಿ ಬೆಳೆಸುವುದು ಅದೆಷ್ಟು ಕಷ್ಟ ಅಂತ ಗೊತ್ತಿತ್ತು. ಆದರೆ ಶಾಲೆ ಪ್ರಾರಂಭವಾದ ವರ್ಷದಲ್ಲಿಯೇ ಈ ರೀತಿಯ ಪ್ರೋತ್ಪಾಹ ಸಿಗುವುದು ಆಶ್ಚರ್ಯವೇ ಆಗಿತ್ತು. ಸುತ್ತಮುತ್ತ ಒಳ್ಳೆ ಶಾಲೆ ಇಲ್ಲದಿರುವುದು, ಶಾಲೆಯಲ್ಲಿ ಕಲಿಸುವ ರೀತಿ, ಹೊಸ ರೀತಿಯ ಶಿಕ್ಷಣ- ಇದೆಲ್ಲ ಪೊಷಕರನ್ನು ಆಕರ್ಷಿಸಿ ತಮ್ಮ ಮಕ್ಕಳನ್ನೂ ಈ ಶಾಲೆಗೆ ಸೇರಿಸಲು ಕಾರಣವಾಗಿರಬಹುದು.
ಪಾಲಕರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿರುವಾಗ ಅದಕ್ಕೆ ತಕ್ಕಂತೆ ಶಾಲೆ ನಿರ್ಮಿಸಬೇಕು. ಪ್ರಾಢಶಾಲೆಯನ್ನು ಕೂಡ ಪ್ರಾರಂಭಿಸಬೇಕು. ನಂತರ ಸಾಧ್ಯವಾದರೆ ಕಾಲೇಜು ಕೂಡ, ಶಾಲೆ ಮುಗಿಸಿ ಹೊರಬೀಳುವ ವಿದ್ಯಾರ್ಥಿ ತನ್ನ ಸ್ವಂತ ಕಾಲ ಮೇಲೆ ತಾನು ನಿಲ್ಲುವಂತಹ, ಸ್ವತಃ ಸಂಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿರಬೇಕು. ಇದು ಈ ಶಾಲೆಯ ವೈಶಿಷ್ಟ್ಯವಾಗಬೇಕು. ಆ ನಿಟ್ಟಿನಲ್ಲಿ ಈ ಶಾಲೆಗಾಗಿ ಏನೇನು ಮಾಡಬೇಕೋ ಅದನ್ನೆಲ್ಲ ನಿರ್ವಂಚನೆಯಿಂದ ಮಾಡಲು ವಿಸ್ಮಯ ಪಣ ತೊಟ್ಟನು.
ರೆಸಾರ್ಟ್ ಕಡೆ ಗಮನಕ್ಕಿಂತ ಈಗ ಶಾಲೆಯ ಬಗ್ಗೆಯೇ ಹೆಚ್ಚು ಆಸ್ಥೆ ವಹಿಸಿದನು. ಮುಂದೆ ಒಂದು ಒಳ್ಳೆ ಸಂಸ್ಥೆಯಾಗಿ ಈ ಶಾಲೆ ಬೆಳೆಯಬೇಕು, ಇಲ್ಲಿನ ಎಲ್ಲಾ ಮಕ್ಕಳಿಗೂ ಶಾಲೆ ಒಂದು ಒಳ್ಳೆಯ ಭವಿಷ್ಯವನ್ನು ಕಲ್ಪಿಸಿ ಕೊಡುವಂತಿರಬೇಕು. ಅಂತಹ ಬದುಕನ್ನು ಕಟ್ಟಿಕೊಡಲು ಒಂದು ಒಳ್ಳೆ ಪಡೆಯೇ ಸಿದ್ದವಾಗಿದೆ. ಜೋಸೆಫ್‌ರಂತಹ ವಿಭಿನ್ನ ಆಲೋಚನೆ ಉಳ್ಳ, ಸಮರ್ಪಣಾ ಭಾವದಿಂದ ದುಡಿಯುವ, ಅವರಿಗೆ ಜೊತೆಗೂಡಿ ದುಡಿಯುವ ಹರೀಶ್, ಗಂಗಾ ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ನೋವನ್ನು ಮರೆತು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಶಾಲೆಯ ಏಳಿಗೆಗಾಗಿ ದುಡಿಯಲು ಪಣ ತೊಟ್ಟಿರುವ ನೀಲಾ-ಇವರೆಲ್ಲರ ಟೀಮು ನಿಜಕ್ಕೂ ಶಾಲೆಯನ್ನು ಮುನ್ನಡೆಸುತ್ತದೆ. ಅಭಿವೃದ್ಧಿಪಡಿಸಿ ಆ ಮೂಲಕ ಸಮಾಜಕ್ಕೊಂದು ಒಳ್ಳೆಯ ಕೊಡುಗೆ ನೀಡುತ್ತದೆ ಎಂಬ ಆತ್ಮವಿಶ್ವಾಸ ಹಾಗೂ ನಂಬಿಕೆಯಿಂದ ವಿಸ್ಮಯ ಧನ್ಯತೆ ಅನುಭವಿಸಿದ. ತನ್ನ ವೈಯಕ್ತಿಕ ಹಾಗೂ ಯಾರಲ್ಲಿಯು ಹೇಳಲಾರದ ಅವ್ಯಕ್ತ ನೋವು, ಬೆಂಗಳೂರಿನಿಂದ ಹೆತ್ತವರಿಂದ ದೂರವಾಗಿ ಇಷ್ಟು ದೂರ ರೆಸಾರ್ಟ್ ನೆವ ಹೇಳಿ ಬಂದಾಗಿದೆ. ಇಲ್ಲಿನ ಬದುಕು ಹೇಗೋ ಏನೋ ಅಂದುಕೊಂಡಿದ್ದವನಿಗೆ ಇಂತಹ ಅಭೂತಪೂರ್ವ ಸ್ವಾಗತ, ಸಮಾಜದಲ್ಲಿ ಮನ್ನಣೆ, ಗಣ್ಯವ್ಯಕ್ತಿ ಎನಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ಅವನ ಬದುಕಿನಲ್ಲಿ ಹೊಸ ಬಾಗಿಲು ತರೆದಂತಾಗಿತ್ತು. ಇದನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದ. ಒಟ್ಟಿನಲ್ಲಿ ಯಾರದೊ ಬಾಳಿನ ಅಪಶೃತಿ ಒಂದು ಒಳ್ಳೆಯ ಕಾರ್ಯಕ್ಕೆ ಸ್ಫೂರ್ತಿನೀಡಿತ್ತು. ಅಲ್ಲಿ ಸಿಗದ ಮನಶ್ಶಾಂತಿ ವಿಸ್ಮಯನಿಗೆ ಇಲ್ಲಿ ಸಿಕ್ಕಿತು.
ರೆಸಾರ್ಟ್ ಕೆಲಸ ನಿಧಾನವಾಗಿ ಸಾಗುತ್ತಿತ್ತು. ಆದರೆ ಶಾಲೆಯ ಕೆಲಸ ಭರದಿಂದ ಸಾಗಿತ್ತು. ಇಲ್ಲಿಗೆ ಬರುವಾಗ ರೆಸಾರ್ಟ್ ಮಾಡಬೇಕು ಎಂಬ ಉದ್ದೇಶ ಮಾತ್ರ ಹೊತ್ತು ಬಂದಿದ್ದ ವಿಸ್ಮಯ ಬೆಂಗಳೂರಿನಿಂದ. ತನ್ನವರಿಂದ ದೂರ ಇರಬೇಕು, ಯಾವುದಾದರೊಂದು ಬಿಸಿನೆಸ್ನಲ್ಲಿ ಮಗ್ನನಾಗಬೇಕು ಎಂದು ಆಲೋಚಿಸಿದಾಗ ಮನೆತನದ ಹೊಟೇಲ್ ಉದ್ಯಮ ಬಿಟ್ಟರೆ ಮತ್ತೊಂದು ಬಿಸಿನೆಸ್ ಅರಿವಿರಲಿಲ್ಲ. ಪ್ರಕೃತಿಯ ಮಡಲಿನಲ್ಲಿ, ಪ್ರಶಾಂತವಾಗಿ ಇದ್ದು ಯಾವುದಾದರೂ ಜೀವನೋಪಾಯಕ್ಕೆ ಮಾಡಲೇಬೇಕೆಂದಾಗ ರೆಸಾರ್ಟ್ ಮಾಡುವ ಆಲೋಚನೆ ಹೊಳೆದದ್ದು.
ತಂದೆಯೂ ಈ ಯೋಜನೆಗೆ ಸುಲಭವಾಗಿ ಒಪ್ಪಿದ್ದರಿಂದ ವಿನಾಯಕನ ಸಹಕಾರದಿಂದ, ಇಲ್ಲಿ ಜಾಗ ಕೊಳ್ಳುವಂತಾಗಿತ್ತು. ಜಾಗ ಕೊಳ್ಳುವಾಗ ಸುಂದರೇಶರು ಮೋಹನನ ಕನಸುಗಳ ಬಗ್ಗೆ ಹೇಳಿ, ವಿಷಾದದಿಂದಲೇ ಜಾಗದ ಜೊತೆಗೆ ಮೋಹನನ ಕನಸುಗಳನ್ನು ಮಾರುತ್ತಿದ್ದೇವೆ ಎಂದಾಗಲೇ ಶಾಲೆಯನ್ನು ತಗೆಯುವ ಆಲೋಚನೆ ಹುಟ್ಟಿದ್ದು, ಸಣ್ಣದಾಗಿ ಪ್ರಾರಂಭ ಮಾಡಬೇಕು ಎಂದುಕೊಂಡಿದ್ದು- ಆದರೆ ಅದು ರೆಸಾರ್ಟ್ ಆಸೆಯನ್ನು ಮೀರಿಸಿ ಶಾಲೆಗೆ ತನ್ನ ಹೆಚ್ಚು ಆಸಕ್ತಿ ಬೆಳೆಯುತ್ತದೆ ಎಂದು ಭಾವಿಸಿರಲೇ ಇಲ್ಲ. ಈಗ ಶಾಲೆಯೇ, ಶಾಲೆಯ ಬಗ್ಗೆಯೇ ಹೆಚ್ಚು ಹೆಚ್ಚು ಆಸೆ ಹುಟ್ಟುತ್ತಿದೆ. ಇಲ್ಲಿ ರೆಸಾರ್ಟ್‌ಗಿಂತ ಶಾಲೆಯ ಅಗತ್ಯವೇ ಹೆಚ್ಚಾಗಿದೆ. ರೆಸಾರ್ಟ್‌ನಿಂದ ಎಲ್ಲೋ ಕೆಲ ಜನ ಬಂದು ಎಂಜಾಯ್ ಮಾಡಿ ಹೋಗಬಹುದು. ಆದರೆ ಶಾಲೆಯಿಂದ ನೂರಾರು ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ. ಭಾವಿ ಪ್ರಜೆಗಳ ಭವ್ಯ ಭವಿಷ್ಯ ನಿರ್ಮಿಸುವ ಅವಕಾಶ ನನ್ನದಾಗುತ್ತಿದೆ. ಇಲ್ಲಿ ಹೆಚ್ಚು ಸುಖ ಎನಿಸುತ್ತಿದೆ. ಎಲೆಲ್ಲ ಕಳೆದುಕೊಂಡಿದ್ದ ನೆಮ್ಮದಿ ನನಗೆ ಇಲ್ಲಿ ಸಿಗುವಂತಾಯಿತೇ ಎಂದುಕೊಂಡ ವಿಸ್ಮಯ. ಜೋಸೆಫ್ ಡಿಗ್ರಿ ಮಾಡಿದ್ದು ಶೈಕ್ಷಣಿಕ ರಂಗದ ಪ್ರಗತಿಗಾಗಿ ನೂರಾರು ಕನಸುಗಳನ್ನು ಕಾಣುತ್ತಿದ್ದನು. ಮಕ್ಕಳಿಗೆ ಬರೀ ಪುಸ್ತಕದ ಪಾಠ ಮುಂದಿನ ಬದುಕಿಗೆ ನೆರವಾಗಲಾರವು. ಅವರ ಬದುಕನ್ನು ಕಟ್ಟಿಕೊಡುವಂತಹ ಕೆಲಸ ಈ ಹಂತದಿಂದಲೇ ಆಗಬೇಕೆಂದು ಬಯಸುತ್ತಿದ್ದ ಜೋಸೆಫ್ ವಿಸ್ಮಯನೊಂದಿಗೆ ಮಾತನಾಡಿ ಓದುವ ಜೊತೆ ಜೊತೆಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ಸ್ವಾವಲಂಬನೆಯ ಬದುಕನ್ನು ವಿದ್ಯಾರ್ಥಿ ಜೀವನದಲ್ಲಿಯೇ ಹಣಗಳಿಸುವ ವ್ಯವಸ್ಥೆಯನ್ನು ಶಾಲೆಯಲ್ಲಿ ಅಳವಡಿಸೋಣ. ಇಡೀ ದಿನ ಮಕ್ಕಳು ಪಾಠ ಕಲಿಯಬೇಕಿಲ್ಲ. ಪಾಠ ಕಲಿತು ಉಳಿದ ಸಮಯವನ್ನು ಇಂತಹ ಕೆಲಸದಲ್ಲಿ ಮಕ್ಕಳನ್ನು ತೊಡಗಿಸೋಣ ಎಂದು ಒಪ್ಪಿಸಿದರು.
ಆಟ ಪಾಠದ ಜೊತೆಗೆ ದುಡಿಮೆಗೆ ಹಚ್ಚುವ ವಿಧಾನಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲು ಸಕಲ ಸಿದ್ದತೆ ಮಾಡಿಕೊಂಡರು. ಯಾವ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅಂತಹ ಕೆಲಸವನ್ನು ಆರಿಸಿಕೊಳ್ಳಲು ಸ್ವತಂತ್ರ ಕೊಡಲಾಯಿತು. ವ್ಯವಸಾಯ ಮಾಡುವ ಆಸಕ್ತಿ ಇರುವ ಮಕ್ಕಳಿಗಾಗಿಯೇ ಒಂದು ಎಕರೆ ಜಾಗ ಬಿಟ್ಟು ಕೊಡಲಾಯಿತು. ಅವರ ಸಹಾಯಕ್ಕಾಗಿ ತೋಟಗಾರಿಕೆ ಬಲ್ಲ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲಾಯಿತು. ಮರಗೆಲಸ, ಕರಕುಶಲತೆ, ಟೈಲರಿಂಗ್, ಸಂಗೀತ, ನೃತ್ಯ ಹೀಗೆ ಎಲ್ಲಾ ರೀತಿಯ ಕಲಿಕೆಯನ್ನು ಹಂತ ಹಂತವಾಗಿ ಶಾಲೆಯಲ್ಲಿ ಅಳವಡಿಸಿಕೊಳ್ಳಲು ಸಿದ್ದತೆ ನಡೆಸಿದರು. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಲಿಯುತ್ತಲೇ ಯಾವುದಾದರೊಂದು ವಿಚಾರದಲ್ಲಿ ಪರಿಣತಿ ಪಡೆಯಲು ಮಕ್ಕಳಿಗೆ ಕಡ್ಡಾಯ ಹೇರಲು, ಆ ಮೂಲಕ ಮಕ್ಕಳಲ್ಲಿ ದುಡಿಯುವ ಪ್ರವೃತ್ತಿ ಬೆಳೆಸಲು ಯೋಜನೆ ಹಾಕಿಕೊಳ್ಳಲಾಯಿತು. ಅಲ್ಲಿ ಕಲಿತು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಗಳಿಸುವ ದಾರಿಯನ್ನು ಕೂಡ ಕಂಡುಕೊಳ್ಳಲು ಈ ಯೋಜನೆ ನೆರವು ನೀಡುವುದು ಈ ಶಾಲೆಯ ವಿಶಿಷ್ಟತೆಯಾಯಿತು. ಜೋಸೆಫರ ಜೊತೆ ಜೊತೆಗೆ ನೀಲಾ, ಹರೀಶ್, ಗಂಗಾ ತಮ್ಮ ಸಹಕಾರ ನೀಡಿ, ಜೋಸೇಫನ ಕನಸುಗಳಿಗೆ ನೀರೇರೆದರು.
*****