ಪ್ರಿಯ ಸಖಿ,
ದೂರದರ್ಶನವೆಂಬ ಮೂರ್ಖರ ಪೆಟ್ಟಿಗೆ ಮನೆಗಳಿಗೆ ಧಾಳಿಯಿಟ್ಟಾಗಿನಿಂದ ಮನೆಮಂದಿಯ ಊಟ, ತಿಂಡಿ ಎಲ್ಲ ಅದರ ಮುಂದೆಯೇ! ಹಲವಾರು ಕಾರಣಗಳಿಗೆ ಅದು ಮೂರ್ಖರ ಪೆಟ್ಟಿಗೆಯೇ ಆದರೂ ಎಲ್ಲೋ ನಡೆದ ಘೋರವನ್ನು, ದುರಂತವನ್ನು ಇದ್ದದ್ದು ಇದ್ದಂತೆ ನಮ್ಮ ಕಣ್ಣ ಮುಂದೆ ಚಿತ್ರಿಸುವ ಅದರ ಹಿರಿಮೆಯನ್ನು ಮೆಚ್ಚಿಕೊಳ್ಳಲೇಬೇಕು. ಮೊನ್ನೆ, ದೂರದ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ಗಳಿಗೆ ವಿಮಾನ ಢಿಕ್ಕಿ ಹೊಡೆದು ಆ ಬೃಹತ್ ಕಟ್ಟಡಗಳು ಹಂತ ಹಂತವಾಗಿ ನೆಲಕಚ್ಚುವುದನ್ನು ಕಂಡು ಬೆದರಿರುವ ಜನ, ಕಟ್ಟಡದೊಳಗಿನಿಂದ ಸಹಾಯಕ್ಕಾಗಿ ಯಾಚಿಸುತ್ತಾ ಕೈಚಾಚಿ ಗಾಬರಿಯಿಂದ ಕಿರುಚಿತ್ತಿರುವ ಮಂದಿ, ಕ್ಷಣಾರ್ಧದಲ್ಲಿ ತಮ್ಮ ತಪ್ಪಿಲ್ಲದೆಯೂ ರುಂಡ, ಮುಂಡ, ಕೈಕಾಲು ಬೇರ್ಪಟ್ಟು ರಕ್ತಸಿಕ್ತ ದೇಹದಲ್ಲಿ ಮುದ್ದೆಯಾಗಿ ಬಿದ್ದ ಪ್ರಾಣವಿರುವ, ಪ್ರಾಣಹೋದ, ಕುಟುಕು ಪ್ರಾಣದ ಸಾವಿರಾರು ದೇಹಗಳನ್ನು ಟಿ.ವಿ. ಪರದೆಯ ಮೇಲೆ ಕಂಡಾಗ ಹೃದಯ ದ್ರವಿಸಿ ಹೊಟ್ಟೆ ಕಿವುಚಿದಂತಾಗಿ ಕಂಗಳಲ್ಲಿ ನೀರು ತಂದುಕೊಂಡವರದೆಷ್ಟೋ ಮಂದಿ ಕೈಯಲ್ಲಿರುವ ತುತ್ತು ಬಾಯಿಗೆ ಹೋಗದೇ ಮುಷ್ಕರ ಹೂಡುತ್ತದೆ. ಏನೋ ತಳಮಳ, ಸಂಕಟ, ಪ್ರಶ್ನೆಗಳ ಸರಮಾಲೆ ಅಯ್ಯೋ ಇದೆಲ್ಲಾ ಏನಾಗುತ್ತಿದೆ? ಅಮೆರಿಕದ ಅಡಳಿತ ನಡೆಸುತ್ತಿರುವ ಕೆಲವೇ ಕೆಲವು ತಲೆಗಳು ತಮ್ಮ ಅಸ್ತಿತ್ವ ಎಲ್ಲೆಡೆ ಸ್ಥಾಪಿಸಿ ಪ್ರತಿಷ್ಠೆ ಮೆರೆಯಲು ಸಲ್ಲದ ಯೋಜನೆಯನ್ನು ಹೂಡಿ ತಪ್ಪು ಹೆಜ್ಜೆ ಇಟ್ಟಿರಬಹುದು. ಅದಕ್ಕೆಂದೇ ಈ ಹಕ್ಕು ಆ ರಾಕ್ಷಸರಿಗೆ ಯಾರು ಕೊಟ್ಟರು ? ಕ್ಷುಲ್ಲಕ ಕಾರಣಗಳಿಗಾಗಿ ಜೀವ ಬಸಿಯುವಷ್ಟು ಮಾನವತ್ವ ತುಂಬಿದವರಾರು ? ಇತ್ಯಾದಿ.
ಕಾಶ್ಮೀರ ಕಣಿವೆಯಲ್ಲಿ ನಿತ್ಯವೂ ನಡೆಯತ್ತಿರುವ ನರಮೇಧ, ಜಮ್ಮು ಕಾಶ್ಮೀರದ ವಿಧಾನ ಸೌಧದ ಬಳಿ ಮೊನ್ನೆಯಷ್ಟೇ ನಡೆದ ಹತ್ಯಾಕಾಂಡ, ಬಾಂಬ್ ಧಾಳಿಗಳಿಂದ ನಿರಂತರ ಸಾವು ನೋವಿಗೀಡಾಗುತ್ತಿರುವ ಮುಗ್ಧ ಜನರು ಪ್ರತಿಷ್ಠೆ ಮೆರೆಯಲು ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಅಸಂಖ್ಯಾತ ಸಾವು, ನಮ್ಮ ಸುತ್ತಮುತ್ತಲೂ ನಿತ್ಯವೂ ನಡೆಯುತ್ತಿರುವ ಕೊಲೆ, ಇಂತಹವುಗಳನ್ನು ಕಂಡಾಗ ನಾವಿರುವುದು, ಬಾಳುತ್ತಿರುವುದು ಮನುಷ್ಯರ ಮಧ್ಯೆಯೇ? ಸ್ವಾರ್ಥ, ಸ್ವಹಿತಗಳ ಮುಂದೆ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ದಿಗಿಲಾಗುತ್ತದೆ.
ಸಖಿ, ಮಾನವ ಏನೆಲ್ಲವನ್ನು ಕಲಿತಿರಬಹುದು, ತಿಳಿದಿರಬಹುದು, ಏನೇನೆಲ್ಲವನ್ನೂ ಸೃಷ್ಟಿಸಿರಬಹುದು, ವಿನಾಶ ಮಾಡಬಹುದು. ಅದರೆ ಸತ್ತು ಮಲಗಿರುವವನಿಗೆ ಮತ್ತೆ ಜೀವ ತುಂಬುವ ಕಲೆ ಅವನಿಗೆ ಗೊತ್ತಿಲ್ಲ. ಹೀಗಿದ್ದಾಗ ಅಮೂಲ್ಯವಾದ ಜೀವವೊಂದುನ್ನು ತೆಗೆಯುವ ಹಕ್ಕು ಅವನಿಗಿಲ್ಲ. ಈ ಸೃಷ್ಟಿಯಲ್ಲಿ ಎಷ್ಟೊಂದು ಅಸಮಾನತೆ, ನ್ಯೂನ್ಯತೆ, ಘೋರಗಳು ಇವೆ. ಆದರೆ ಮಾನವರಿಗೆ ದೊರಕಿರುವ ಈ ಜೀವ ತೆಗೆಯುವ ಕ್ರೂರತೆ ಮಾತ್ರ ಎಲ್ಲಕ್ಕಿಂತಾ ಘೋರವಾದುದು. ಈ ಕುರಿತು ನಿನ್ನ ನಿಲುವೇನು ಸಖಿ?
*****