ಇಲ್ಲಿ ಹರಿಹರರ ಪರದಾಟ
ಇಂದ್ರಾದಿಗಳ ಬಯಲಾಟ
ಬಂಡಾಟಗಳು ನಡೆಯುತ್ತಿವೆ
ಹಳಸಿ ಹಿಸಿದ ದಾರಗಳ ಸುತ್ತಿಕೊಂಡು
ಕಪ್ಪೆ ವಟಗುಟ್ಟುತ್ತಿವೆ
ನರಿತಂತ್ರ ಮಂತ್ರಿಸುತಿವೆ
ಟ್ರೇಡು ಮಾರ್ಕುಗಳ ಬಳಿದ
ಬಕಧ್ಯಾನ ಸಾಗಿದೆ ಮೀನ ಮಂದೆ ಮುಂದೆ
ಮಡಿ ಮಾಡಿ ಮಾಡಿ ಮೈ ಜಿಡ್ಡುಗಟ್ಟಿದೆ
ಒಳಗೂಡು ಹುಳಹತ್ತಿದೆ
ಪೀಠಗಳಡಿ ಇಲಿ ಹೆಗ್ಗಣಗಳ ರಾಜ್ಯಭಾರ ನಡೆದಿದೆ
ಹಳೆ ಹೆಬ್ಬೊತ್ತಿಗೆಗಳಿಗೆ ಗೆದ್ದಲು ಹತ್ತಿದೆ
ನೆಮ್ಮಿದ ಬಳ್ಳಿ ಬಾಡಿ ಒಣಗಿ ಜೋತಿದೆ
ಅದನ್ನು ನೆಮ್ಮಿದರಂತೂ ಮಣ್ಣೇಗತಿ
ಆಸರೆಗೆಂದು ಗುಡಿ ಹೊಕ್ಕರೆ
ಜೀರ್ಣವಾಗಿ ಕುಸಿದು ಕಲ್ಲು
ತಲೆ ಮೇಲೆ ಬಿದ್ದು ಸಮಾಧಿಯಾದೀತೆಂಬ ಭಯ
ನಂಬಿಕೆಗೆ ಅಂಬರದಿಂಬು ಬೇಕು
ಆಕಾಶದವಕಾಶ ಬೇಕು
ಭೂಮಿಯ ಭಾರಬೇಕು
ಗ್ರಹ ತಾರೆಗಳನಂತತೆ ಬೇಕು
ವಿಶ್ವಗಳನೊಳಗೊಂಡ ಬೇರು ಬುಡ
ಕೈಕಾಲು, ಆಳ ಅಗಲ, ಏರು-ಪಾರ ಬೇಕು
ಅಂಥದೇನಾದರೂ ಇದೆಯೇ? ಇದ್ದರೆ
ಅಳವಿಗಳವಡದುದನ್ನು
ನಂಬಬೇಕು ಹೇಗೆ?
(೨೬-೨-೭೬)
*****