ಪ್ರಿಯ ಸಖಿ,
ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬಾಯಿಂದ ಜಾರಿ ಅನಾಹುತವನ್ನೋ ವಿಷಮ ಸ್ಥಿತಿಯನ್ನೋ ತಂದೊಡ್ಡುವ ಮಾತಿಗಳಿರುವಂತೆಯೇ ವ್ಯಕ್ತಿಗೆ ತಕ್ಕಂತೆ ಕೆಲವೊಮ್ಮೆ ಆಡಬೇಕಾಗಿದ್ದ ಮಾತುಗಳು ಹೊರಬರದೇ ಸಂಬಂಧಗಳು ಹರಿದು ಹೋಗಿ ಮತ್ತೆಂದೂ ಮನಸ್ಸುಗಳು ಒಂದಾಗದ ಹಂತವನ್ನು ತಲುಪಿಬಿಡುವ ಸಾಧ್ಯತೆಯೂ ಉಂಟು.
ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ನೋಡಿದಾಗಲೆಲ್ಲಾ ಅವರ ಬಗೆಗೆ ಮೂಡುತ್ತಿದ್ದ ಭಾವನೆಗಳನ್ನು ಅವರಿಗೆ ಹೇಳಲಾಗದೇ ಅವರು ಸತ್ತ ನಂತರ ಪರಿತಪಿಸುವಂತಾಗುವುದು. ಕಿತ್ತುಹೋಗುತ್ತಿರುವ ಸಂಬಂಧದ – ಕೊಂಡಿಯೊಂದು ಸಣ್ಣದೊಂದು ಸಂತೈಸುವಿಕೆ, ಕ್ಷಮಿಸುವಿಕೆಯಿಂದ, ಮಾತಿನಿಂದ ಗಟ್ಟಿಗೊಳ್ಳುವುದಾದಲ್ಲಿ ಆ ಮಾತನಾಡದೇ ಸಂಬಂಧ ಕಿತ್ತು ಹೋದ ನಂತರ ವ್ಯಥೆಪಡುವುದು. ಅವರು ಹೊರಟು ಹೋದರೆ ಮತ್ತೆ ಎಂದೆಂದಿಗೂ ಬರುವುದೇ ಇಲ್ಲ. ಹೋಗಬೇಡಿ ಎಂದು ಬಾಯಿ ತುದಿವರೆಗೆ ಬಂದ ಮಾತನ್ನು ಆಡಲಾರದಂತೆ ತಡೆಯುವುದು ಯಾವುದು ಎಂದು ಯೋಚಿಸಿದರೆ, ಹೆಚ್ಚಿನ ಬಾರಿ ಅಹಂಕಾರವೇ ಕಾರಣವಾಗಿರುತ್ತದೆ. ತನ್ನ ನೈಜ ಭಾವನೆಗಳನ್ನು ಅವರ ಮುಂದೆ ಅರುಹಿ ಬಿಟ್ಟರೆ ತಾನು ಚಿಕ್ಕವನಾಗಿಬಿಡುತ್ತೇನೆ. ಹೀಗಾಗಿ ಏನೂ ಹೇಳುವುದೇ ಬೇಡ ಎಂದು ತೀರ್ಮಾನಿಸಿ ತಾನೇ ದೊಡ್ಡವನು, ಮಹಾನ್ ಎಂಬ ಅಹಮ್ಮಿನ ಮುಖವಾಡವನ್ನು ತೊಟ್ಟುಕೊಂಡು ತನಗೆ ತಾನೇ ದೊಡ್ಡವನಾಗಿ ಬಿಟ್ಟೆ ಎಂದು ಭ್ರಮಿಸಿಕೊಳ್ಳುತ್ತಾನೆ ವ್ಯಕ್ತಿ.
ಸಖಿ, ಆದರೆ ಒಳಿತನ್ನು ಒಳಿತೆಂದು, ಹಿರಿಯದನ್ನು ಹಿರಿದೆಂದು ಸಂಬಂಧಗಳ ಕೊಂಡಿಯನ್ನು ಭದ್ರಪಡಿಸಲು ಕೆಲವೊಮ್ಮೆ ಆಡಲೇಬೇಕಿರುವ ಮಾತನ್ನು ಕಾಲ ಮೀರಿ ಹೋಗುವ ಮೊದಲು ಆಡಿಬಿಟ್ಟರೆ ನಾವು ಕಳೆದುಕೊಳ್ಳುವುದೇನು? ನಂತರ ಮತ್ತೆಂದೂ ಅಂತಹ ಅವಕಾಶ ಸಿಕ್ಕದೇ ಹೋಗಿಬಿಡಬಹುದು. ಆಗ ಪಶ್ಚಾತ್ತಾಪವೂ ಬೆಲೆಯಿಲ್ಲದ್ದಾಗಿ ಬಿಡುತ್ತದೆ. ಸಖಿ, ಆಡಬೇಕೆಂದಿರುವ ಮಾತುಗಳನ್ನು, ಅದರಿಂದ ಮತ್ತಷ್ಟು ಒಳಿತೇ ಆಗುವುದಾದರೆ, ಸಮಯ ಮೀರುವ ಮುನ್ನ ಆಡಿಬಿಡೋಣ ಅಲ್ಲವೇ?
*****