ಪಣತಿಯಿದೆ
ಎಣ್ಣೆಯಿದೆ
ಬತ್ತಿಯಿದೆ
ಕಡ್ಡಿಯಿದೆ!
ದೀಪ ಹಚ್ಚುತ್ತಿಲ್ಲ ನಾ…
ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ??
ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ,
ಜಗಮಗಿಸುವ ಚಿನಕುರುಳಿ,
ದಾರಿದೀಪಗಳಿವೆಯೆಂದೇ??
ಎಲ್ಲ ಇದ್ದು,
ಇಲ್ಲದವನಂತೆ,
ಎದ್ದು ದೀಪ ಮುಡಿಸುತ್ತಿಲ್ಲ ನಾ…
ಇಲ್ಲಿದ್ದು ಎದೆಗೊದೆಯಲಾರದೆ,
ವಿಲಿ ವಿಲಿ ಒದ್ದಾಡಿ… ಒದ್ದಾಡಿ…
ಯುಗ ಯುಗಗಳೇ ಉರುಳಿದವು!
ಇದೇ ಹೊಲೆಗೇರಿಲಿ ನನ್ನಪ್ಪ, ತಾತ, ಮುತ್ತಾತರೂ…
ತರತರಗುಟ್ಟಿ,
ಕತ್ತಲ ಕೂಪದಲಿ,
ಕಡು ತಾಪದಲಿ,
ಹಪಹಪಿಸಿ,
ಶತಶತಮಾನಗಳ ನೂಕಿದರು!!!
ಅಪಮಾನಗಳ ಅಳೆ ಅಳೆದು,
ಅಜ್ಞಾನವದ್ದು,
ಕಜ್ಜಿ ನಾಯಿ, ಹಂದಿ, ಇಲಿ, ಹೆಗ್ಗಣ,
ತಿಗಣೆ, ಸುಕ್ಕಾಡಿ, ನೊಣಗಳ ಜತೆ ಜತೆಲಿ,
ಬಿದ್ದ ಪಕ್ಕೇಲಿ, ಬಿದ್ದ ಪರಿಗೇ…
ಬೆಚ್ಚಿ ಬಿದ್ದೆ!
ಗಡ್ಡಕ್ಕೆ ಕಡ್ಡಿ ಕೊರೆದೆ…
ಹಚ್ಚಿದೆ ಹೊಲಗೇರಿಲಿ ದೀಪ
ಪಾಪ! ದೀಪಕ್ಕೇನು ಗೊತ್ತು?
ಪಣತಿ ಕುಂಬಾರಣ್ಣನದು…
ಎಣ್ಣೆ ಗಾಣಿಗರನೆಂದು…
ಬತ್ತಿ ವಕ್ಕಲಿಗನೆಂದು…
ಕಡ್ಡಿ ವೈಶ್ಯನದೆಂದು…
ಅಳುಕೆ??…
ಸೂರ್‍ಯಸ್ತಮಾನದ ಬೆಳಕೇ…
ವಿಶ್ವ ಬೆಳಗಬಲ್ಲೆಯಾ??
ಕಿಡಿ ಕಿಡಿಯಿಂದಲ್ಲವೇ?
ವಿಶ್ವ ಸುಟ್ಟು, ಸುರ್‍ಮಾಂಡ್ಲವಾಗಿದ್ದು, ಮರೆತ್ತಿಲ್ಲ ಸಾಕು!
ಕಡ್ಡಿ, ಗುಡ್ಡನಾ ಸುಡುವಾಗ-
ದೀಪ ಜಗವ ಬೆಳಗುವುದು!
*****