ಹ್ಯಾಂಗ ಬಳಕಿ ಮಾಡಬೇಕಣ್ಣಾ
ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ ||ಪ||
ಹ್ಯಾಂಗ ಬಳಕಿ ಮಾಡಬೇಕು
ಹಂಗು ಹರಿದು ನಿಂತ ಮೇಲೆ
ಬಂಗಿ ತಂಬಾಕ ಸೇದುವ ಮರುಳ
ಮಂಗ್ಯಾಗಂಜಿದ ಮೇಲೆ ||೧||
ಪಡೆದ ತಂದೆ ತಾಯಿ ಯಾರಣ್ಣಾ
ದುಡಿದುಡಿದು ಸತ್ತರೆ
ಮಡದಿ ಮಕ್ಕಳ ಪರವೆ ಇಲ್ಲಣ್ಣಾ
ಮಡದಿ ಮಕ್ಕಳ ಪರವೆ ಇಲ್ಲ
ಒಡೆದು ಹೇಳುವ ಮಾತು ಅಲ್ಲ
ಬಿಡದೆ ಶರೆಯ ಶೇಂದಿ ತಂದು
ಸಿಡದ ಬೀಳುವ ಹಾಂಗ ಕುಡಿದು ಬಳಿಕ ||೨||
ಪುಂಡರಾಗಿ ತಿರುಗುತಾರಣ್ಣಾ
ಬಂಡಾಟ ಕೇಳಿನ್ನ ಹೆಂಡ ಹೇಸಿಕಿ ನಾಚಿಕಿಲ್ಲಣ್ಣಾ
ಹೆಂಡ ಹೇಸಿಕಿ ನಾಚಿಕಿಲ್ಲಾ
ಬಂಡ ಬಂಡರು ಕೂಡಿಕೊಂಡು
ಗಂಡರಿಲ್ಲದ ಮನಿಯೊಳಗೆ
ರಂಡಿಗೂಳು ಉಂಡಮ್ಯಾಲೆ ||೩||
ದೇಶದೊಳಗೆ ಹೇಸಿ ಕಾಣಣ್ಣಾ ತಾ
ಸೋಸಿ ನೋಡಲು ಘಾಸೆಪಾಸೆಗಳಾಗತಾವಣ್ಣಾ
ಘಾಸೆಪಾಸೆಗಳಾಗತಾವ
ಮೋಸ ಮೊದಲಾದಷ್ಟು ಕೇಳುವ
ವಾಸು ಶಿಶುನಾಳಧೀಶನಲ್ಲೆ
ಘಾಸಿಯಾಗ ಪಾರನಾಗದೆ ||೪||
*****